ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಒಡಲಾಳಕ್ಕೆ ಕನ್ನಡಿ ಹಿಡಿದ ಸಮ್ಮೇಳನ

ಸಾಹಿತ್ಯ ಜಾತ್ರೆಯಲ್ಲಿ ಮಿಂದ ಸಾಹಿತ್ಯಾಭಿಮಾನಿಗಳು
Last Updated 18 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಎರಡು ದಿನ ನಡೆದ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿದ್ದಿತು.

ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಗಳು ದಲಿತ ಸಾಹಿತ್ಯದ ಸವಿ ಉಣ ಬಡಿಸಿದವು. ದಲಿತ ಚಳವಳಿ ಹಾಗೂ ಸಾಹಿತ್ಯದ ಹುಟ್ಟು, ದಲಿತ ಸಂವೇದನೆ, ದಲಿತರ ನೋವು–ನಲಿವು, ಭಾಷೆ, ನೆಲ, ಜಲ, ಸಂಸ್ಕೃತಿ ಸೇರಿದಂತೆ ಹತ್ತು ಹಲವು ಆಯಾಮಗಳ ಕುರಿತು ಸಂವಾದಗಳು, ಚರ್ಚೆಗಳು ಹೊಸ ಹೊಳಹು ಹುಟ್ಟು ಹಾಕಿದವು.

ದಲಿತರ ವಿರುದ್ಧದ ದೌರ್ಜನ್ಯ, ಜಾತೀಯತೆಯ ಸಂಕೋಲೆ, ಅಸ್ಪೃಶ್ಯತೆಯ ಆಚರಣೆ, ದಲಿತ ಸಂಸ್ಕೃತಿಯ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಸರ್ಕಾರದ ಕಣ್ಣು ತೆರೆಸುವ ಮಹಾ ಕಾರ್ಯಕ್ಕೆ ಸಮ್ಮೇಳನ ವೇದಿಕೆಯಾಯಿತು.

ನಾಡಿನ ಹೆಸರಾಂತ ದಲಿತ ಸಾಹಿತಿಗಳು, ಕವಿಗಳು, ಉದಯೋನ್ಮುಖ ಬರಹಗಾರರು, ಚಿಂತಕರು ಮೇಳೈಸಿದ್ದ ಸಮ್ಮೇಳನದಲ್ಲಿ ಅರ್ಥಪೂರ್ಣ ಚರ್ಚೆ ನಡೆದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾಹಿತ್ಯಾಸಕ್ತರು ಸಾಹಿತ್ಯದ ಸಿರಿ ಕಣ್ತುಂಬಿಕೊಂಡರು. ಸಾಹಿತ್ಯ ಜಾತ್ರೆಯಲ್ಲಿ ಮಿಂದೆದ್ದ ಸಾಹಿತ್ಯಾಭಿಮಾನಿಗಳು ಧನ್ಯತಾಭಾವ ಮೆರೆದರು. ವಿವಿಧ ಪ್ರಕಾಶನಗಳು ಪುಸ್ತಕ ಮಾರಾಟ ಮಳಿಗೆ ತೆರೆದಿದ್ದವು. ಎರಡು ದಿನವೂ ಪುಸ್ತಕ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಪುಸ್ತಕ ಪ್ರೇಮಿಗಳು ಮಳಿಗೆಗಳಿಗೆ ಮುಗಿಬಿದ್ದು ಪುಸ್ತಕ ಖರೀದಿಸಿದರು.

ಕೊನೆಯ ದಿನ ಸಹ ಸಮ್ಮೇಳನಕ್ಕೆ ಜನಸಾಗರವೇ ಹರಿದುಬಂದಿತು. ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಪ್ರದರ್ಶನ ನೋಡುಗರ ಮನಸೂರೆಗೊಂಡವು. ಸಂಗೀತ ಸುಧೆಗೆ ಸಭಿಕರು ತಲೆದೂಗಿದರು. ಕವಿಗೋಷ್ಠಿಯು ಮನಸು ಹಗುರಾಗಿಸಿತು. ಸಮ್ಮೇಳನದಲ್ಲಿ ಊಟೋಪಚಾರ ಭರ್ಜರಿಯಾಗಿತ್ತು. ಬಿಟ್ಟು ಬಿಡದೆ ಕಾಡಿದ ತುಂತುರು ಮಳೆಯ ನಡುವೆಯೂ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು.

₹ 34 ಲಕ್ಷ ನೆರವು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶಾಶ್ವತ ನಿಧಿಯಿಂದ ₹ 30 ಲಕ್ಷ ಹಾಗೂ ಪದಾಧಿಕಾರಿಗಳಿಂದ ₹ 4 ಲಕ್ಷ ನೀಡಲು ಇಲ್ಲಿ ಭಾನುವಾರ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಪರಿಹಾರ ಕಾರ್ಯ ಪೂರ್ಣಗೊಂಡ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು. ಮುಂದಿನ ವರ್ಷ ಎಲ್ಲಿ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕೆಂದು ಸೆಪ್ಟೆಂಬರ್‌ನಲ್ಲಿ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಬೇಕು. ಶೇ 50ರ ರಿಯಾಯಿತಿ ದರದಲ್ಲಿ ದಲಿತ ಸಾಹಿತ್ಯ ಸಂಪುಟಗಳನ್ನು ಮಾರಾಟ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಿರ್ಣಯಗಳು

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶಾಶ್ವತ ನಿಧಿಯಿಂದ₹ 30 ಲಕ್ಷ ಹಾಗೂ ಪದಾಧಿಕಾರಿಗಳಿಂದ ₹ 4 ಲಕ್ಷ ನೀಡಲು ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನಿಸಿತು.

ಪ್ರವಾಹ ನಿಯಂತ್ರಣಕ್ಕೆ ಬಂದು ಪರಿಹಾರ ಕಾರ್ಯ ಪೂರ್ಣಗೊಂಡ ನಂತರ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನ ನಡೆಸಬೇಕು. ಮುಂದಿನ ವರ್ಷ ದಲಿತ ಸಾಹಿತ್ಯ ಸಮ್ಮೇಳನ ಎಲ್ಲಿ ಆಯೋಜಿಸಬೇಕು ಎಂಬುದನ್ನು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಬೇಕು. ಶೇ 50ರ ರಿಯಾಯಿತಿ ದರದಲ್ಲಿ ದಲಿತ ಸಾಹಿತ್ಯ ಸಂಪುಟಗಳನ್ನು ಮಾರಾಟ ಮಾಡಬೇಕೆಂದು ನಿರ್ಣಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT