ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಟಿಸಿ: ತರಬೇತಿ ಜತೆ ಉದ್ಯೋಗ ಖಾತ್ರಿ

ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಭ್ಯರ್ಥಿಗಳಿಗೆ ವೃತ್ತಿ ಆಧಾರಿತ ಕೋರ್ಸ್‌
Last Updated 10 ಮೇ 2019, 14:26 IST
ಅಕ್ಷರ ಗಾತ್ರ

ಕೋಲಾರ: ನಗರದ ಕ್ಲಾಕ್‌ಟವರ್‌ ಬಳಿ ಇರುವ ಸರ್ಕಾರಿ ಟೂಲ್ಸ್ ರೂಂ ಅಂಡ್ ಟ್ರೈನಿಂಗ್ ಸೆಂಟರ್‌ (ಜಿಟಿಟಿಸಿ) ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿಯೊಂದಿಗೆ ತರಬೇತಿ ನೀಡುವ ಸಂಸ್ಥೆಯಾಗಿ ಗಮನ ಸೆಳೆದಿದೆ.

ಡಿಪ್ಲೊಮಾ ಶಿಕ್ಷಣ ಮತ್ತು ಶೇ 100ರಷ್ಟು ಉದ್ಯೋಗ ಖಾತ್ರಿಯೊಂದಿಗೆ ಬಿ.ಇ 2ನೇ ವರ್ಷಕ್ಕೆ ನೇರ ದಾಖಲಾತಿಗೆ ಅವಕಾಶ ನೀಡುವ ಕೋರ್ಸ್‌ಗಳನ್ನು ಈ ಕೇಂದ್ರದಲ್ಲಿ ಆರಂಭಿಸಲಾಗಿದೆ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒದಗಿಬಂದಿದೆ.

ರಾಜ್ಯ ಸರ್ಕಾರ ಜಿಲ್ಲಾ ಕೈಗಾರಿಕಾ ಕೇಂದ್ರದ ಸುಸಜ್ಜಿತ ಕಟ್ಟಡದಲ್ಲಿ ಈ ಕೇಂದ್ರ ಆರಂಭಿಸಿದ್ದು, ಕೈಗಾರಿಕೀಕರಣಕ್ಕೆ ತಕ್ಕಂತೆ ಉದ್ಯೋಗಾವಕಾಶ ಸೃಷ್ಟಿಗೆ ತರಬೇತಿ ನೀಡುವ ಕಾರ್ಯವನ್ನು ಕೇಂದ್ರದಲ್ಲಿ ಮಾಡಲಾಗುತ್ತಿದೆ. ಇಲ್ಲಿ ಆರಂಭಿಸಿರುವ ‘ಡಿಪ್ಲೊಮಾ ಇನ್‌ ಟೂಲ್ ಅಂಡ್ ಡೈ ಮೇಕಿಂಗ್’ ಕೋರ್ಸ್‌ಗೆ ಕಾರ್ಖಾನೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಕಡಿಮೆ ಖರ್ಚಿನಲ್ಲಿ ಈ ವೃತ್ತಿ ಆಧಾರಿತ ಕೋರ್ಸ್‌ ಪೂರ್ಣಗೊಳಿಸಿ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿದೆ. ಈ ಕೋರ್ಸ್‌ನ ಪ್ರವೇಶಾತಿಗೆ ದಾಖಲಾತಿಗಾಗಿ ಹೊರ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಹಾಕುತ್ತಿರುವುದು ಕೇಂದ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಮುಂದಾಗಿರುವ ಕೇಂದ್ರವು ಇದೀಗ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಂದ ಅರ್ಜಿ ಆಹ್ವಾನಿಸಿದೆ.

ಹೆಚ್ಚಿನ ಆದ್ಯತೆ: ‘ಮಕ್ಕಳಿಗೆ ದುಬಾರಿ ಶಿಕ್ಷಣ ಕೊಡಿಸುವುದು ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ಕಷ್ಟವಾಗಿರುವಾಗ ಸರ್ಕಾರ ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಟಿಟಿಸಿ ಕೇಂದ್ರ ಆರಂಭಿಸಿದೆ. ನಗರದಲ್ಲಿ 2009ರಿಂದ ಜಿಟಿಟಿಸಿ ಕೇಂದ್ರ ನಡೆಯುತ್ತಿದೆ’ ಎಂದು ಕೇಂದ್ರದ ಪ್ರಾಂಶುಪಾಲ ಸಿ.ಎಸ್‌.ಕೆಂಪರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರದಲ್ಲಿ ಉತ್ತಮ ತರಬೇತಿ ನೀಡುತ್ತಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಪ್ರಸ್ತುತ ಕೈಗಾರಿಕೆಗಳು ತರಬೇತಿ ಪಡೆದವರಿಗೆ ಮಾತ್ರ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿವೆ. ಜಿಲ್ಲೆಗೆ ಬಂದಿರುವ ಬೃಹತ್ ಕಂಪನಿಗಳು ಕೇಂದ್ರದಲ್ಲಿ ಡಿಪ್ಲೊಮಾ ಪಡೆದವರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುತ್ತಿವೆ’ ಎಂದು ಹೇಳಿದರು.

ಅನುಮೋದನೆ: ಜಿಟಿಟಿಸಿಯ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅನುಮೋದನೆಗೊಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ನಂತರ ನೀಟ್ ಅಥವಾ ಸಿಇಟಿ ಪರೀಕ್ಷೆ ಬರೆಯಲು ಕಲಿಕೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರವೇಶದ ಆಶಯ ಹೊಂದಿರುತ್ತಾರೆ.

ಇಂತಹ ವಿದ್ಯಾರ್ಥಿಗಳ ಆಶಯ ಈಡೇರಿಸಲು ಜಿಟಿಟಿಸಿ ಡಿಪ್ಲೊಮಾ ಪೂರೈಸಿದವರಿಗೆ ನೇರವಾಗಿ 2ನೇ ವರ್ಷದ ಬಿ.ಇ ತರಗತಿಗೆ ಸೇರಲು ಅವಕಾಶ ಕಲ್ಪಿಸಿದೆ. ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಲಾಗದ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಶಿಕ್ಷಣದ ಆಶಯವನ್ನು ಈ ಕೇಂದ್ರಕ್ಕೆ ದಾಖಲಾಗಿ ಈಡೇರಿಸಿಕೊಳ್ಳಬಹುದು.

ಸೀಟು ಹಂಚಿಕೆ: ಜಿಟಿಟಿಸಿಯ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಮೆರಿಟ್‌, ರೋಸ್ಟರ್ ಪದ್ಧತಿ ಮೂಲಕ ಅಯ್ಕೆ ಮಾಡಲಾಗುತ್ತದೆ. ಶೇ 30ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ.

ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಡಿಪ್ಲೊಮಾ ಕೋರ್ಸ್‌ ಓದಲು ಇಚ್ಛಿಸಿದರೆ ಅವರು ನೇರವಾಗಿ 2ನೇ ವರ್ಷದ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಮೊದಲ ವರ್ಷದ ಕೋರ್ಸ್‌ ಓದುವ ಅಗತ್ಯವಿಲ್ಲ.ಈ ಕೇಂದ್ರದಲ್ಲಿ ಡಿಪ್ಲೊಮಾ ಕೋರ್ಸ್‌ ಪೂರೈಸಿದ ವಿದ್ಯಾರ್ಥಿಗಳು ಟಿಸಿಎಸ್, ಮೈಕ್ರೋ, ವಿಪ್ರೋ, ಎಲ್ ಅಂಡ್ ಟಿ, ಎಕ್ಸಿಡಿ ಇಂಡಿಯಾ ಲಿಮಿಟೆಡ್, ಟೊಯೊಟೊದಂತಹ ಬೃಹತ್ ಕಂಪನಿಗಳಲ್ಲಿ ಉದ್ಯೋಗಾವಕಾಶ ಗಿಟ್ಟಿಸಿಕೊಂಡಿದ್ದಾರೆ.

ಅರ್ಜಿ ಸಲ್ಲಿಕೆ: ಜಿಟಿಟಿಸಿ ಸಂಸ್ಥೆಯ ಡಿಪ್ಲೊಮಾ ಕೋರ್ಸ್‌ನ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಮೇ 24 ಕಡೆಯ ದಿನ. ಆಸಕ್ತ ಅಭ್ಯರ್ಥಿಗಳು ಕೇಂದ್ರದ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಶೈಕ್ಷಣಿಕ ದಾಖಲೆಪತ್ರಗಳೊಂದಿಗೆ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ನಂತರ ಅಭ್ಯರ್ಥಿಗಳನ್ನು ರೋಸ್ಟರ್ ಮತ್ತು ಮೆರಿಟ್‌ ಆಧಾರದಲ್ಲಿ ಮೇ 27ರಂದು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9141630317 ಅಥವಾ 9480636685 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT