ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ ಕನ್ನ: ಕಠಿಣ ಕ್ರಮಕ್ಕೆ ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಹೆಬ್ಬೆಟ್ಟು ಆಯೋಗ ಆಗುವುದು ಬೇಡ- ಎಚ್.ಡಿ.ಕುಮಾರಸ್ವಾಮಿ
Last Updated 20 ನವೆಂಬರ್ 2022, 9:07 IST
ಅಕ್ಷರ ಗಾತ್ರ

ಕೋಲಾರ: 'ಮತದಾರರ ದತ್ತಾಂಶ ಕಳವು ಪ್ರಕರಣ ದೊಡ್ಡ ಹಗರಣವಾಗುವ ರೀತಿ ಕಾಣುತ್ತಿದ್ದು, ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ಹೆಬ್ಬೆಟ್ಟು ಆಯೋಗ ಆಗುವುದು ಬೇಡ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಬಂಗಾರಪೇಟೆ ತಾಲ್ಲೂಕಿನ ಮಾಗೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಬಿಜೆಪಿಗೆ ಮತ ಹಾಕಲ್ಲ ಎಂದು ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಗಂಭೀರವಾದ ವಿಚಾರ. ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಸರ್ಕಾರವೇ ನೇರವಾಗಿ ಭಾಗಿಯಾಗಿರುವಾಗ ಸತ್ಯಾಂಶ ಹೇಗೆ ಹೊರಬರುತ್ತದೆ' ಎಂದು ಪ್ರಶ್ನಿಸಿದರು.

'ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

'ವಿರೋಧ ಪಕ್ಷಗಳಿಗೆ ಮತ ಹಾಕುವವರ ದತ್ತಾಂಶ ಸಂಗ್ರಹ ಮಾಡಿದ್ದಾರೆ ಎಂಬ ಆರೋಪವಿದೆ. ಈ ಹಿಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಲಾಗಿತ್ತು? ಈಗ ಯಾರಿಗೆ ಮತ ಹಾಕುತ್ತೀರಿ ಎಂದೆಲ್ಲಾ ಕೇಳಿದ್ದಾರೆ ಎಂಬ ಮಾಹಿತಿ' ಎಂದರು.

'ಶಾಸಕರ ಖರೀದಿ ಯತ್ನಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಈಚೆಗೆ ಹಲವಾರು ದಾಖಲೆ ಸಮೇತ ಬಹಿರಂಗ ಮಾಡಿದ್ದರು. ಕರ್ನಾಟಕದ ಮೈತ್ರಿ ಸರ್ಕಾರವನ್ನೂ ಈಗ ಆರೋಪಿತರೇ ಬೀಳಿಸಿದರು. ಜನ ಬೆಂಬಲವಿಲ್ಲದ ಕಾರಣ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇಂಥವರಿಗೆ ತಕ್ಕಪಾಠ ಆಗಬೇಕು' ಎಂದು ಹೇಳಿದರು.

'ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಆಯೋಗ ಹೇಳುತ್ತದೆ. ಆದರೆ, ಮತದಾರರ ಹಕ್ಕನ್ನು ಬಿಜೆಪಿ ನೇತೃತ್ವದ ಸರ್ಕಾರ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ' ಎಂದು ಆರೋಪಿಸಿದರು.

'ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಚಿಲುಮೆ ಸಂಸ್ಥೆಗೆ ಯಾವುದೇ ಅನುಮತಿ ನೀಡಿಲ್ಲ. 2017 ರಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅನುಮತಿ ನೀಡಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ, ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿವೆ' ಎಂದು ವಾಗ್ದಾಳಿ ನಡೆಸಿದರು.

'ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜೆಡಿಎಸ್ ಪಕ್ಷದಿಂದ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದೇವೆ' ಎಂದು ನುಡಿದರು.

'ಕೊರೆವ ಚಳಿಯಲ್ಲೂ ಮಕ್ಕಳು, ಮಹಿಳೆಯರು, ಯುವಕರು ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ನನ್ನ ಮುಂದಿನ ನೂರು ದಿನಗಳ ಹೋರಾಟಕ್ಕೆ ಉತ್ಸಾಹತುಂಬಿದೆ'ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT