ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಕಲ್ಯಾಣ ಯೋಜನೆಗೆ ಒತ್ತು ಕೊಡಿ

ವಿಶ್ವ ಜನಸಂಖ್ಯೆ ನಿಯಂತ್ರಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಸಲಹೆ
Last Updated 12 ಜುಲೈ 2021, 13:27 IST
ಅಕ್ಷರ ಗಾತ್ರ

ಕೋಲಾರ: ‘ಜನಸಂಖ್ಯೆ ಹೆಚ್ಚಳದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಆರೋಗ್ಯಕರ ಸಮಾಜದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸಲಹೆ ನೀಡಿದರು.

ಇಲ್ಲಿ ಸೋಮವಾರ ನಡೆದ ವಿಶ್ವ ಜನಸಂಖ್ಯೆ ನಿಯಂತ್ರಣ ದಿನಾಚರಣೆಯಲ್ಲಿ ಮಾತನಾಡಿ, ‘ತಾಯಿ ಹಾಗೂ ಮಗುವಿನ ಆರೋಗ್ಯ ಕಾಪಾಡಬೇಕಾದರೆ ಕುಟುಂಬ ಕಲ್ಯಾಣ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಕುಟುಂಬ ಆರೋಗ್ಯಕರವಾಗಿದ್ದರೆ ಇಡೀ ದೇಶ ಆರೋಗ್ಯವಾಗಿರುತ್ತದೆ’ ಎಂದರು.

‘ಬಾಲ್ಯವಿವಾಹವು ಸಾಮಾಜಿಕ ಪಿಡುಗಾಗಿ ಕಾಡುತ್ತಿದ್ದು, ಬಾಲ್ಯವಿವಾಹ ಮತ್ತು ಬಾಲ್ಯ ಗರ್ಭಧಾರಣೆಯಿಂದ ಅಪೌಷ್ಟಿಕ ಮಕ್ಕಳ ಜನನವಾಗಿ ಮಹಿಳೆಯರು ತೊಂದರೆ ಅನುಭವಿಸಬೇಕಾಗುತ್ತದೆ. ಬಾಲ್ಯವಿವಾಹ ಪ್ರಕರಣ ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಬೇಕು. ಬಾಲ್ಯವಿವಾಹ ನಿರ್ಮೂಲನೆಯಿಂದ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಶಿಶುವಿನ ಲಿಂಗ ಪತ್ತೆಯು ಅಪರಾಧವಾಗಿದ್ದು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು ನಿಯಮಿತವಾಗಿ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಭ್ರೂಣ ಹತ್ಯೆ ತಡೆಯಬೇಕು. ಲಿಂಗ ಪತ್ತೆ ಪರೀಕ್ಷೆ ನಡೆಸುವ ಸ್ಕ್ಯಾನಿಂಗ್‌ ಸೆಂಟರ್‌ಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಿ’ ಎಂದು ಸೂಚಿಸಿದರು.

ಅಭಿವೃದ್ಧಿಗೆ ಶ್ರಮಿಸೋಣ: ‘ರಾಜ್ಯದಲ್ಲಿ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಗಳನ್ನು ಆರಂಭಿಸಲಾಯಿತು. ಜನಸಂಖ್ಯೆ ಹೆಚ್ಚಳದಿಂದ ಸಮಾಜದಲ್ಲಿ ಹಲವು ತೊಂದರೆಗಳಾಗುತ್ತವೆ. ವಸತಿ, ಆರೋಗ್ಯ, ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿ ಡಾ.ಜಗದೀಶ್‌ ಹೇಳಿದರು.

‘ಆರೋಗ್ಯವಂತ ಮಗು ಪಡೆದ ನಂತರ ಮತ್ತೊಂದು ಮಗುವಿಗೆ 3ರಿಂದ 5 ವರ್ಷ ಅಂತರವಿರಬೇಕು. ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡರೆ ದೇಶದ ಅಭಿವೃದ್ಧಿಗೆ ಸೇವೆ ಸಲ್ಲಿಸಿದಂತಾಗುತ್ತದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ’ ಎಂದು ಕಿವಿಮಾತು ಹೇಳಿದರು.

140 ಕೋಟಿ ಜನಸಂಖ್ಯೆ: ‘ವಿಶ್ವದಲ್ಲಿ 780 ಕೋಟಿ ಜನಸಂಖ್ಯೆಯಿದೆ. ಭಾರತದಲ್ಲಿ ಸುಮಾರು 140 ಕೋಟಿ ಜನಸಂಖ್ಯೆಯಿದ್ದು, ವಿಶ್ವದಲ್ಲಿ 2ನೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಜನಸಂಖ್ಯಾ ಸ್ಫೋಟದಿಂದ ಸಂಭವಿಸುವ ಸಮಸ್ಯೆ ತಡೆಯಲು ವಿಶ್ವ ಸಂಸ್ಥೆಯು 1987ರಿಂದ ಪ್ರತಿ ವರ್ಷ ವಿಶ್ವ ಜನಸಂಖ್ಯೆ ದಿನ ಆಚರಿಸುತ್ತಿದೆ’ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್‌ ವಿವರಿಸಿದರು.

‘ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ. ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ’ ಎಂಬುದು ಈ ಬಾರಿಯ ವಿಶ್ವ ಜನಸಂಖ್ಯೆ ದಿನಾಚರಣೆ ಅಭಿಯಾನದ ಘೋಷ ವಾಕ್ಯ. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಅರ್ಹ ದಂಪತಿಗೆ ಕುಟುಂಬ ನಿಯಂತ್ರಣ ಯೋಜನೆ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಜಿಲ್ಲೆಯಲ್ಲಿ ಜುಲೈ 24ರವರೆಗೆ ಜನಸಂಖ್ಯಾ ಸ್ಥಿರೀಕರಣ ಪಾಕ್ಷಿಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲಾ, ಜಿಲ್ಲಾ ಕುಷ್ಠ ರೋಗ ಮತ್ತು ಅಂಧತ್ವ ನಿರ್ಮೂಲನಾಧಿಕಾರಿ ಡಾ.ನಾರಾಯಣಸ್ವಾಮಿ, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮ್ಯ ದೀಪಿಕಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT