ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: 30ಕ್ಕೆ ತಾಲ್ಲೂಕು ಕಚೇರಿಗೆ ಮುತ್ತಿಗೆ

ಭೂ ಹಗರಣ ತನಿಖೆಗೆ ರೈತ ಸಂಘ ಆಗ್ರಹ
Last Updated 26 ಜುಲೈ 2021, 4:34 IST
ಅಕ್ಷರ ಗಾತ್ರ

ಮುಳಬಾಗಿಲು: ಕಸಬಾ ಹೋಬಳಿ ಕಂದಾಯ ಇಲಾಖೆ ವ್ಯಾಪ್ತಿಯ ಭೂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ವೈ. ಕೋಗಿಲೇರಿಯ ಸರ್ವೆ ನಂ 63ರ 480 ಎಕರೆ ಅಕ್ರಮ ಭೂ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಜುಲೈ 30ರಂದು ಜಾನುವಾರು ಸಮೇತ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ರೈತ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.

ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳ ಕೆಲಸ ಸರ್ಕಾರಿ ಕೆರೆ, ಗೋಮಾಳ, ಗುಂಡುತೋಪು, ರಾಜಕಾಲುವೆಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡುವುದಾಗಿದೆ ಎಂದು ದೂರಿದರು.

ಅಭಿವೃದ್ಧಿ ಕಾರ್ಯ ಹಾಗೂ ಜಾನುವಾರುಗಳಿಗೆ ಮೀಸಲಿಡಲು ತಿಂಗಳಾನುಗಟ್ಟಲೇ ಹುಡುಕಾಡಿದರೂ ಅಂಗೈಯಗಲ ಸರ್ಕಾರಿ ಜಮೀನು ಸಿಗುವುದಿಲ್ಲ. ಆದರೆ, ಕಸಬಾ ವ್ಯಾಪ್ತಿಯ ಭೂ ಹಗರಣ ತೆಲಗಿ ಹಗರಣ ಮೀರಿಸುವ ಹಂತಕ್ಕೆ ಬಂದು ತಲುಪಿದೆ. ತಾಲ್ಲೂಕು ಆಡಳಿತ ಮಾತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ. ದಂಡಾಧಿಕಾರಿಗಳ ಮಾತಿಗೆ ಕಿರಿಯ ಅಧಿಕಾರಿಗಳು ಬೆಲೆ ನೀಡುವುದಿಲ್ಲ. ದಲ್ಲಾಳಿಗಳಿಲ್ಲದೆ ತಾಲ್ಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಫಾರೂಖ್ ಪಾಷ ಮಾತನಾಡಿ, ದಾಖಲೆಗಳ ಕೊಠಡಿ ರಿಯಲ್ ಎಸ್ಟೇಟ್ ಉದ್ಯಮಿಗಳ ಕಚೇರಿಯಾಗಿ ಮಾರ್ಪಟ್ಟಿದೆ. ಪ್ರಮುಖ ಕಡತಗಳೇ ನಾಪತ್ತೆಯಾಗಿ ರಾತ್ರೋರಾತ್ರಿ ತಿದ್ದುಪಡಿಯಾಗುತ್ತವೆ. ಜೊತೆಗೆ ಭೂರಹಿತ ಬಡವರಿಗೆ ಮಂಜೂರಾಗಬೇಕಾದ ಸರ್ಕಾರಿ ಗೋಮಾಳದ ಜಮೀನು ಬಡವರ ಹೆಸರಿನಲ್ಲಿ ಶ್ರೀಮಂತರ ಪಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈ. ಕೋಗಿಲೇರಿ ಕಂದಾಯ ವೃತ್ತದ ಸರ್ಕಾರಿ ಗೋಮಾಳದ ಸರ್ವೆ ನಂ. 63ರಲ್ಲಿ 480 ಎಕರೆ ಜಮೀನಿದೆ. ಈ ಜಮೀನಿನ ಸುತ್ತಮುತ್ತಲಿನ ಗ್ರಾಮದ ಜನರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ, ಕಂದಾಯ ಅಧಿಕಾರಿಗಳು ರಾತ್ರೋರಾತ್ರಿ ಒಂದೇ ಕುಟುಂಬಕ್ಕೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ 120 ಎಕರೆ ಮಂಜೂರು ಮಾಡಿದ್ದಾರೆ. ಜೊತೆಗೆ ಬಲಾಢ್ಯರಿಗೆ ಬಡವರ ಹೆಸರಿನಲ್ಲಿ ಮಾರಾಟ ಮಾಡುವ ದಂಧೆ ಹೆಚ್ಚಾಗಿದೆ ಎಂದು ದೂರಿದರು.

ಕಸಬಾ ಹೋಬಳಿ ವ್ಯಾಪ್ತಿಯ ಭೂ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು. ವೈ. ಕೋಗಿಲೇರಿ ಅಕ್ರಮ ಸಾಗುವಳಿ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ, ಪೊಂಬರಹಳ್ಳಿ ನವೀನ್, ವೇಣು, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಕಿರಣ್, ರಾಮಕೃಷ್ಣಪ್ಪ, ವೆಂಕಟರಾಮ ರೆಡ್ಡಿ, ನಂಗಲಿ ಕಿಶೋರ್, ಪದ್ಮಘಟ್ಟ ಧರ್ಮ, ಸುಪ್ರಿಂ ಚಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT