ಶುಕ್ರವಾರ, ಆಗಸ್ಟ್ 12, 2022
24 °C
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹೇಳಿಕೆ ನಾಗಾನಂದ ಕೆಂಪರಾಜ್‌ ಹೇಳಿಕೆ

ಮಹನೀಯರ ಸಾವು: ಮನಸ್ಸಿಗೆ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಾಡು ನುಡಿಗಾಗಿ ಸೇವೆ ಸಲ್ಲಿಸಿದ್ದವರು ಹಾಗೂ ಹೋರಾಟಗಾರರ ಸಾವಿನ ಸುದ್ದಿಗಳೇ ಬರುತ್ತಿದ್ದು, ಮನಸ್ಸಿಗೆ ಬೇಸರವಾಗುತ್ತಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಕಳವಳ ವ್ಯಕ್ತಪಡಿಸಿದರು.

ಇತ್ತೀಚೆಗೆ ನಿಧನರಾದ ಗಣ್ಯರ ಸ್ಮರಣಾರ್ಥ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

‘ನಾಡು, ನುಡಿ, ಭಾಷೆಗಾಗಿ ದುಡಿದ ಮಹನೀಯರ ಅಕಾಲಿಕ ಸಾವು ಬೇಸರ ಮೂಡಿಸಿದೆ. ಮಹನೀಯರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರತಿನಿತ್ಯ ಸಾವಿನ ಸುದ್ದಿ ಕೇಳಿ ಜನರು ಜೀವ ಭಯದಲ್ಲೇ ಕಾಲ ದೂಡುವಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೋವಿಡ್‌ನಂತಹ ಕೆಟ್ಟ ಕಾಲದಲ್ಲಿ ಲಕ್ಷಾಂತರ ಜನರನ್ನು ದೂರ ಮಾಡಿಕೊಂಡಿದ್ದೇವೆ. ಸಾಹಿತ್ಯ ಹೋರಾಟದ ಮೂಲಕ ಎದೆಯೊಳಗಿನ ಅಂತರಂಗ ಸಾರಿದವರು ದೂರವಾಗಿದ್ದು, ಅವರು ಕೊಟ್ಟ ಕೊಡುಗೆಗಳನ್ನು ಎಲ್ಲರೂ ಸ್ಮರಿಸಬೇಕು. ದಲಿತ ಕವಿ ಹಾಗೂ ಸಿದ್ದಲಿಂಗಯ್ಯರ ಬದುಕು ಬರಹ ಕುರಿತು ಪರಿಷತ್‌ ವತಿಯಿಂದ ಸದ್ಯದಲ್ಲೇ ಕಾರ್ಯಕ್ರಮ ಆಯೋಜಿಸಲಾಗುತ್ತದೆ’ ಎಂದು ತಿಳಿಸಿದರು.

ನಾಡಿನ ದುರಂತ: ‘ಕನ್ನಡ ನಾಡು, ನುಡಿ ಸೇವೆಗೆ ಅತ್ಯಗತ್ಯವಾಗಿ ಬೇಕಿದ್ದವರನ್ನು ಕಳೆದುಕೊಂಡಿರುವುದು ನಾಡಿನ ದುರಂತ. ಸಿದ್ದಲಿಂಗಯ್ಯ ಅವರಂತಹ ಮಹನೀಯರ ಸಾವಿನಿಂದ ರಾಜ್ಯದಲ್ಲಿ ಹೋರಾಟ ತನ್ನ ಮೊನಚು ಕಳೆದುಕೊಂಡಿದೆ. ಕರ್ನಾಟಕದಲ್ಲಿ ಭವಿಷ್ಯದಲ್ಲಿ ಹೋರಾಟಗಳ ಸ್ಥಿತಿಯನ್ನು ಪುಸ್ತಕಗಳಲ್ಲಿ ನೋಡಬೇಕಾಗುತ್ತದೆ’ ಎಂದು ಕನ್ನಡಪರ ಹೋರಾಟಗಾರ ಜಯದೇವ ಪ್ರಸನ್ನ ವಿಷಾದಿಸಿದರು.

ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಕವಿ ಜರಗನಹಳ್ಳಿ ಶಿವಶಂಕರ್, ನಟ ಸಂಚಾರಿ ವಿಜಯ್, ಅರವಿಂದ ಕಟ್ಟಿ, ಸಿ.ಎಸ್.ರಘುಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿವಿಧ ಸಂಘಟನೆಗಳ ಡಿ.ಎಸ್.ಶ್ರೀನಿವಾಸಪ್ರಸಾದ್, ಸತೀಶ್‌ಕುಮಾರ್, ಹಾ.ಮಾ.ರಾಮಚಂದ್ರ, ನಾ.ವೆಂಕಿ, ಪಿ.ಚಂದ್ರಪ್ರಕಾಶ್, ಕೋ.ನಾ.ಪ್ರಭಾಕರ್, ಅ.ಕೃಸೋಮಶೇಖರ್, ಕೆ.ಆರ್.ತ್ಯಾಗರಾಜ್, ಶೇಖರಪ್ಪ, ಮಂಜುನಾಥ್, ಮುರಳಿಮೋಹನ್, ಎನ್.ಎಂ.ಶಂಕರಪ್ಪ, ಮಂಜುನಾಥ್, ಪುರುಷೋತ್ತಮರಾವ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು