ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಿಎಂಎಲ್ ಶೆಡ್‌ನಲ್ಲಿ ಉದ್ದಿಮೆ ಸ್ಥಾಪನೆ

ಕೆಜಿಎಫ್‌: ಡಿಸಿಸಿ ಬ್ಯಾಂಕ್‌ ಮೊಬೈಲ್‌ ಎಟಿಎಂ ಕೇಂದ್ರಕ್ಕೆ ಚಾಲನೆ
Last Updated 9 ಏಪ್ರಿಲ್ 2021, 1:48 IST
ಅಕ್ಷರ ಗಾತ್ರ

ಕೆಜಿಎಫ್‌: ಬಿಜಿಎಂಎಲ್‌ಗೆ ಸೇರಿದ ಖಾಲಿ ಶೆಡ್‌ ಮತ್ತು ಕಟ್ಟಡಗಳನ್ನು ಪಡೆದು ಅದರಲ್ಲಿ ಕಾಯಕ ಯೋಜನೆಯಡಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಶಾಸಕಿ ಎಂ. ರೂಪಕಲಾ ಹೇಳಿದರು.

ನಗರದ ಊರಿಗಾಂನಲ್ಲಿ ಗುರುವಾರ ಡಿಸಿಸಿ ಬ್ಯಾಂಕಿನ ಮೊಬೈಲ್‌ ಎಟಿಎಂ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಯಕ ಯೋಜನೆಯ ಸದುಪಯೋಗವನ್ನು ಸ್ಥಳೀಯವಾಗಿ ಪಡೆಯಲು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ರೂಪಿಸಿರುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುವುದು. ಉದ್ಯೋಗ ಸೃಷ್ಟಿಸಿಕೊಂಡು ಆರ್ಥಕವಾಗಿ ಮುಂದುವರಿಯಲು ಮಹಿಳೆಯರು ಕೂಡ ಮುಂದೆ ಬಂದಿದ್ದಾರೆ. ಹಿಂದೆ ಸಾಲ ಕೊಡುವಾಗ ಬಹಳ ಮಂದಿ ಕುಹಕವಾಡಿದ್ದರು. ಸುಳ್ಳು ಸುದ್ದಿ ಹರಡುತ್ತಿದ್ದರು. ಆದರೆ ಅದಕ್ಕೆ ಜಗ್ಗದ ಸಾವಿರಾರು ಮಹಿಳೆಯರು ಬ್ಯಾಂಕಿಂಗ್ ವ್ಯವಹಾರ ಅರಿತು, ವ್ಯವಹಾರ ನಡೆಸುತ್ತಿದ್ದಾರೆ. ಮಹಿಳೆಯರ ಆಸಕ್ತಿ ಮತ್ತು ತರಬೇತಿಗೆ ತಕ್ಕಂತೆ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಸಹಕಾರ ನೀಡಲಾಗುವುದು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಜಿಲ್ಲೆಯಲ್ಲಿ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಇರುವುದು ಕೆಜಿಎಫ್ ನಗರದಲ್ಲಿ. ಪ್ರತಿದಿನ ಸಾವಿರಾರು ಮಂದಿ ಬೆಂಗಳೂರಿಗೆ ರೈಲಿನಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಸ್ಥಳೀಯವಾಗಿ ಮಹಿಳೆಯರು ದುಡಿಮೆ ಮಾಡಲು ರಾಜ್ಯ ಸರ್ಕಾರದ ಕಾಯಕ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.‌

ಉದ್ಯೋಗ ಸೃಷ್ಟಿ ಮಾಡಬಲ್ಲ ಘಟಕಕ್ಕೆ ₹ 5 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್ ನೀಡುತ್ತದೆ. 300 ರಿಂದ 500 ಮಹಿಳೆಯರು ಒಂದೇ ಸೂರಿನಲ್ಲಿ ಕೆಲಸ ಮಾಡಬಹುದು. ಸಾಲ ತೀರಿದ ನಂತರ ಘಟಕದ ಎಲ್ಲಾ ಲಾಭ ಮಹಿಳೆಯರಿಗೆ ಸಿಗುತ್ತದೆ. ಈ ಯೋಜನೆಯಲ್ಲಿ ಪ್ರತಿ ಮಹಿಳೆಗೆ ತಲಾ ₹ 1 ಲಕ್ಷ ಸಾಲ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿ ವಾರ್ಡ್‌ನಲ್ಲಿ ದುಡಿಮೆ ಮಾಡಲು ಆಸಕ್ತಿ ಇರುವವರನ್ನು ಗುರುತಿಸಬೇಕು. ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೆ ಪುರುಷರನ್ನು ಕೂಡ ಸೇರಿಸಿಕೊಳ್ಳಬಹುದು. ದುಡಿಮೆಯಲ್ಲಿ ಭಾಗವಹಿಸುವವರಿಗೆ ಬೇಕಾದ ಅಗತ್ಯ ತರಬೇತಿಯನ್ನು ಅಪೆಕ್ಸ್‌ ಬ್ಯಾಂಕಿನಿಂದ ನೀಡಲಾಗುವುದು. ದುಡಿಯುವ ಕೈಗೆ ಕೆಲಸ ಕೊಟ್ಟು ಉದ್ಯೋಗ ಕ್ರಾಂತಿ ಮಾಡಲು ಈ ಯೋಜನೆಯಿಂದ ಸಾಧ್ಯ. ಶಾಸಕರು, ನಗರಸಭೆ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಮಾತನಾಡಿ, ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿದೆ. ₹ 30 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 7,000 ಬೀದಿದೀಪಗಳನ್ನು ಅಳವಡಿಸಲಾಗಿದೆ. ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಮುಖಂಡರಾದ ಎನ್‌.ಆರ್. ವಿಜಯಶಂಕರ್‌, ನಾರಾಯಣರೆಡ್ಡಿ, ವಿಜಯರಾಘವರೆಡ್ಡಿ, ದೇವಿ ಗಣೇಶ್‌, ಶಕ್ತಿವೇಲು, ಸೆಂದಿಲ್‌ ನಾಥನ್‌, ಕರುಣಾಕರನ್‌, ಭಾಸ್ಕರ್‌ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT