ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2026ರೊಳಗೆ ಗುರುಭವನ ಸಿದ್ಧ

ಶಿಕ್ಷಕರ ದಿನಾಚರಣೆ: ಭವನ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್‌ ₹ 50 ಲಕ್ಷ ಘೋಷಣೆ
Published 5 ಸೆಪ್ಟೆಂಬರ್ 2023, 15:28 IST
Last Updated 5 ಸೆಪ್ಟೆಂಬರ್ 2023, 15:28 IST
ಅಕ್ಷರ ಗಾತ್ರ

ಕೋಲಾರ: ‘ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನ ಕಟ್ಟಡ 2026ರೊಳಗೆ ನಿರ್ಮಾಣವಾಗಲೇಬೇಕು. ಅದಕ್ಕೆ ನಾನೂ ₹ 50 ಲಕ್ಷ ಅನುದಾನ ಕೊಡುತ್ತೇನೆ’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್‌ ಘೋಷಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲ ಹಾಗೂ ಮತ್ತಿತರ ಕಾರಣಗಳಿಂದ 7 ಬಾರಿ ಶಂಕುಸ್ಥಾಪನೆಗೊಂಡಿರುವ ಗುರುಭವನದ ಕಾಮಗಾರಿ ಈವರೆಗೆ ಆರಂಭಗೊಳ್ಳದಿರುವುದು ವಿಪರ್ಯಾಸ’ ಎಂದರು.

‘ಸಂಸದ ಎಸ್‌.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಲಾ ₹ 50 ಲಕ್ಷ ನೀಡಿದ್ದಾರೆ. ಉಳಿದಂತೆ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್‌.‌ಅನಿಲ್ ಕುಮಾರ್ ಇಬ್ಬರೂ ತಲಾ ₹ 25 ಲಕ್ಷ ನೀಡಬೇಕು. ‌ನಾನು ₹ 50 ಲಕ್ಷ ಕೊಡುತ್ತೇನೆ. ಬೈರತಿ ಸುರೇಶ್ ಅವರಿಂದ ₹ 50 ಲಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಅವರಿಂದಲೂ ಹಣ ಕೊಡಿಸುವೆ. ಶಿಕ್ಷಕರು ಈ ವರ್ಷ ಹಾಗೂ ಮುಂದಿನ ‌ವರ್ಷದ ಒಂದು ದಿನದ ವೇತನ ಕೊಡಿ. ಶಿಕ್ಷಕರ ಕಲ್ಯಾಣ ನಿಧಿಯ ₹ 1 ಕೋಟಿ ಸೇರಿದಂತೆ ಎಲ್ಲಾ ಹಣ ಬಳಸಿಕೊಂಡು ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

'ಸರ್ವಪಲ್ಲಿ ರಾಧಾಕೃಷ್ಣನ್ ‌ಎಲ್ಲರ‌ ಪಾಲಿನ ದೇವರು. ಶಿಕ್ಷಣ ಇಲ್ಲದ‌ ಬದುಕು ಇಲ್ಲ. ಶಿಕ್ಷಕರು ಚೆನ್ನಾಗಿದ್ದರೆ ಮಕ್ಕಳ‌ ಭವಿಷ್ಯ ಚೆನ್ನಾಗಿರುತ್ತದೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಂ.ಎಲ್ ಅನಿಲ್‍ಕುಮಾರ್, ‘ಪ್ರಾಥಮಿಕ ಶಿಕ್ಷಣ ಜೀವನದ ಅಡಿಪಾಯವಾಗಿದ್ದು, ಸಮಾಜ ಕಟ್ಟುವ ಶಿಲ್ಪಿಗಳಾದ ಗುರುವಿಗೆ ಅತ್ಯಂತ ಗೌರವವಿದೆ. ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಕೃಷ್ಣನ್ ‌ಉಪರಾಷ್ಟ್ರಪತಿ, ರಾಷ್ಟ್ರಪತಿ ಆಗಿ ಸೇವೆ‌ ಸಲ್ಲಿಸಿದ್ದು ಸಣ್ಣ‌ ಸಾಧನೆ ಅಲ್ಲ. ಅವರೊಬ್ಬ ಮಹಾನ್ ಚೇತನ. ಅಂಥ ವ್ಯಕ್ತಿಯ ನೆನಪಿನಲ್ಲಿ ಶಿಕ್ಷಕರ ದಿನ‌ ಆಚರಿಸುತ್ತಿದ್ದೇವೆ' ಎಂದರು.

'ಬೇರೆ ಬೇರೆ ಕೆಲಸಗಳಿಗೂ ಸರ್ಕಾರಿ ಶಾಲೆ‌ ಶಿಕ್ಷಕರನ್ನು ಬಳಸಿಕೊಳ್ಳುತ್ತಿದ್ದೇವೆ.‌‌ ಶಿಕ್ಷಕರ ಮೇಲೆ ಮೇಲೆ ನಮಗೆ ಅಷ್ಟೊಂದು ನಂಬಿಕೆ.‌ ಅವರ ಮೇಲಿನ ಹೊರೆ ಕಡಿಮೆ ‌ಮಾಡಬೇಕು.‌ ಮಕ್ಕಳಿಗೆ ‌ಅನ್ಯಾಯವಾಗಬಾರದು‌' ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ‘ಗುರುಭವನಕ್ಕೆ ಏಳು ಬಾರಿ ಶಂಕುಸ್ಥಾಪನೆ ಆಗಿದೆ. ಶಿಕ್ಷಕರಲ್ಲಿ ಒಗ್ಗಟ್ಟಿನ‌ ಕೊರತೆ ಇದೆ.‌ ನಿಮ್ಮಲ್ಲಿಯೇ 26 ಸಂಘಟನೆಗಳಿವೆ. ಶಿಕ್ಷಕರ ಚುನಾವಣೆ ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಡಿಮೆ‌ ಇಲ್ಲ. ನೀವು ಮನಸ್ಸು ಮಾಡಿದರೆ‌ ಗುರುಭವನ ನಿರ್ಮಾಣ ‌ಸಾಧ್ಯ' ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಾಳ್‌, 'ವೈದ್ಯರು ಜೀವ ಉಳಿಸುತ್ತಾರೆ, ಶಿಕ್ಷಕರು ಜೀವ ಬೆಳೆಸುತ್ತಾರೆ. ದುಡ್ಡೇ ದೊಡ್ಡಪ್ಪ ಎನ್ನುತ್ತಾರೆ, ಆದರೆ‌‌ ಶಿಕ್ಷಕ ಅವರಪ್ಪ. ನಾನು ಶಿಕ್ಷಕನಾಗಿ ಕೆಲಸ‌ ಮಾಡುತ್ತಿದ್ದ ವೇಳೆ ಇದ್ದ ತೃಪ್ತಿ ಈಗ ಸಿಗುತ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಕಾಸ್ಮೆಟಿಕ್ ಟಚ್‌ ಬೇಡ, ಅಲ್ಲಿ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡಿದರೆ ಸಾಕು, ಅಂಕ ಆಧಾರಿತ ಶಿಕ್ಷಣಕ್ಕಿಂತ ಮಕ್ಕಳಿಗೆ ಇಂದು ಮೌಲ್ಯಯುತ ಶಿಕ್ಷಣದ ಅಗತ್ಯವಿದೆ’ ಎಂದು ಹೇಳಿದರು.

ಡಿಡಿಪಿಐ ಕೃಷ್ಣಮೂರ್ತಿ ಸ್ವಾಗತಿಸಿ, ‘ಜಿಲ್ಲೆಯ 18 ಮಂದಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದ್ದು, ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಮುಖ್ಯಶಿಕ್ಷಕರ ಸಭೆ ನಡೆಸಿದ್ದು, ಮಕ್ಕಳ ಕಲಿಕೆಗೆ ಅಗತ್ಯವಾದ ಸಂಪನ್ಮೂಲ ಒದಗಿಸಲು ಮುಂದಾಗಿದ್ದೇವೆ’ ಎಂದರು.

ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಪ್ರಸ್ತುತ ವರ್ಷ ನಿವೃತ್ತರಾದ 40ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಎಲ್ಲಾ ಆರು ತಾಲ್ಲೂಕುಗಳ ಒಟ್ಟು 18 ಮಂದಿ ಶಿಕ್ಷಕರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಡಯಟ್ ಪ್ರಾಂಶುಪಾಲ ಜಯಣ್ಣ, ಬಿಇಒ ಕನ್ನಯ್ಯ, ಶಿಕ್ಷಣಾಧಿಕಾರಿ ಅಶೋಕ್, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಇಸಿಒ ಕೆ.ಶ್ರೀನಿವಾಸ್, ಖಾಸಗಿ ಶಾಲೆಗಳ ಸಂಘದ ಸದಾನಂದ್, ಎಸ್.ಮುನಿಯಪ್ಪ, ಜಗದೀಶ್, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಜಿ.ಎಂ.ಚಂದ್ರಪ್ಪ, ಜಿ.ಶ್ರೀನಿವಾಸ್, ಶಿವಕುಮಾರ್, ಅಪ್ಪೇಗೌಡ, ನಾಗರಾಜ್, ಅಶ್ವಥ್ಥನಾರಾಯಣ, ವಿ.ಮುರಳಿಮೋಹನ್, ಆರ್.ನಾಗರಾಜ್, ಮುನಿಯಪ್ಪ, ಆಂಜನೇಯ, ನಾರಾಯಣರೆಡ್ಡಿ, ಶ್ರೀರಾಮ್ ಇದ್ದರು.

ಕೋಲಾರದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್‌.ಅನಿಲ್‌ ಕುಮಾರ್‌ ಇಂಚರ ಗೋವಿಂದರಾಜು ಸನ್ಮಾನಿಸಿದರು
ಕೋಲಾರದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್‌.ಅನಿಲ್‌ ಕುಮಾರ್‌ ಇಂಚರ ಗೋವಿಂದರಾಜು ಸನ್ಮಾನಿಸಿದರು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದ ಕಾರ್ಯಕ್ರಮ ಜಿಲ್ಲಾ ಮಟ್ಟದ 18 ಮಂದಿ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ನಿವೃತ್ತರು, ಖಾಸಗಿ ಶಾಲೆ ಶಿಕ್ಷಕರಿಗೆ ಅಭಿನಂದನೆ

ದೇಶದ ಅಭಿವೃದ್ಧಿ ಪಥ ಗುರುತಿಸುವಲ್ಲಿ ‌ಶಿಕ್ಷಣ ಕ್ಷೇತ್ರದ ಪಾತ್ರವೂ ಇದೆ. ಶಿಕ್ಷಕರು ಹಾಗೂ ನಮ್ಮೆಲ್ಲರಿಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಪ್ರೇರಣೆ. ಶಿಕ್ಷಣ ಇಲ್ಲದ ಬದುಕು ಇಲ್ಲ

-ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ

Quote - ಎಸ್ಸೆಸ್ಸೆಲ್ಸಿ ಪಿಯುಸಿಯಲ್ಲಿ ಕೋಲಾರ ಜಿಲ್ಲೆ ಮೊದಲ ಮೂರು ಸ್ಥಾನದೊಳಗೆ ಬರಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಈಗ ಆರನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ಡಿಡಿಪಿಐ ಬಿಇಒಗಳು ಎಲ್ಲಾ ಶಿಕ್ಷಕರು ಕಾರಣ ಎಂ.ಎಲ್‌.ಅನಿಲ್‌ ಕುಮಾರ್‌ ವಿಧಾನ ಪರಿಷತ್‌ ಸದಸ್ಯ

ಶಿಕ್ಷಕರ ಚುನಾವಣೆಗೆ ಅಸಮಾಧಾನ

'ಶಿಕ್ಷಕರ ಬಗ್ಗೆ ‌ನನಗೆ ಒಂದು ಅಸಮಾಧಾನ ಇದೆ. ಶಿಕ್ಷಕರ ಸಂಘಗಳಿಗೆ ಚುನಾವಣೆ‌ ನಡೆಸದೆ ಸರ್ವ ಸಮ್ಮತದಿಂದ ಅವಿರೋಧವಾಗಿ ಆಯ್ಕೆ‌ಮಾಡಿಕೊಳ್ಳಿ. ನಮ್ಮ ಚುನಾವಣೆಗಿಂತ ನಿಮ್ಮ‌ ಚುನಾವಣೆಯೇ ದೊಡ್ಡದಾಗಿ‌ ನಡೆಯುತ್ತದೆ.‌ ಸಾಕಷ್ಟು ಹಣ‌ ಕೂಡ ಖರ್ಚು ಮಾಡುತ್ತೀರಿ. ಎಲ್ಲರಿಗೂ ಬುದ್ಧಿ ಹೇಳಬೇಕಾದ ನಿಮ್ಮಲ್ಲಿ ಹೊಂದಾಣಿಕೆ ಇರಬೇಕು. ವಿರಸ ಬೇಡ' ಎಂದು ಶಾಸಕ ಕೊತ್ತೂರು ಮಂಜುನಾಥ್‌ ಸಲಹೆ ನೀಡಿದರು.

‘ಶಾಲೆ ನಿರ್ಮಿಸಲು ₹ 2 ಕೋಟಿ ಕೊಡುವೆ’

‘ಶಿಕ್ಷಣ ಆರೋಗ್ಯ ಕ್ಷೇತ್ರ ಎರಡು ಕಣ್ಣುಗಳಿದ್ದಂತೆ. ಕೋಲಾರದ ನೂತನ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ₹ 1.2 ಕೋಟಿ ಮಂಜೂರು ಮಾಡಿಸಿದ್ದೇನೆ. ಅದೇ ರೀತಿ ಬಾಲಕರ ಕಾಲೇಜು ಬಾಲಕಿಯರ ಕಾಲೇಜು ಜೂನಿಯರ್ ಕಾಲೇಜು ಜಿಲ್ಲೆಯ ಹೆಮ್ಮೆ. ಅದರ ಅಭಿವೃದ್ದಿಗೂ ಶಾಸಕರು ಕೈಜೋಡಿಸಬೇಕು. ಒಳ್ಳೆಯ ದಾಖಲಾತಿ ಇರುವ ಶಾಲೆ ಗುರುತಿಸಿಕೊಟ್ಟಲ್ಲಿ ಮುಳುಬಾಗಿಲಿನ ಡಿವಿಜಿ ಶಾಲೆ ಮಾದರಿಯಲ್ಲಿ ನಾನೇ ₹ 2 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಶಾಲಾ ಕಟ್ಟಡ ನಿರ್ಮಿಸಿಕೊಡುವೆ’ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT