ಭಾನುವಾರ, ಮೇ 16, 2021
23 °C

ಸಮಗ್ರ ನಿರ್ವಹಣಾ ಪದ್ಧತಿ ಅನುಸರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬೇಸಿಗೆ ಹಿನ್ನೆಲೆಯಲ್ಲಿ ಉಷ್ಣಾಂಶ ಏರಿಕೆಯಾದಂತೆ ತೋಟಗಾರಿಕೆ ಬೆಳೆಗಳಲ್ಲಿ ರಸ ಹೀರುವ ಕೀಟಗಳ ಹಾವಳಿ ಹೆಚ್ಚಾಗಲಿದ್ದು, ರೈತರು ಸಮಗ್ರ ನಿರ್ವಹಣಾ ಪದ್ಧತಿ ಅನುಸರಿಸುವುದು ಉತ್ತಮ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೊಮೆಟೊ, ಮೆಣಸಿನಕಾಯಿ, ಕ್ಯಾಪ್ಸಿಕಂ, ಬೀನ್ಸ್, ಕೋಸು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡುವ ಮೊದಲು ಸಮಗ್ರ ನಿರ್ವಹಣಾ ಪದ್ಧತಿ ಅನುಸರಿಸಬೇಕು. ಮುಖ್ಯ ಬೆಳೆ ನಾಟಿಗೆ 15 ದಿನ ಮುಂಚಿತವಾಗಿ ಹೊಲದ ಸುತ್ತಲು ತಡೆ ಬೆಳೆಯಾಗಿ ಮೆಕ್ಕೆ ಜೋಳ ಅಥವಾ ಜೋಳ ಬಿತ್ತನೆ ಮಾಡಬೇಕು ಎಂದು ಹೇಳಿದರು.

ನಾಟಿಗೂ ಮೊದಲು ಸಸಿಗಳಿಗೆ ಡೈಮಿಥೋಯೇಟ್ 2 ಮಿ.ಲೀ ಅಥವಾ ಅಸಿಫೇಟ್ 1.5 ಗ್ರಾಂ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ನಾಟಿ ಮಾಡುವಾಗ ಸಸಿಗಳನ್ನು ಇಮಿಡಾಕ್ಲೋಪ್ರಿಡ್ 0.5 ಮಿ.ಲೀ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು. ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಹೊದಿಕೆ, ಹಳದಿ ಮತ್ತು ನೀಲಿ ಅಂಟು ಬಲೆ ಬಳಸುವುದು ಸೂಕ್ತ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ 16 ಸಾಲಿಗೊಮ್ಮೆ ಚೆಂಡು ಹೂ ನಾಟಿ ಮಾಡಬೇಕು. ರೋಗಕ್ಕೆ ತುತ್ತಾದ ಸಸಿಗಳನ್ನು ತಕ್ಷಣವೇ ತೆರವುಗೊಳಿಸಿ ಸುಟ್ಟು ಹಾಕಬೇಕು. ನಾಟಿ ಮಾಡಿದ 15 ದಿನಗಳಿಂದ ಕಾಯಿ ಆಗುವವರೆಗೆ ಬೇವಿನ ಬೀಜದ ಕಷಾಯದ ಜತೆಗೆ ಅಂಟು ಬೆರೆಸಿ 10 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ನಾಟಿ ಮಾಡಿದ 15 ದಿನಗಳಿಂದ ಕಾಯಿ ಆಗುವವರೆಗೆ ಅಸಿಫೇಟ್ 1.5 ಗ್ರಾಂ ಅಥವಾ ಹೊಸ್ಟೋಥಿಯಾನ್ 1 ಮಿ.ಲೀ ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿ.ಲೀ ನೀರಿನಲ್ಲಿ ಬೆರೆಸಿ 7ರಿಂದ -10 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿ ಕ್ಲಿನಿಕ್ ಅಥವಾ 7829512236 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.