ಬುಧವಾರ, ಏಪ್ರಿಲ್ 21, 2021
32 °C
ಸಾಯಿ ಬಾಬಾ ಮಂದಿರಕ್ಕೆ ಹರಿದುಬಂದ ಭಕ್ತಸಾಗರ: ಅನ್ನ ಸಂತರ್ಪಣೆ

ಕಳೆಗಟ್ಟಿದ ಗುರು ಪೌರ್ಣಿಮೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗುರು ಪೌರ್ಣಿಮೆಯನ್ನು ನಗರದ ಸಾಯಿ ಬಾಬಾ ಮಂದಿರದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸಾಯಿ ಬಾಬಾ ಮೂರ್ತಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ಮತ್ತು ಭಜನೆ ಏರ್ಪಡಿಸಲಾಗಿತ್ತು.

ಭಕ್ತರು ಸಾಯಿ ಬಾಬಾ ದರ್ಶನಕ್ಕಾಗಿ ಮಂದಿರದ ಬಳಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮುಂಜಾನೆ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾದವು. ಸಾಯಿ ಬಾಬಾ ಮೂರ್ತಿ ಹಾಗೂ ಇಡೀ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ಮಂದಿರದ ಆವರಣದಲ್ಲಿ ವಾದ್ಯಗೋಷ್ಠಿ ನಡೆಯಿತು.

ಸಾವಿರಾರು ಭಕ್ತರು ಪ್ರವಾಸಿ ಮಂದಿರ ಮುಂಭಾಗದ ರಸ್ತೆವರೆಗೂ ಸಾಲುಗಟ್ಟಿ ನಿಂತಿದ್ದರು. ಮಂದಿರದ ಮುಂಭಾಗ ಬ್ಯಾರಿಕೇಡ್‌ಗಳನ್ನು ಹಾಕಿ ಭಕ್ತರನ್ನು ಒಳಗೆ ಬಿಡಲಾಯಿತು. ನೂಕು ನುಗ್ಗಲು ಉಂಟಾಗದಂತೆ ಮಂದಿರದ ಬಳಿ ಪೊಲೀಸರು ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಸೇವಾದಳ ಕಾರ್ಯಕರ್ತರು ಮಹಿಳೆಯರು ಹಾಗೂ ವಯೋವೃದ್ಧರಿಗೆ ನೆರವಾದರು.

ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಸಂಜೆ ಬೇಗನೆ ದೇವಾಲಯ ಬಂದ್‌ ಮಾಡುವುದಾಗಿ ಆಡಳಿತ ಮಂಡಳಿ ತಿಳಿಸಿದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆಯೇ ದೇವರ ದರ್ಶನ ಪಡೆದರು. ದೇವರ ದರ್ಶನದ ನಂತರ ಭಕ್ತರಿಗೆ ವಿಭೂತಿ, ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು.

ದೇವಾಲಯ ಮುಂಭಾಗದ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದಿನ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಭಕ್ತರ ವಾಹನಗಳ ನಿಲುಗಡೆಗೆ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆ, ಕೆಇಬಿ ಕಚೇರಿ ರಸ್ತೆ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಬಳಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.

ಅನ್ನ ಸಂತರ್ಪಣೆ: ಸಾಯಿ ಬಾಬಾ ಮಂದಿರ ಸಮೀಪವಿರುವ ರೈಲು ನಿಲ್ದಾಣ ಮೈದಾನದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮೈದಾನದಲ್ಲಿ ಬೃಹತ್‌ ಪೆಂಡಾಲ್‌ ನಿರ್ಮಿಸಿ ಅನ್ನ ಸಂತರ್ಪಣೆ ಮಾಡಲಾಯಿತು.

ಭಕ್ತರಿಗೆ ಬೆಳಗಿನ ತಿಂಡಿಗೆ ಪುಳಿಯೊಗರೆ, ಸಿಹಿ ಪೊಂಗಲ್‌ ಹಾಗೂ ಲಾಡು ಬಡಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಇಡ್ಲಿ, ರಾಗಿ ದೋಸೆ, ಹುಚ್ಚೆಳ್ಳು ಚಟ್ನಿ, ಪಕೋಡ, ಸಿಹಿ ಕಡಬು, ತರಕಾರಿ ಪಲಾವ್‌, ಅನ್ನ ಸಾಂಬರು ಮತ್ತು ಮಜ್ಜಿಗೆ ವಿತರಿಸಲಾಯಿತು.

ಬೆಳಿಗ್ಗೆ 11 ಗಂಟೆಯಿಂದ ಸಂಜೆ ಸುಮಾರು 4 ಗಂಟೆವರೆಗೆ ಅನ್ನ ಸಂತರ್ಪಣೆ ನಡೆಯಿತು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್, ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ರುದ್ರಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆಯ ಉಸ್ತುವಾರಿ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.