ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಪೊಲೀಸಿಂಗ್‌ಗೆ ಪಂಚ ಸೂತ್ರ: ನೂತನ ಎಸ್‌ಪಿ ದೇವರಾಜು

ಸಿಬ್ಬಂದಿಗೆ ಖಡಕ್‌ ಸಂದೇಶ ರವಾನಿಸಿದ ನೂತನ ಎಸ್‌ಪಿ ದೇವರಾಜು
Last Updated 11 ಜನವರಿ 2022, 15:17 IST
ಅಕ್ಷರ ಗಾತ್ರ

ಕೋಲಾರ: ‘ಇಲಾಖೆ ಘನತೆಗೆ ದಕ್ಕೆ ತರುವ ನಡವಳಿಕೆ ಸಹಿಸುವುದಿಲ್ಲ. ಕಾನೂನುಬಾಹಿರ ಚಟುವಟಿಕೆ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜು ಜಿಲ್ಲೆಯ ಪೊಲೀಸ್‌ ಸಿಬ್ಬಂದಿಗೆ ಖಡಕ್‌ ಸಂದೇಶ ರವಾನಿಸಿದರು.

ಕಾರ್ಯಾಭಾರ ಸ್ವೀಕರಿಸಿದ ಬೆನ್ನಲ್ಲೇ ಇಲ್ಲಿ ಮಂಗಳವಾರ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಅಪರಾಧ ನಿಯಂತ್ರಣಕ್ಕೆ ಪಂಚಸೂತ್ರ ರೂಪಿಸಿದ್ದೇನೆ. ಜೂಜು, ಮಟ್ಕಾ, ಮೀಟರ್‌ ಬಡ್ಡಿ, ಫಿಲ್ಟರ್ ಮರಳು ದಂದೆ, ಕ್ರಿಕೆಟ್‌ ಬೆಟ್ಟಿಂಗ್‌, ಅಕ್ರಮ ಮದ್ಯ ಮಾರಾಟ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಈ ಕ್ಷಣವೇ ಕೊನೆಯಾಗಬೇಕು’ ಎಂದರು.

‘ಜನರನ್ನು ಸಂಕಷ್ಟಕ್ಕೆ ದೂಡುವ ಕೃತ್ಯ, ಕಾನೂನು ಉಲ್ಲಂಘನೆ, ಸಿಬ್ಬಂದಿಯ ಅಶಿಸ್ತು ಖಂಡಿತ ಸಹಿಸುವುದಿಲ್ಲ. ಕಾನೂನುಬಾಹಿರ ಚಟುವಟಿಕೆ ನಡೆದರೆ ಆಯಾ ಠಾಣಾಧಿಕಾರಿಯೇ ಹೊಣೆ. ನೀಲಗಿರಿ ತೋಪಿನಿಂದ ಹಿಡಿದು ಹೈಟೆಕ್‌ ಕ್ಲಬ್‌ವರೆಗೂ ಜೂಜಾಟ ನಿಲ್ಲಬೇಕು. ಜನರನ್ನು ಹಾಳು ಮಾಡುವ ದಂದೆಕೋರರ ಜತೆ ಸಿಬ್ಬಂದಿ ಶಾಮೀಲಾಗಿರುವುದು ಸಾಬೀತಾದರೆ ಆ ಕ್ಷಣವೇ ಅವರ ಅಮಾನತು ಖಚಿತ. ನಾನು ಜಿಲ್ಲೆಯಿಂದ ವರ್ಗಾವಣೆಯಾಗಿ ಹೋಗುವ ದಿನ ಸಂಜೆ 5 ಗಂಟೆವರೆಗೂ ಜೂಜಿಗೆ ಅವಕಾಶವಿಲ್ಲ’ ಎಂದು ಎಚ್ಚರಿಸಿದರು.

‘ಠಾಣೆಗಳು ಸಂಧಾನದ ಸ್ಥಳಗಳಲ್ಲ. ಸಿಬ್ಬಂದಿ ಈ ಸತ್ಯ ಅರಿತು ಕೆಲಸ ಮಾಡಬೇಕು. ದೂರು ದಾಖಲಿಸಲು ಹಿಂದೇಟು ಹಾಕುವ, ತನಿಖೆಯಲ್ಲಿ ನಿರ್ಲಕ್ಷ್ಯ ತೋರುವ, ಆರೋಪಪಟ್ಟಿ ಸಲ್ಲಿಕೆಯಲ್ಲಿ ವಿಳಂಬ ಧೋರಣೆ ಅನುಸರಿಸುವ ಸಿಬ್ಬಂದಿಗೆ ತಕ್ಕ ಶಾಸ್ತಿ ಮಾಡುತ್ತೇನೆ. ಹಲವು ವರ್ಷಗಳಿಂದ ಒಂದೇ ಠಾಣೆ ಹಾಗೂ ಚೆಕ್‌ಪೋಸ್ಟ್‌ನಲ್ಲಿ ಬೇರೂರಿರುವ ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹಿಸಿ ವರ್ಗಾವಣೆ ಮಾಡುತ್ತೇನೆ’ ಎಂದು ಗುಡುಗಿದರು.

ಅಕ್ರಮ ಮದ್ಯ: ‘ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಅಕ್ರಮ ತಡೆಯುವ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಆ ನಂತರವೂ ಅಕ್ರಮ ಮದ್ಯ ಮಾರಾಟ ಮುಂದುವರಿದರೆ ದಂದೆಯ ಮೂಲಕ್ಕೆ ಕೈ ಹಾಕುತ್ತೇವೆ. ದಿನಸಿ ಅಂಗಡಿಗಳಿಗೆ ಮದ್ಯ ಪೂರೈಸಿದ ಮದ್ಯದಂಗಡಿಗಳ ಪರವಾನಗಿ ರದ್ದುಪಡಿಸುವಂತೆ ಶಿಫಾರಸು ಮಾಡುತ್ತೇವೆ’ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣ: ‘ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ, ಬೇರೊಬ್ಬರ ತೇಜೋವಧೆ ಮಾಡುವ ಕುಕೃತ್ಯ ಸಹಿಸುವುದಿಲ್ಲ. ಇಂತಹ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಬಿಡುವುದಿಲ್ಲ. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಬಡ್ಡಿ ಮಾಫಿಯಾ: ‘ಜಿಲ್ಲೆಯಲ್ಲಿ ಮೀಟರ್‌ ಬಡ್ಡಿ ಮಾಫಿಯಾ ಸಕ್ರಿಯವಾಗಿರುವ ಬಗ್ಗೆ ಮಾಹಿತಿಯಿದೆ. ರೈತರು ಕಷ್ಟ ನಿವಾರಣೆಗೆ ಬಡ್ಡಿ ಸಾಲ ಪಡೆದರೆ ಮಾಫಿಯಾದವರು ಅವರಿಂದ ಆಸ್ತಿ ಬರೆಸಿಕೊಂಡು, ಚಕ್ರ ಬಡ್ಡಿ ಹಾಕಿ ಶೋಷಣೆ ಮಾಡುತ್ತಿರುವುದು ಗೊತ್ತಿದೆ. ಜಿಲ್ಲೆಯಲ್ಲಿ ಬಡ್ಡಿ ಹಾಗೂ ಲೇವಾದೇವಿ ವ್ಯವಹಾರ ಮಾಡುತ್ತಿರುವ ಪ್ರತಿ ವ್ಯಕ್ತಿ, ಹಣಕಾಸು ಸಂಸ್ಥೆಗಳ ಪಟ್ಟಿ ಕೊಡುವಂತೆ ಈಗಾಗಲೇ ಸಿಬ್ಬಂದಿಗೆ ಸೂಚಿಸಿದ್ದೇನೆ. ನಿಯಮಬಾಹಿರವಾಗಿ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ’ ಎಂದರು.

ಪ್ರತಿಭಟನೆಗೆ ಅನುಮತಿ: ‘ಪ್ರತಿ ಸಮಸ್ಯೆಗೂ ಹಲವು ಪರಿಹಾರಗಳಿವೆ. ಸಂಘಟನೆಗಳು ಮೊದಲಿಗೆ ಸಮಸ್ಯೆ ಪರಿಹರಿಸಲು ಕೋರಿ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕು. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಪೊಲೀಸರಿಂದ ಅನುಮತಿ ಪಡೆದು ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಪ್ರತಿಭಟನೆ ಮಾಡಬೇಕು. ಕಾನೂನು ಧಿಕ್ಕರಿಸಿ ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT