ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಆದಾಯ ಮೂಲ ಕಂಡುಕೊಳ್ಳಿ

ರೈತರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಜಗದೀಶ್‌ ಕಿವಿಮಾತು
Last Updated 1 ಆಗಸ್ಟ್ 2019, 15:09 IST
ಅಕ್ಷರ ಗಾತ್ರ

ಕೋಲಾರ: ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಜೇನು ಸಾಕಣೆ ಹಾಗೂ ಕೃಷಿ ಚಟುವಟಿಕೆಗಳು ನಿರೀಕ್ಷೆಗೂ ಮೀರಿ ನಡೆಯುತ್ತಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಸಂತಸ ವ್ಯಕ್ತಪಡಿಸಿದರು.

ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ತೊಂಡಲಾ ಗ್ರಾಮದ ಯುವಕ ವಿನಯ್ ಅವರ ಜಮೀನಿಗೆ ಗುರುವಾರ ಭೇಟಿ ನೀಡಿ ಜೇನು ಸಾಕಣೆ ಪರಿಶೀಲಿಸಿದ ಸಿಇಒ, ‘ಜೇನು ಕೃಷಿಯಲ್ಲಿ ಬದುಕು ಕಟ್ಟಿಕೊಂಡಿರುವ ವಿನಯ್‌ ಅವರು ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.

‘ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಜೇನು ಸಾಕಣೆ ಮಾಡಬಹುದು. ಬರ ಪರಿಸ್ಥಿತಿಯಲ್ಲಿ ರೈತರು ಕೃಷಿಯನ್ನೇ ನೆಚ್ಚಿ ಕೂತರೆ ಆಗುವುದಿಲ್ಲ. ಕೃಷಿಯ ಜತೆಗೆ ಪರ್ಯಾಯ ಆದಾಯ ಮೂಲಗಳನ್ನು ಕಂಡುಕೊಳ್ಳಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸಶಕ್ತರಾಗಬಹುದು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯ ರೈತರ ಶ್ರಮ ಗಮನಿಸಿದರೆ ಬರ ಎದುರಾಗಿದೆ ಎಂಬ ಭಾವನೆಯೇ ಬರುವುದಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಜೇನು ಕೃಷಿಗೆ ಸೌಕರ್ಯ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

₹ 7 ಲಕ್ಷ ಆದಾಯ: ‘7 ವರ್ಷದಿಂದ ಜೇನು ಕೃಷಿ ಮಾಡುತ್ತಿದ್ದೇನೆ. ವರ್ಷಕ್ಕೆ 2 ಸಾವಿರ ಕೆ.ಜಿ ಜೇನು ತುಪ್ಪ ಉತ್ಪಾದನೆ ಮಾಡುತ್ತಿದ್ದು, ಸುಮಾರು ₹ 7 ಲಕ್ಷ ಅದಾಯ ಗಳಿಸುತ್ತಿದ್ದೇನೆ’ ಎಂದು ವಿನಯ್ ಹೇಳಿದರು.

‘ಬೆಂಗಳೂರಿನ ಜಿಕೆವಿಕೆ, ಕೋಲಾರದ ತೋಟಗಾರಿಕಾ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು ಹಾಗೂ ವಿವಿಧ ಜಿಲ್ಲೆಗಳ ರೈತರು ಜೇನು ಕೃಷಿಗೆ ತರಬೇತಿಗಾಗಿ ನನ್ನ ಜಮೀನಿಗೆ ಬರುತ್ತಿದ್ದಾರೆ. ರೈತರು ಜೇನು ಪೆಟ್ಟಿಗೆ ಮತ್ತು ಜೇನು ತುಪ್ಪ ಖರೀದಿಸುತ್ತಾರೆ’ ಎಂದು ತಿಳಿಸಿದರು.

‘ಗ್ರಾಮದ ಸುತ್ತ ಅರಣ್ಯ ಪ್ರದೇಶವಿದ್ದು, ಜೇನು ಹುಳು ಸಂಗ್ರಹಿಸಿಕೊಂಡು ಸಾಕಲಾಗುತ್ತಿದೆ. ರೈತರು ಜೇನು ಹುಳು ಸಮೇತ ಪೆಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪೂರಕ ವಾತಾವರಣದಲ್ಲಿ ಮಾತ್ರ ಜೇನು ಸಾಕಣೆ ಸಾಧ್ಯ’ ಎಂದು ಮಾಹಿತಿ ನೀಡಿದರು.

‘ಜೇನು ಸಾಕಣೆ ಜತೆಗೆ ಜಮೀನಿನಲ್ಲಿ ಹೆಬ್ಬೇವು, ನಿಂಬೆ, ಹಿಪ್ಪು ನೇರಳೆ, ಜಮ್ಮು ನೇರಳೆ ಬೆಳೆದಿದ್ದೇನೆ. ಇಳುವರಿ ಚೆನ್ನಾಗಿದೆ. ಆದರೆ, ನನಗೆ ಯಾವುದೇ ಇಲಾಖೆಯಿಂದ ಸೌಕರ್ಯ ಸಿಕ್ಕಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ನರೇಗಾ ಯೋಜನೆ ಪ್ರಯೋಜನ ಪಡೆದು ಇನ್ನು ಉತ್ತಮವಾಗಿ ಜೇನು ಕೃಷಿ ಮಾಡಬಹುದು. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಸೌಕರ್ಯ ಕಲ್ಪಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT