ಗುರುವಾರ , ಜೂಲೈ 9, 2020
28 °C

ಸುರಕ್ಷತಾ ಕೇಂದ್ರವಾದ ಪರೀಕ್ಷಾ ಕೇಂದ್ರ: ಸುರೇಶ್‌ಕುಮಾರ್ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಹಲವು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ್ದು, ಮಕ್ಕಳ ಹಾಜರಾತಿ ಶೇ 98ರಷ್ಟಿದೆ. ಪರೀಕ್ಷಾ ಕೇಂದ್ರಗಳು ಸುರಕ್ಷತಾ ಕೇಂದ್ರಗಳಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ವೇಮಗಲ್‌, ಕ್ಯಾಲನೂರು ಹಾಗೂ ಜಿಲ್ಲಾ ಕೇಂದ್ರದ ಪರೀಕ್ಷಾ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶಕ್ಕೆ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಿದ್ದೇನೆ’ ಎಂದರು.

‘ಜಿಲ್ಲಾಡಳಿತವು ಒಂದು ಮಗುವಿಗೂ ತೊಂದರೆಯಾಗದಂತೆ ಕ್ರಮ ವಹಿಸಿದೆ. ಮುಂದಿನ 3 ಪರೀಕ್ಷೆಗೂ ಇದೇ ರೀತಿ ಎಚ್ಚರ ವಹಿಸಬೇಕು. ಪರೀಕ್ಷೆಗೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಮಕ್ಕಳಿಗೆ ಇಡೀ ರಾಜ್ಯದ ಜನತೆ ಅವರೊಂದಿಗೆ ಇದ್ದಾರೆ ಎಂಬ ಸಂದೇಶ ರವಾನೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್–19 ಆತಂಕ ಮೆಟ್ಟಿನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿದ್ದೇವೆ. ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯದ ಪರೀಕ್ಷೆ ಮುಗಿದಿವೆ. ಮುಂದೆ ಇರುವ ಸಮಾಜ ವಿಜ್ಞಾನ, ಕನ್ನಡ ಹಾಗೂ ಹಿಂದಿ ಪರೀಕ್ಷೆಯನ್ನು ಇಷ್ಟೇ ಮುತುವರ್ಜಿ ಮತ್ತು ಬದ್ಧತೆಯಿಂದ ನಡೆಸಬೇಕು. ಯಾವುದೇ ಲೋಪವಾಗದಂತೆ ಕ್ರಮ ವಹಿಸಿ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪೋಷಕರ ವ್ಯಾಮೋಹ: ‘ಶಾಲೆಗಳ ಆರಂಭಕ್ಕೂ ಮುನ್ನ ಮೂಲಸೌಕರ್ಯದ ಸಂಬಂಧ ಸರ್ವೆ ನಡೆಸಲಾಗಿದೆ. ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಶಾಲಾ ವ್ಯಾಮೋಹ ಕೂಲಿ ಮಾಡುವವರಿಗೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತೆ ಪ್ರೇರೇಪಿಸುತ್ತಿದೆ. ಅವರ ಆದಾಯದ ಶೇ 40ರಷ್ಟು ಮಕ್ಕಳ ಶಿಕ್ಷಣಕ್ಕೆ ಖರ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಪೋಷಕರು ಖುಷಿ ಪಡುವ ರೀತಿಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ವಿಶ್ವಾಸ ಮೂಡಿಸಬೇಕು. ಆಗ ಅವರು ತನ್ನ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಾರೆ. ಇದರಿಂದ ಅವರ ಆದಾಯದಲ್ಲಿ ಶೇ 40ರಷ್ಟು ಉಳಿದು ಕುಟುಂಬ ಉತ್ತಮ ಸ್ಥಿತಿಯತ್ತ ಸಾಗುತ್ತದೆ’ ಎಂದರು.

ಥರ್ಮಲ್‌ ಸ್ಕ್ರೀನಿಂಗ್‌: ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಆಶಾ ಕಾರ್ಯಕರ್ತೆಯರು ಸಚಿವರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಸ್ವಯಂ ಸೇವಕರು ಕೈಗಳಿಗೆ ಸ್ಯಾನಿಟೈಸರ್ ಹಾಕಿದರು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ವಯಂ ಸೇವಕರು ಸಚಿವರ ಜತೆ ಫೋಟೊ ತೆಗೆಸಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಶೀಲ್ದಾರ್‌ ಶೋಭಿತಾ, ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಬಿಇಒ ಕೆ.ಎಸ್.ನಾಗರಾಜಗೌಡ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು