ಮಂಗಳವಾರ, ಜೂನ್ 28, 2022
28 °C

ಕಾಡಂಚಿನ ಗ್ರಾಮಸ್ಥರಿಗೆ ಆನೆ ದಾಳಿ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂಗಾರಪೇಟೆ: ತಾಲ್ಲೂಕಿನ ಜನರು ಒಂದೆಡೆ ಕೊರೊನಾ ಸೋಂಕಿಗೆ ತತ್ತರಿಸಿದರೆ, ಮತ್ತೊಂದೆಡೆ ಅರಣ್ಯದ ಅಂಚಿನ ಗ್ರಾಮಸ್ಥರು ಆನೆದಾಳಿ ಭೀತಿಯಲ್ಲೇ ಜೀವನ ದೂಡುವಂತಾಗಿದೆ.

ಸುಮಾರು ಆರು ತಿಂಗಳಿಂದ ತಾಲ್ಲೂಕಿನ ದೋಣಿಮೊಡುಗು, ತೊಪ್ಪನಹಳ್ಳಿ, ಬಲಮಂದೆ, ಗುಲ್ಲಹಳ್ಳಿ, ಬೂದಿಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆನೆ ಹಿಂಡು ರೈತರ ಅಪಾರ ಬೆಳೆ ನಷ್ಟ ಮಾಡಿದೆ.
ದೋಣಿಮೊಡಗು ಪಂಚಾಯಿತಿ ವ್ಯಾಪ್ತಿಯ ಸಾಕರಸನಹಳ್ಳಿ ಗ್ರಾಮದ ಸೀತಬೈರಪ್ಪ ಅವರ ಟೊಮೆಟೊ ತೋಟಕ್ಕೆ ಬುಧವಾರ ರಾತ್ರಿ ದಾಳಿಯಿಟ್ಟಿರುವ ಆನೆಗಳು ಫಸಲಿಗೆ ಬಂದಿರುವ ತೋಟವನ್ನು ಸಂಪೂರ್ಣವಾಗಿ ನಾಶಪಡಿಸಿವೆ.

‘ಸತತವಾಗಿ ಐದು ಬಾರಿ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳು ಸಂಪೂರ್ಣವಾಗಿ ನಾಶಮಾಡಿವೆ. ಲಕ್ಷಾಂತರ ಖರ್ಚು ಮಾಡಿ ಬೆಳೆಸಿದ್ದೆಲ್ಲ ರಾತ್ರೋರಾತ್ರಿ ನೆಲಕಚ್ಚಿದೆ. ಸುಮಾರು 2 ಲಕ್ಷ ನಷ್ಟವಾಗಿದೆ. ಇದಕ್ಕೆ ಯಾರು ಹೊಣೆ' ಎಂದು ಬೈರಪ್ಪ ಪ್ರಶ್ನಿಸಿದರು.

‘ಅರಣ್ಯ ಇಲಾಖೆ ಸಿಬ್ಬಂದಿ ಇದ್ದರೂ ಯಾವುದೇ ಪ್ರಯೋಜನವಿಲ್ಲ. ದಾಳಿ ಮಾಡಿದ ಮೇಲೆ ಸ್ಥಳಕ್ಕೆ ಬರತ್ತಾರೆಯೇ ವಿನಹ ಕಾಡಿನಿಂದ ಹೊರಗೆ ಬರದಂತೆ ತಡೆಯಲು ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.

ಬೆಳೆ ಹಾನಿ ಅಲ್ಲದೆ ಪ್ರಾಣಹಾನಿ ಕೂಡ ಸಂಭವಿಸಿದೆ. ಇದುವರೆಗೂ ಸುಮಾರು 15ಕ್ಕೂ ಹೆಚ್ಚು ಜನರು ಆನೆದಾಳಿಗೆ ಬಲಿಯಾಗಿದ್ದಾರೆ. ರಾತ್ರಿವೇಳೆ ತೋಟದ ಬಳಿ ತೆರಳಲು ಭಯವಾಗುತ್ತೆ. ಎಲ್ಲಿ ಯಾವಗ ಆನೆಗಳು ಎದುರಾಗುವುದೋ ಎನ್ನುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ರೈತ ವೆಂಕಟೇಶಪ್ಪ.

ದಶಕದಿಂದ ಈ ಭಾಗದಲ್ಲಿ ಆನೆ ದಾಳಿ ಸಾಮಾನ್ಯವಾಗಿಬಿಟ್ಟಿದೆ. ಆರಂಭದಲ್ಲಿ ವರ್ಷಕ್ಕೆ ನಾಲ್ಕೈದು ಬಾರಿ ಇತ್ತ ಸಂಚರಿಸುತ್ತಿದ್ದ ಆನೆಗಳು ಆರು ತಿಂಗಳಿಂದ ಇಲ್ಲೇ ನೆಲೆಯೂರಿವೆ.

ಕನಮನಹಳ್ಳಿ ಸಮೀಪ ಗಡಿಯೊಳಕ್ಕೆ ನುಸಳುವ ಆನೆಗಳು ಯರಗೋಳ್, ಬಲಮಂದೆ, ಮೂತನೂರು, ತೊಪ್ಪನಹಳ್ಳಿ ಬೋಡಪಟ್ಟಿ, ಕೆಜಿಎಫ್ ಮೂಲಕ ವಿಕೋಟೆಯತ್ತ ಸಂಚರಿಸುತ್ತವೆ. ಪ್ರತಿಬಾರಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮಾರ್ಗಮಧ್ಯದಲ್ಲಿ ಸಿಗುವ ಅಪಾರ ಬೆಳೆ ನಾಶ ಮಾಡುತ್ತಿವೆ.

ಅರಣ್ಯ ಇಲಾಖೆ ಕೂಡ ಈ ಮಾರ್ಗವನ್ನು ಆನೆ ಕಾರಿಡಾರ್ ಎಂದು ಗುರುತಿಸಿದೆ. ಅಲ್ಲದೆ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ಸರ್ಕಾರ ವನ್ಯಜೀವಿಧಾಮ ಎಂದು ಘೋಷಿಸಿದೆ.

'ವನ್ಯಜೀವಿ ಧಾಮ' ಆದಲ್ಲಿ ಪ್ರಾಣಿಗಳ ಪೋಷಣೆ ಮತ್ತು ಜನರ ಹಾಗೂ ಬೆಳೆ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಈ ಭಾಗದ ರೈತರ ಆರೋಪ.

ಆನೆದಾಳಿ ತಡೆಯಬೇಕು ಎಂದು ಈಚೆಗೆ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ಪ್ರತಿಭಟನೆ ಹಮ್ಮಿ
ಕೊಂಡಿದ್ದೆವು. ಪ್ರತಿಭಟನೆಗೆ ಮುನ್ನವೇ ರೈತ ಮುಖಂಡರ ಬಳಿ ಧಾವಿಸಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೀತಭೈರಪ್ಪ ದೂರಿದರು.

'ಆನೆದಾಳಿಯಿಂದ ಜೀವನವಿಡೀ ಭೀತಿಯಲ್ಲೇ ಜೀವನ ದೂಡುವಂತಾಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರುತ್ತಿಲ್ಲ. ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು