ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು ಹರಿಸುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ

ಚಿತ್ರದುರ್ಗ ಜಿಲ್ಲೆ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆ ನೀರು
Last Updated 6 ಮಾರ್ಚ್ 2020, 12:48 IST
ಅಕ್ಷರ ಗಾತ್ರ

ಕೋಲಾರ: ‘ಎತ್ತಿನಹೊಳೆ ಯೋಜನೆಯ ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್‌) ಇಲ್ಲದಿರುವ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು’ ಎಂದು ನೀರಾವರಿ ಹೋರಾಟ ವೇದಿಕೆ ಸಂಚಾಲಕ ಪ್ರಕಾಶ್ ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಕೆಲ ಭಾಗಕ್ಕೆ ನೀರು ಹರಿಸುವುದಾಗಿ ಡಿಪಿಆರ್‌ನಲ್ಲಿ ಹೇಳಿದ್ದರೂ ಇದೀಗ ಸರ್ಕಾರ ವಾಣಿವಿಲಾಸ ಸಾಗರಕ್ಕೆ ನೀರು ತುಂಬಿಸಲು ಮುಂದಾಗಿರುವುದು ಖಂಡನೀಯ’ ಎಂದು ಆಕ್ರೋಶ ವ್ತಕ್ತಪಡಿಸಿದರು.

‘ವಿಶ್ವೇಶ್ವರಯ್ಯ ನೀರಾವರಿ ನಿಗಮದ ಮೂಲಕ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ 24 ಟಿಎಂಸಿ ನೀರು ಹರಿಸುವುದಾಗಿ ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯದ ಎಂಜಿನಿಯರ್‌ಗಳ ಸಭೆಯಲ್ಲಿ 18 ಟಿಎಂಸಿ ನೀರು ನೀಡುವುದಾಗಿ ಹೇಳಲಾಗಿತ್ತು’ ಎಂದರು.

‘ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಪ್ರಸ್ತಾಪವಿದೆ. ಆದರೆ, ಎತ್ತಿನಹೊಳೆ ಯೋಜನೆ ನೀರು ಹರಿಸುವ ಸಂಗತಿಯನ್ನು ಡಿಪಿಆರ್‌ನಲ್ಲಿ ಪ್ರಸ್ತಾಪಿಸದಿದ್ದರೂ ನೀರು ಹರಿಸಲು ಮುಂದಾಗಿರುವುದು ಯಾಕೆ? ಈ ಕ್ರಮದಿಂದ ಯೋಜನೆಯ ಕಡೆ ಹಂತದಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಸಿಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ನಿಗಾ ವಹಿಸುತ್ತಿಲ್ಲ: ‘ಜಿಲ್ಲೆಯ 121 ಕೆರೆ ಹಾಗೂ ಚಿಂತಾಮಣಿಯ 5 ಕೆರೆಗಳು ಸೇರಿ ಒಟ್ಟಾರೆ 126 ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆಯಿಂದ 440 ಎಂಎಲ್‌ಡಿ ನೀರು ಹರಿಸಬೇಕಿತ್ತು. ಕೋಲಾರ ಮತ್ತು ಮಾಲೂರು ತಾಲ್ಲೂಕಿನ 51 ಕೆರೆಗಳಿಗೆ ಶೇ 75ರಷ್ಟು ನೀರು ಹರಿಸಲಾಗಿದ್ದು, 220 ಎಂಎಲ್‌ಡಿ ಮಾತ್ರ ನೀರು ಸಿಕ್ಕಿದೆ. ಅಕ್ರಮವಾಗಿ ಪಂಪ್‌ ಮೋಟರ್‌ ಅಳವಡಿಸಿ ಕೃಷಿಗೆ ನೀರು ಬಳಸಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸುತ್ತಿಲ್ಲ’ ಎಂದು ದೂರಿದರು.

‘ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯಲ್ಲಿ ಇಲ್ಲದ ತಾವರೆಕೆರೆ ಭಾಗದಲ್ಲೂ ಪೈಪ್‌ಲೈನ್‌ ಹಾಕಿ ಕೆರೆಗಳಿಗೆ ನೀರು ಹರಿಸುತ್ತಿರುವುದರಿಂದ ಜಿಲ್ಲೆಗೆ ಹರಿಯುವ ನೀರಿನ ಪ್ರಮಾಣ ಕುಸಿದಿದೆ. ಜನ್ನಘಟ್ಟ ಕೆರೆ ತುಂಬಿಲ್ಲ. ಇನ್ನು ಹೊಳಲಿ ಕೆರೆಯಿಂದ ಮುಳಬಾಗಿಲಿಗೆ ಹೇಗೆ ನೀರು ಹರಿಯುತ್ತದೆ?’ ಎಂದು ಪ್ರಶ್ನಿಸಿದರು.

ಧ್ವನಿ ಎತ್ತುತ್ತಿಲ್ಲ: ‘ಎತ್ತಿನಹೊಳೆ ಯೋಜನೆಯಡಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲು ಮುಂದಾಗಿರುವ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಜನತೆ ಎಚ್ಚೆತ್ತು ಇದರ ವಿರುದ್ಧ ಹೋರಾಟ ನಡೆಸಬೇಕು. ಹೋರಾಟವನ್ನು ಬೇರೆ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಎಚ್ಚರಿಕೆ ನೀಡಿದರು.

ವಿವಿಧ ಸಂಘಟನೆಗಳ ಸದಸ್ಯರಾದ ಚಂಬೆ ರಾಜೇಶ್, ನಳಿನಿ, ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ಕೆ.ಎನ್.ತ್ಯಾಗರಾಜ್, ಬಾಬು, ವಿ.ಎನ್.ನಾಗರಾಜ್, ಚೇತನ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT