ಬುಧವಾರ, ಮಾರ್ಚ್ 22, 2023
19 °C
ಗೊಟ್ಟಗುಂಟೆ ಗ್ರಾಮದಲ್ಲಿ ₹ 8 ಲಕ್ಷ ಮೊತ್ತದ ಕಾಮಗಾರಿ

ಕೆರೆ ಸಂರಕ್ಷಿಸಿದರೆ ಅಂತರ್ಜಲ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ‘ಪೂರ್ವಿಕರು ನಿರ್ಮಿಸಿರುವ ಕೆರೆಗಳನ್ನು ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಹೆಚ್ಚು ಅನುಕೂಲವಾಗುತ್ತದೆ. ಸಾರ್ವಜನಿಕರು ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಗ್ರಾ.ಪಂ. ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಧಾಕೃಷ್ಣ ತಿಳಿಸಿದರು.

ಎಮ್ಮೇನತ್ತ ಗ್ರಾ.ಪಂ. ವ್ಯಾಪ್ತಿಯ ಗೊಟ್ಟಗುಂಟೆ ಗ್ರಾಮದಲ್ಲಿ ನರೇಗಾ ಯೋಜನೆಯಡಿ ₹ 8 ಲಕ್ಷ ವೆಚ್ಚದಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೆರೆಯಲ್ಲಿ ಹೂಳು ಹೆಚ್ಚಾಗಿದ್ದ ಕಾರಣ ಮಳೆನೀರು ಹಿಂಗುತ್ತಿರಲಿಲ್ಲ. ಇದರಿಂದ ಅಕ್ಕಪಕ್ಕದ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿರಲಿಲ್ಲ. ಜೊತೆಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ತಲೆದೋರಿತ್ತು. ಸಾರ್ವಜನಿಕರ ಕೋರಿಕೆ ಮೇರೆಗೆ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಕ್ರಮ ತೆಗೆದುಕೊಂಡಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಈ ಕೆರೆಯಲ್ಲಿ ಹೂಳೆತ್ತಿದರೆ ಮಳೆನೀರು ಸಂಗ್ರಹವಾಗಿ ಅಂತರ್ಜಲಮಟ್ಟ ಏರಿಕೆಯಾಗಲು ಸಹಕಾರಿಯಾಗುತ್ತದೆ. ಪ್ರತಿದಿನ 33 ಜನರಿಗೆ ಇಲ್ಲಿ ಕೆಲಸ ಸಿಗುತ್ತಿದೆ. ಇದರಿಂದ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ
ಎಂದರು.

ಪಿಡಿಒ ಸುಧಾಕರ್ ಮಾತನಾಡಿ, ಕೆರೆಕುಂಟೆಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಬಹುತೇಕ ಕೆರೆಗಳಲ್ಲಿ ಹೂಳು ಸಂಗ್ರಹವಾಗಿ ಅಂತರ್ಜಲಮಟ್ಟ ಕುಸಿಯಲು ಕಾರಣವಾಗಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಲಮೂಲಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡುತ್ತಿವೆ ಎಂದು ಹೇಳಿದರು.

ಹಲವು ಗ್ರಾಮಗಳಲ್ಲಿ ಕೆರೆಕುಂಟೆಗಳು, ಪುಷ್ಕರಿಣಿಗಳು ಹದಗೆಟ್ಟಿವೆ. ಅವುಗಳನ್ನು ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜರ ಕಾಲದಲ್ಲಿ ಸಮುದಾಯ‌ದ ಸಹಕಾರದಿಂದ ನಿರ್ಮಾಣಗೊಂಡಿರುವ ಕೆರೆಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಇದನ್ನು ಸಾರ್ವಜನಿಕರು ಅರಿತುಕೊಂಡು ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷೆ ಸುಮಿತ್ರಮ್ಮ ಹನುಮಪ್ಪ, ಸದಸ್ಯರಾದ ನಾಗರಾಜ್ ರೆಡ್ಡಿ, ಅಮರಪ್ಪ, ರವಿ, ಓಂಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪದ್ಮಮ್ಮ, ಎಲ್‌ಸಿಆರ್‌ಪಿಗಳಾದ ಕೆ. ಶೋಭಾ, ಅಮರಾವತಿ, ಕಚೇರಿ ಸಿಬ್ಬಂದಿಯಾದ ವಾಣಿ, ಬಾಬು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.