ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ: ದಾಖಲಾತಿ ಹೆಚ್ಚಿಸಿ

ತರಬೇತಿ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಬಿಇಒ ನಾಗರಾಜಗೌಡ ಸೂಚನೆ
Last Updated 5 ಡಿಸೆಂಬರ್ 2019, 15:01 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಕರ ಮನೋಭಾವ ಬದಲಾಗಬೇಕು. ಪರಿಣಾಮಕಾರಿ ಬೋಧನೆಯಿಂದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.

ಗಣತಿ ಕಲಿಕಾ ಆಂದೋಲನದ ಅಂಗವಾಗಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಶಿಕ್ಷಕರು ಬದಲಾಗದ ಹೊರತು ಮಕ್ಕಳಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ. ಶಿಕ್ಷಕರು ಈ ಸತ್ಯ ಅರಿತು ಕಾರ್ಯ ನಿರ್ವಹಿಸಿ’ ಎಂದು ತಿಳಿಸಿದರು.

‘ತಾಲ್ಲೂಕಿನ ಬಹುಪಾಲು ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಚೆನ್ನಾಗಿದೆ. ಕೆಲ ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಣೆ ಪ್ರಯತ್ನ ನಡೆದಿದೆ. ಆದರೆ, ಕೆಲ ಶಾಲೆಗಳ ಶಿಕ್ಷಕರು ಗುಣಮಟ್ಟ ಸುಧಾರಣೆಗೆ ಮುಂದಾಗುತ್ತಿಲ್ಲ. ಶಿಕ್ಷಕರ ಈ ವರ್ತನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಶಿಕ್ಷಕರಲ್ಲಿ ಸಮಯ ಪ್ರಜ್ಞೆ ಇರಬೇಕು. ತಮಗೆ ವೇತನ ಹಾಗೂ ಜೀವನ ನೀಡಿರುವುದೇ ಶಾಲೆಗಳು ಎಂಬುದನ್ನು ಅರಿತು ಬದ್ಧತೆಯಿಂದ ಕೆಲಸ ಮಾಡಬೇಕು. ಬೋಧನೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಕೀಳರಿಮೆಯಿದ್ದು, ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕೀಳರಿಮೆ ಹೋಗಲಾಡಿಸಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿ’ ಎಂದು ಸೂಚಿಸಿದರು.

ಸಮಸ್ಯೆ ಪರಿಹಾರ: ‘ಶಿಕ್ಷಕರ ವೇತನ, ಬಡ್ತಿ, ಗಳಿಕೆ ರಜೆ ಬಿಲ್‌ ಸಮಸ್ಯೆ ಪರಿಹರಿಸಲಾಗಿದೆ. ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇಷ್ಟರ ನಡುವೆಯೂ ಶಿಕ್ಷಕರು ತಮ್ಮ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಸರ್ಕಾರಿ ಶಾಲೆಗಳು ಉಳಿಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಗಣಿತ ವಿಷಯ ಕಠಿಣವಲ್ಲ. ಅದನ್ನು ಕಲಿಸುವ ವಿಧಾನದಲ್ಲಿ ಬದಲಾವಣೆ ಅಗತ್ಯ. ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಬರುವಂತೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಅಸಮಾನತೆ ಹೆಚ್ಚುತ್ತದೆ. ಸಮಾನ ಶಿಕ್ಷಣದ ಪರಿಕಲ್ಪನೆಗೆ ಹೊಡೆತ ಬೀಳುತ್ತದೆ. ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT