ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಗಳ ದರ್ಬಾರು

ನಾಯಿಕೊಡೆಗಳಂತೆ ತಲೆ ಎತ್ತಿದ ಅಂಗಡಿಗಳು: ಕೈಚೆಲ್ಲಿದ ಅಧಿಕಾರಿಗಳು
Last Updated 3 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಬೀದಿ ಬದಿ ವ್ಯಾಪಾರಿಗಳು ಹಾಗೂ ತಳ್ಳು ಗಾಡಿ ವರ್ತಕರು ಪಾದಚಾರಿ ಮಾರ್ಗದಲ್ಲಿ ನಿಯಮಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದು, ಈ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಎಂ.ಜಿ.ರಸ್ತೆ, ಎಂ.ಬಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಿಗಳದೇ ಕಾರುಬಾರು. ಜನರ ಓಡಾಟಕ್ಕೆ ಮೀಸಲಾದ ಪಾದಚಾರಿ ಮಾರ್ಗವನ್ನು ಬಟ್ಟೆ, ಪಾದರಕ್ಷೆ, ತರಕಾರಿ, ಹಣ್ಣು, ಎಲೆಕ್ಟ್ರಾನಿಕ್‌ ವಸ್ತುಗಳು, ಪುಸ್ತಕ ಹಾಗೂ ಹೂವಿನ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ.

ಹೀಗಾಗಿ ಜನರು ಪಾದಚಾರಿ ಮಾರ್ಗದ ಬದಲಿಗೆ ರಸ್ತೆ ಮಧ್ಯೆ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವಿಲ್ಲದೆ ಸಮಸ್ಯೆಯಾಗುತ್ತಿದೆ. ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ಇದು ವಾಹನ ಸವಾರರು ಮತ್ತು ಜನರ ನಡುವೆ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ.

ಹುಸಿಯಾದ ಭರವಸೆ: ನಗರದಲ್ಲಿ ಸುಮಾರು 2 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದು, ಇವರು ಪಾದಚಾರಿ ಮಾರ್ಗದಲ್ಲೇ ವ್ಯಾಪಾರ ಮಾಡಿ ಜೀವನ ಸಾಗಿಸಬೇಕಿದೆ. ಈ ಹಿಂದೆ ಡಿ.ಕೆ.ರವಿ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಳೆ ಬಸ್‌ ನಿಲ್ದಾಣ, ಎಂ.ಬಿ.ರಸ್ತೆ, ಹಳೆ ಅಂಚೆ ಕಚೇರಿ ರಸ್ತೆ, ಎಂ.ಜಿ.ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸುತ್ತಮುತ್ತ ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು.

ಬಳಿಕ ಈ ಅಂಗಡಿಗಳ ಮಾಲೀಕರಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಈ ಭರವಸೆ ಹುಸಿಯಾಗಿದೆ. ಹೀಗಾಗಿ ವ್ಯಾಪಾರಿಗಳು ಅನ್ಯ ಮಾರ್ಗವಿಲ್ಲದೆ ಪ್ರಮುಖ ವಾಣಿಜ್ಯ ಸ್ಥಳಗಳ ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮಳಿಗೆ ಇಟ್ಟುಕೊಂಡು ಮತ್ತು ಕೈಗಾಡಿಗಳಲ್ಲಿ ವಹಿವಾಟು ನಡೆಸುತ್ತಿದ್ದಾರೆ.

ಸಮನ್ವಯ ಕೊರತೆ: ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಪಾದಚಾರಿ ಮಾರ್ಗ ಹಾಗೂ ರಸ್ತೆಗಳನ್ನು ನಿರ್ವಹಣೆ ಮಾಡಬೇಕಾದ ನಗರಸಭೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಕೈಚೆಲ್ಲಿದ್ದಾರೆ. ಪಾದಚಾರಿ ಮಾರ್ಗದ ಅತಿಕ್ರಮಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಸ್ಪರರ ವಿರುದ್ಧ ಬೊಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

ನಗರವಾಸಿಗಳು ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಸಂಚಾರ ಪೊಲೀಸರಿಗೆ ಹಲವು ಬಾರಿ ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಬೀದಿ ಬದಿ ವ್ಯಾಪಾರಿಗಳಿಂದ ಸಿಗುವ ಪುಡಿಗಾಸಿನ ಆಸೆಗೆ ಪೊಲೀಸರು ಪಾದಚಾರಿ ಮಾರ್ಗದ ಒತ್ತುವರಿ ತೆರವಿಗೆ ಮುಂದಾಗುತ್ತಿಲ್ಲ. ಮತ್ತೊಂದೆಡೆ ನಗರಸಭೆ ಸಿಬ್ಬಂದಿಯೇ ಬೀದಿ ಬದಿ ವ್ಯಾಪಾರಿಗಳಿಂದ ಕದ್ದುಮುಚ್ಚಿ ಹಣ ಪಡೆದು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ.

ಅಧಿಕಾರಿಗಳು ನೆಪಕ್ಕೆ ಆಗೊಮ್ಮೆ ಈಗೊಮ್ಮೆ ಪಾದಚಾರಿ ಮಾರ್ಗದ ಅಂಗಡಿಗಳನ್ನು ತೆರವುಗೊಳಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಂಗಡಿಗಳು ಅದೇ ಜಾಗದಲ್ಲಿ ಪ್ರತಿಷ್ಠಾಪನೆಯಾಗಿರುತ್ತವೆ. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರ ನಡುವಿನ ಸಮನ್ವಯ ಕೊರತೆಯಿಂದ ಸಾರ್ವಜನಿಕರು ಬವಣೆ ಪಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT