ಅನುದಾನ ಕಡಿತ: ಆದೇಶ ಹಿಂಪಡೆಯಲು ಮನವಿ

ಕೋಲಾರ: ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಅನುದಾನ ಮೊತ್ತವನ್ನು ₹ 2.50 ಲಕ್ಷಕ್ಕೆ ನಿಗದಿಪಡಿಸಿರುವ ಆದೇಶ ಹಿಂಪಡೆಯಬೇಕೆಂದು ರೈತ ಸಂಘ ಸದಸ್ಯರು ಇಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು.
‘ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ನೀಡುವ ಉದ್ದೇಶಕ್ಕೆ ನರೇಗಾ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯು ಗ್ರಾಮೀಣ ಜನರಿಗೆ ಪಾಲಿಗೆ ವರದಾನವಾಗಿದೆ. ಆದರೆ, ಕೇಂದ್ರವು ಯೋಜನೆ ಅನುದಾನವನ್ನು ಕಡಿಮೆ ಮಾಡಿರುವುದು ಖಂಡನೀಯ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
‘ನರೇಗಾ ಅಡಿ ವೈಯಕ್ತಿಕ ಕಾಮಗಾರಿಗೆ ಜೀವನಪೂರ್ತಿ ಒಂದು ಕುಟುಂಬಕ್ಕೆ ₹ 2.50 ಲಕ್ಷ ನಿಗದಿಪಡಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಭಿಮಾನ ಕಸಿಯುತ್ತಿವೆ. ಸರ್ಕಾರದ ನಡೆ ಜನ ವಿರೋಧಿಯಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
‘ದೇಶಕ್ಕೆ ಸ್ವಾತಂತ್ರ ಬಂದು 7 ದಶಕವಾದರೂ ಹಳ್ಳಿಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಕೋವಿಡ್ ಸಂಕಷ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಗ್ರಾಮೀಣ ಭಾಗದಲ್ಲಿ ಜನರು ಬದುಕುವುದೇ ಕಷ್ಟವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ನರೇಗಾ ವೈಯಕ್ತಿಕ ಕಾಮಗಾರಿಗಳ ಅನುದಾನ ಕಡಿತಗೊಳಿಸುವುದು ಸರಿಯಲ್ಲ’ ಎಂದು ಹೇಳಿದರು.
ಅನ್ನ ಕಿತ್ತುಕೊಂಡಿದೆ: ‘ತೈಲೋತ್ಪನ್ನಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಸರ್ಕಾರ ಬಡವರ ಅನ್ನ ಕಿತ್ತುಕೊಂಡಿದೆ. ಇದೀಗ ಬಡ ಕೂಲಿ ಕಾರ್ಮಿಕರ ಕೆಲಸ ಕಿತ್ತುಕೊಂಡು ಬೀದಿಪಾಲು ಮಾಡಲು ಹೊರಟಿದೆ. ನರೇಗಾ ವೈಯಕ್ತಿಕ ಕಾಮಗಾರಿ ಅನುದಾನ ಕಡಿತಗೊಳಿಸಿರುವ ಆದೇಶ ಹಿಂಪಡೆದು ಪ್ರತಿ ಕುಟಂಬಕ್ಕೆ ವರ್ಷಕ್ಕೆ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹನುಮಯ್ಯ, ಸದಸ್ಯರಾದ ಕೆ.ಶ್ರೀನಿವಾಸಗೌಡ, ಇ.ಮಂಜುನಾಥ್, ರಾಮಕೃಷ್ಣಪ್ಪ, ಮುನಿಯಪ್ಪ, ಕಿರಣ್, ತಿಮ್ಮಣ್ಣ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.