ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಶ್ರಮ ಅಗತ್ಯ: ಡಿಡಿಪಿಐ

Last Updated 1 ಏಪ್ರಿಲ್ 2021, 12:48 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಕೇವಲ 80 ದಿನ ಬಾಕಿ ಇದೆ. ಶ್ರದ್ಧೆಯಿಂದ ನಿರಂತರ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿ, ‘ಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಕಾಲಹರಣ ಮಾಡಿ ಪರೀಕ್ಷೆಗೆ ಇರುವ 80 ದಿನಗಳನ್ನು ವ್ಯರ್ಥ ಮಾಡಿದರೆ ಮುಂದಿನ ಜೀವನ ಕಷ್ಟವಾಗಲಿದೆ. ಯಾವುದೇ ಸಾಧನೆಗೆ ಶ್ರಮ ಅಗತ್ಯ’ ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬರಲ್ಲೂ ಪ್ರತಿಭೆಯಿದೆ. ಆದರೆ ಅದನ್ನು ಹೊರತರುವ ಪ್ರಯತ್ನ ಆಗಬೇಕು. ಕಲಿಕಾ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ತೇರ್ಗಡೆಯಾಗುತ್ತೇವೆ ಎಂಬ ದೃಢ ವಿಶ್ವಾಸದೊಂದಿಗೆ ಓದಬೇಕು. ಕೋವಿಡ್‌ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿದೆ. ಪರೀಕ್ಷಾ ಸಿದ್ಧತೆಗೆ ಸಮಯಾವಕಾಶ ಕಡಿಮೆಯಿದೆ. ಜತೆಗೆ ಈ ಬಾರಿ ಪಠ್ಯದಲ್ಲಿ ಶೇ 30ರಷ್ಟು ಕಡಿತ ಮಾಡಲಾಗಿದೆ’ ಎಂದು ವಿವರಿಸಿದರು.

‘ಈ ಬಾರಿ ಪ್ರಶ್ನೆಪತ್ರಿಕೆ ಹಿಂದಿನ ಎಲ್ಲಾ ಪರೀಕ್ಷೆಗಳಿಗಿಂತಲೂ ಸುಲಭವಾಗಿರುತ್ತದೆ. ಶ್ರಮಪಟ್ಟರೆ ಖಂಡಿತ ಶೇ 100ರ ಫಲಿತಾಂಶ ಸಾಧನೆ ಮಾಡಬಹುದು. ಪ್ರತಿ ನಿಮಿಷ ವ್ಯರ್ಥ ಮಾಡದೆ ಕಲಿಕೆಯತ್ತ ಗಮನಹರಿಸಿ. ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆಗಳು, ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ’ ಎಂದು ತಿಳಿಸಿದರು.

ಗುಣಾತ್ಮಕತೆಗೆ ಒತ್ತು: ‘ಜಿಲ್ಲೆ ಈ ಬಾರಿ ಶೇ 100ರ ಫಲಿತಾಂಶದ ಸಾಧನೆ ಮಾಡಬೇಕು. ಜತೆಗೆ ಗುಣಾತ್ಮಕತೆಗೆ ಒತ್ತು ನೀಡಬೇಕು. ಶಾಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅಂತರ ಕಾಯ್ದುಕೊಳ್ಳಬೇಕು. ಪರೀಕ್ಷಾ ಸಮಯವಾಗಿರುವುದರಿಂದ ಓದಿನ ಜತೆಗೆ ಆರೋಗ್ಯದ ಕಡೆಯೂ ಗಮನಹರಿಸಿ’ ಎಂದರು.

‘ಕೋವಿಡ್‌ ಹಿನ್ನೆಲೆಯಲ್ಲಿ ಬಿಸಿಯೂಟ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಆದೇಶ ಬಂದರೆ ತಕ್ಷಣ ಆರಂಭಿಸಲಾಗುವುದು. ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಬೇಕು. ಮನೆಯಿಂದ ತರುವ ಊಟವನ್ನು ಸದ್ಯದ ಪರಿಸ್ಥಿತಿಯಲ್ಲಿ ಹಂಚಿ ತಿನ್ನಬಾರದು’ ಎಂದು ಹೇಳಿದರು.

ಕಾಲೇಜಿನ ಉಪ ಪ್ರಾಂಶುಪಾಲ ಸಿ.ಎನ್.ಪ್ರದೀಪ್‌ಕುಮಾರ್‌, ಶಿಕ್ಷಕರಾದ ಸಿ.ಎಂ.ನಾರಾಯಣಸ್ವಾಮಿ, ಮುನಿರಾಜು, ಭಾಗ್ಯಲಕ್ಷ್ಮೀ, ಜಯಂತಿ, ಸುಮಂಗಲಾ, ಕೋಮಲಾ, ಸುಮ, ಮೋಹನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT