ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌: ಕೋಟಿ ಮೀಸಲಿಟ್ಟರೂ ಸೊರಗಿದ ಉದ್ಯಾನ

ಕುಡುಕರ ಹಾವಳಿ, ನಿರ್ವಹಣೆ ಇಲ್ಲದೆ ಮೂಲ ಸ್ವರೂಪಕ್ಕೆ ಧಕ್ಕೆ
ಕೃಷ್ಣಮೂರ್ತಿ
Published 10 ಜೂನ್ 2024, 7:23 IST
Last Updated 10 ಜೂನ್ 2024, 7:23 IST
ಅಕ್ಷರ ಗಾತ್ರ

ಕೆಜಿಎಫ್: ನಗರದ ವ್ಯಾಪ್ತಿಯಲ್ಲಿರುವ ಹಲವು ಉದ್ಯಾನಗಳು ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸೊರಗಿ ಹೋಗಿವೆ. ಹಲವು ಉದ್ಯಾನಗಳು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಕುಡುಕುರ ಹಾವಳಿಯಿಂದಾಗಿ ಮೂಲಸ್ವರೂಪವನ್ನೇ ಕಳೆದುಕೊಳ್ಳುವಂತಾಗಿವೆ.

ಬಹುತೇಕ ಎಲ್ಲಾ ಉದ್ಯಾನಗಳು ಕಸದ ರಾಶಿಯಿಂದ ತುಂಬಿದೆ. ಮಕ್ಕಳ ಆಟದ ಸಾಮಾನುಗಳು ಮುರಿದುಹೋಗಿ ನೇತಾಡುತ್ತಿವೆ. ಕಸ, ಮುಳ್ಳಿನ ಪೊದೆ, ಪಾರ್ಥೇನಿಯಂ ಗಿಡದಿಂದ ತುಂಬಿದ ಉದ್ಯಾನದಲ್ಲಿಯೇ ಮಕ್ಕಳು ಆಟ ಆಡುತ್ತಿದ್ದಾರೆ.

ನಗರಸಭೆ ಮುಂಭಾಗದಲ್ಲಿಯೇ ಇರುವ ಸುಭಾಷ್ ಚಂದ್ರ ಬೋಸ್ ಉದ್ಯಾನ ತನ್ನ ಲಕ್ಷಣಗಳನ್ನೇ ಕಳೆದುಕೊಂಡಿದೆ. ಉದ್ಯಾನದ ಅಂಚಿನಲ್ಲಿ ಕಟ್ಟಿರುವ ಸಾಮೂಹಿಕ ಶೌಚಾಲಯ ಕಟ್ಟಡ ಹತ್ತು ವರ್ಷದಿಂದ ಉದ್ಘಾಟನೆಯಾಗಿದೆ ಉಳಿದಿದೆ. ಶೌಚಾಲಯದ ಹೊಂಡಗಳು ಕಸದ ರಾಶಿ ಹಾಕುವ ತ್ಯಾಜ್ಯ ಸಂಗ್ರಹಾಲಯವಾಗಿದೆ. ಇದರಿಂದಾಗಿ ಬೀದಿ ನಾಯಿಗಳು ಉದ್ಯಾನದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತವೆ. ಬೀಡಾಡಿ ಹಸುಗಳು ಸುತ್ತಾಡುತ್ತಿರುತ್ತವೆ. ಇವುಗಳ ಮಧ್ಯೆಯೇ ಉದ್ಯಾನದ ಪಕ್ಕದಲ್ಲಿಯೇ ಇರುವ ಮೂರು ಖಾಸಗಿ ಶಾಲೆಗಳ ಪೋಷಕರು ಇದೇ ಉದ್ಯಾನಕ್ಕೆ ಬಂದು ಮಕ್ಕಳಿಗೆ ಮಧ್ಯಾಹ್ನದ ಊಟ ಮಾಡಿಸುತ್ತಾರೆ.

ಉದ್ಯಾನದಲ್ಲಿ ಇರುವ ಇಂದಿರಾ ಗಾಂಧಿ ಮತ್ತು ಕನಕದಾಸರ ಪ್ರತಿಮೆಗೆ ವರ್ಷಕ್ಕೊಮ್ಮೆ ಗೌರವ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದ ಬಳಿಕ ಉಳಿದ ತ್ಯಾಜ್ಯ ಅಲ್ಲಿಯೇ ಬಿದ್ದು ಕೊಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅದೇ ರೀತಿಯ ಪರಿಸ್ಥಿತಿ ನ್ಯಾಯಾಲಯದ ಪಕ್ಕದ ಡಾ.ಅಂಬೇಡ್ಕರ್ ಉದ್ಯಾನದಲ್ಲಿ ಕೂಡ ಇದೆ. ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಿಗಾಗಿ ಅಂಬೇಡ್ಕರ್ ಉದ್ಯಾನ ಬಳಸಿಕೊಳ್ಳಲಾಗುತ್ತದೆ. ಅಲ್ಲಿ ಊಟದ ತಟ್ಟೆ ಮತ್ತು ನೀರಿನ ಪಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದರಿಂದ ಉದ್ಯಾನಗಳು ಸ್ವಚ್ಛತೆ ಕಳೆದುಕೊಂಡಿವೆ.

ಇಲ್ಲಿನ ಬಿಜಿಎಂಎಲ್ ಪ್ರದೇಶದಲ್ಲಿ ಅಮೃತ ಯೋಜನೆಯಲ್ಲಿ ಹತ್ತು ಉದ್ಯಾನ ನಿರ್ಮಿಸಲಾಗಿತ್ತು. ಅದರಲ್ಲಿ ಒಂದು ಉದ್ಯಾನ ಕೂಡ ಸಮರ್ಪಕವಾಗಿ ಸಾರ್ವಜನಿಕ ಉಪಯೋಗಕ್ಕೆ ಇಲ್ಲದಂತಾಗಿದೆ.

ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ನಿರ್ಮಿಸಿರುವ ಉದ್ಯಾನಗಳು ನಿರ್ವಹಣೆ ಕೊರತೆಯಿಂದಾಗಿ  ಪಾಳು ಬಿದ್ದಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಟಟ್ಟಿದೆ. ಕುಡುಕರಿಗೆ ಆಶ್ರಯ ತಾಣಗಳಾಗಿವೆ.

ಅಮೃತ ನಗರೋತ್ಥಾನ ಯೋಜನೆಯ ಪ್ರಕಾರ ಪ್ರತಿ 300-400 ಮನೆಗಳು ಇರುವ ಕಡೆಗೆ ಒಂದು ಉದ್ಯಾನ ಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಜಾಗ ಇಲ್ಲದ ಕಡೆ 1,000 ಮನೆಗಳವರೆವಿಗೂ ವಿಸ್ತರಿಸಬಹುದು. ಆದರೆ ಜನಸಂಖ್ಯೆಗೆ ಅನುಗುಣವಾಗಿ ಕೆಜಿಎಫ್‌ ನಗರದಲ್ಲಿ ಉದ್ಯಾನಗಳು ಇಲ್ಲ.

ಒಂದು ಕಾಲದಲ್ಲಿ ರಾಷ್ಟ್ರದಲ್ಲಿಯೇ ಅತ್ಯುತ್ತಮ ಉದ್ಯಾನಗಳನ್ನು ಸೃಷ್ಟಿಸಿ, ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದ ಬೆಮಲ್ ಕೂಡ ಇತ್ತೀಚಿನ ದಿನಗಳಲ್ಲಿ ಉದ್ಯಾನ ಅಭಿವೃದ್ಧಿಗೆ ಆಸಡ್ಡೆ ತೋರುತ್ತಿದೆ. ಹೂ ಮತ್ತು ಕಾಯಿಪಲ್ಲೆಗಳ ಪ್ರದರ್ಶನವನ್ನು ಪ್ರತಿ ವರ್ಷ ಜನವರಿ 26 ಮತ್ತು ಆಗಸ್ಟ್ 15ರಂದು ನಡೆಸುತ್ತಿದ್ದ ಬೆಮಲ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಹಾಗಾಗಿ, ಉತ್ಪಾದನಾ ವೆಚ್ಚಕ್ಕೆ ಮಾತ್ರ ಆದ್ಯತೆ ನೀಡಿ, ಇತರ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿದೆ. ಬೆಮಲ್ ಬಯಲು ಕಲಾಕ್ಷೇತ್ರದ ಬಳಿ ಇರುವ ಉದ್ಯಾನದ ತುಂಬಾ ಮದ್ಯದ ಬಾಟಲಿಗಳು ಮತ್ತು ತ್ಯಾಜ್ಯಗಳು ಕಾಣಸಿಗುತ್ತಿವೆ.

ರಾಬರ್ಟಸನ್ ಪೇಟೆಯಲ್ಲಿ ಆಗಿನ ಶಾಸಕ ಎಸ್.ರಾಜೇಂದ್ರನ್  ಕಿಂಗ್ ಜಾರ್ಜ್ ಹಾಲ್ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಮಾಡಿದ್ದರು. ಅವರ ಅಧಿಕಾರಾವಧಿ ಮುಗಿದ ನಂತರ ಉದ್ಯಾನ ಮದ್ಯವ್ಯಸನಿಗಳ ತಾಣವಾಗಿ ಪರಿವರ್ತಿತವಾಯಿತು. ಈಗ ನಗರಸಭೆ ಪುನಃ ಅದನ್ನು ನವೀಕರಿಸಲು 14ನೇ ಹಣಕಾಸು ಯೋಜನೆಯಡಿ ಹೊರಟಿದ್ದರೂ ಅದು ಅರ್ಧಕ್ಕೆ ನಿಂತಿದೆ.

ನಗರದಲ್ಲಿ ನಗರಸಭೆ ಉದ್ಯಾನ, ಸುಭಾಷ್ ಚಂದ್ರ ಬೋಸ್ ಉದ್ಯಾನ, ನೆಹರೂ ಪಾರ್ಕ್, ಅಂಬೇಡ್ಕರ್ ಉದ್ಯಾನ, ಆಂಗ್ಲೋ ಇಂಡಿಯನ್ ಉದ್ಯಾನ, ವಿವೇಕ ನಗರ ಉದ್ಯಾನ, ಬೋರಿಲಾಲ್ ಪೇಟೆ ಉದ್ಯಾನ, ಗೌತಂ ನಗರ ಉದ್ಯಾನ, ಸ್ವರ್ಣ ನಗರ ಉದ್ಯಾನಗಳು ಈಗ ಅಭಿವೃದ್ಧಿ ಹೊಂದಿವೆ. ಆದರೆ ಅವುಗಳ ನವೀಕರಣಕ್ಕೆ ಆಗಾಗ್ಗೆ ದುಡ್ಡು ಸುರಿಯುತ್ತಿದ್ದರೂ, ಉದ್ಯಾನದ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಜನರ ಆರೋಪ.

ಮೈನಿಂಗ್ ಏರಿಯಾದ ಹೈಗ್ರೌಂಡ್ಸ್ ಪ್ರದೇಶದಲ್ಲಿ ಅಂಬೇಡ್ಕರ್ ಪಾರ್ಕ್‌
ಮೈನಿಂಗ್ ಏರಿಯಾದ ಹೈಗ್ರೌಂಡ್ಸ್ ಪ್ರದೇಶದಲ್ಲಿ ಅಂಬೇಡ್ಕರ್ ಪಾರ್ಕ್‌
ಮೈನಿಂಗ್ ಪ್ರದೇಶ ಎನ್ ಟಿ ಬ್ಲಾಕ್ ಬಳಿಯ ಉದ್ಯಾನ ತುಂಬಾ ಮುಳ್ಳು ಗಿಡಗಳು ಬೆಳೆದಿರುವುದು
ಮೈನಿಂಗ್ ಪ್ರದೇಶ ಎನ್ ಟಿ ಬ್ಲಾಕ್ ಬಳಿಯ ಉದ್ಯಾನ ತುಂಬಾ ಮುಳ್ಳು ಗಿಡಗಳು ಬೆಳೆದಿರುವುದು
ಕೆಲವೆಡೆ ಅವೈಜ್ಞಾನಿಕವಾಗಿ ವಸತಿ ಪ್ರದೇಶದ ಹೊರಗೆ ಉದ್ಯಾನ ನಿರ್ಮಿಸಲಾಗಿದೆ. ಪೌರ ಕಾರ್ಮಿಕರ ಕೊರತೆ ಕೂಡ ನಿರ್ವಹಣೆಗೆ ಕಷ್ಟವಾಗಿದೆ. ಉದ್ಯಾನ ಸ್ವಚ್ಛತೆಗೆ ನಾಗರಿಕರೂ ಕೈಜೋಡಿಸಬೇಕು.
ಪವನ್‌ಕುಮಾರ್‌ ಆಯುಕ್ತ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT