ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರ ಸಬಲೀಕರಣಕ್ಕೆ ಒತ್ತು: ಕೋಚಿಮುಲ್‌ ನಿರ್ದೇಶಕ ಹರೀಶ್‌

ಸಾಲ ವಿತರಣೆ ಕಾರ್ಯಕ್ರಮ
Last Updated 6 ಫೆಬ್ರುವರಿ 2020, 13:42 IST
ಅಕ್ಷರ ಗಾತ್ರ

ಕೋಲಾರ: ‘ಹಾಲು ಉತ್ಪಾದನೆ ಕುಸಿತದಿಂದ ಜಿಲ್ಲೆಯಲ್ಲಿ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಬಲೀಕರಣಕ್ಕೆ ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಕೈಜೋಡಿಸಿವೆ’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಹೇಳಿದರು.

ಕಾಯಕ ಯೋಜನೆಯಡಿ ತಾಲ್ಲೂಕಿನ ಚಿನ್ನಾಪುರ ಗ್ರಾಮದ ಮಹಿಳಾ ಸಂಘಗಳಿಗೆ ಹೈನೋದ್ಯಮ ಚಟುವಟಿಕೆ ನಡೆಸಲು ಇಲ್ಲಿ ಗುರುವಾರ ಸಾಲ ವಿತರಿಸಿ ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೈನುಗಾರಿಕೆಯು ರೈತರ ಜೀವಾಳವಾಗಿದೆ. ಹೈನೋದ್ಯಮ ನಂಬಿ ರೈತರು ಜೀವನ ಸಾಗಿಸುತ್ತಿದ್ದಾರೆ’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರತಿನಿತ್ಯ 11.50 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಆದರೆ, ಇತ್ತೀಚೆಗೆ ಕಾರಣಾಂತರದಿಂದ ಹಾಲು ಉತ್ಪಾದನೆ ಕುಸಿದಿದೆ. ಇದರಿಂದ ಹಾಲು ಉತ್ಪಾದಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನೀರು ಆಶ್ರಿತ ಬೆಳೆ ಬೆಳೆಯಲು ಜಿಲ್ಲೆಯಲ್ಲಿ ನೀರಿಲ್ಲ. ಹೆಣ್ಣು ಸಂಸಾರದ ಕಣ್ಣು ಎಂಬ ಪರಿಕಲ್ಪನೆಯಡಿ ಡಿಸಿಸಿ ಬ್ಯಾಂಕ್‌ ₹ 1 ಲಕ್ಷದವರೆಗೆ ಸಾಲ ನೀಡುತ್ತಿದೆ. ಬ್ಯಾಂಕ್‌ ಈ ರೀತಿ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಸಹಜ. ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೂ ತುಟಿ ಬಿಚ್ಚಿರಲಿಲ್ಲ. ಈಗ ಬ್ಯಾಂಕ್‌ ಎರಡೂ ಜಿಲ್ಲೆಗಳ ಜನರ ಬದುಕಿಗೆ ನೆರವಾಗುವ ಸಾಮರ್ಥ್ಯ ಬೆಳೆಸಿಕೊಂಡಿರುವುದನ್ನು ನೋಡಿ ಕೆಲವರು ಸಹಿಸದೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಡಿಸಿಸಿ ಬ್ಯಾಂಕ್ ಯಾವುದೇ ಭದ್ರತೆಯಿಲ್ಲದೆ ರಾಸುಗಳ ಖರೀದಿಗೆ ಸಾಲ ನೀಡಲು ಮುಂದೆ ಬಂದಿದೆ. ಇದಕ್ಕೆ ಪೂರಕವಾಗಿ ಕೋಚಿಮುಲ್‌ ಆಡಳಿತ ಮಂಡಳಿಯಲ್ಲಿ ಚರ್ಚಿಸಿದಾಗ ನಿರ್ದೇಶಕರು ಸಹಕಾರ ನೀಡಿದರು. ಹಾಲು ಒಕ್ಕೂಟದಿಂದ ಬೇರೆ ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿ ಹಣ ತೆಗೆದು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಲು ತೀರ್ಮಾನ ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

‘ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಎರಡೂ ರೈತರು ಹಾಗೂ ಮಹಿಳೆಯರ ಹಿತ ಕಾಯುವ ಸಹಕಾರಿ ಸಂಸ್ಥೆಗಳು. ನಮ್ಮಲ್ಲಿ ಸಹಕಾರಕ್ಕೆ ಕೊರತೆಯಿಲ್ಲ. ಚಿನ್ನಾಪುರ ಗ್ರಾಮದ ಮಹಿಳಾ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ನಡೆಸಲು ಒಕ್ಕೂಟವು ರೈತರನ್ನು ಅಧ್ಯಯನ ಪ್ರವಾಸ ಕಳುಹಿಸುತ್ತದೆ. ಖಾಸಗಿ ಡೇರಿಗಳಿಗೆ ರೈತರಿಗೆ ಅನುಕೂಲವಿಲ್ಲ. ಕೋಚಿಮುಲ್‌ ನೀಡುವ ಸೌಲಭ್ಯವನ್ನು ಖಾಸಗಿ ಡೇರಿಗಳು ನೀಡಲು ಸಾಧ್ಯವಿಲ್ಲ’ ಎಂದರು.

ಸಾಲ ನೀಡಲ್ಲ: ‘ಬ್ಯಾಂಕ್ ಮಹಿಳೆಯರನ್ನು ನಂಬಿ ಸಾಲ ನೀಡುತ್ತಿದೆ. ಮಹಿಳೆಯರು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಬಡ್ಡಿ ವಿನಾಯತಿ ಸಿಗುತ್ತದೆ. ಸಾಲ ಮರುಪಾವತಿಯಲ್ಲಿ ವಿಳಂಬವಾದರೆ ಬಡ್ಡಿ ಕಟ್ಟುವ ಸಂಕಷ್ಟಕ್ಕೆ ಸಿಲುಕುತ್ತೀರಿ. ಜತೆಗೆ ಸುಸ್ತಿಯಾದವರಿಗೆ ಮುಂದೆ ಮತ್ತೆ ಸಾಲ ನೀಡುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

‘ಸಾಲಕ್ಕೆ ಡಿಸಿಸಿ ಬ್ಯಾಂಕ್, ಠೇವಣಿ ಇಡಲು ವಾಣಿಜ್ಯ ಬ್ಯಾಂಕ್‌ ಎಂಬ ಮನೋಭಾವ ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಬಡ ಜನರ ಬದುಕಿಗೆ ನೆರವಾಗಲು ಡಿಸಿಸಿ ಬ್ಯಾಂಕ್ ಭದ್ರತೆಯಿಲ್ಲದೆ ಸಾಲ ನೀಡುತ್ತಿದೆ. ಹೀಗಾಗಿ ಬೇರೆ ಬ್ಯಾಂಕ್‌ಗಳಲ್ಲಿ ಉಳಿತಾಯದ ಹಣ ಠೇವಣಿ ಇಡುವುದು ಸರಿಯೇ?’ ಎಂದು ಪ್ರಶ್ನಿಸಿದರು.

ಮಹಿಳಾ ಸಂಘಗಳಿಗೆ ತಲಾ ₹ 10 ಲಕ್ಷ ಸಾಲ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣರೆಡ್ಡಿ, ವ್ಯವಸ್ಥಾಪಕ ಅಂಬರೀಷ್, ಮೇಲ್ವಿಚಾರಕಿ ಅಮೀನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT