ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬಾಪೂಜಿ ಕೇಂದ್ರದಲ್ಲಿ ಆರೋಗ್ಯ ಕಾರ್ಡ್‌

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ
Last Updated 7 ಜನವರಿ 2020, 12:46 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಪ್ರತಿ ಬಾಪೂಜಿ ಕೇಂದ್ರದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿವೆ. ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬದ ಸದಸ್ಯರಿಗೆ ವರ್ಷಕ್ಕೆ ತಲಾ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಸರ್ಕಾರಿ ಪ್ಯಾಕೇಜ್ ದರದ ಶೇ 30ರಷ್ಟು ವೆಚ್ಚದಲ್ಲಿ ₹ 1.50 ಲಕ್ಷ ವೆಚ್ಚ ಮಿತಿ ಇರುತ್ತದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಈವರೆಗೆ 8,691 ಕ್ಲೇಮ್‌ ಸಲ್ಲಿಸಲಾಗಿದೆ. ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ₹ 12.81 ಕೋಟಿ ಹಣ ಸರ್ಕಾರಿ ಹಾಗೂ ನೋಂದಾಯಿತ 4 ಆಸ್ಪತ್ರೆಗಳಿಗೆ ಪಾವತಿಯಾಗಿದೆ. ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿನ 2,967 ಪ್ರಕರಣಗಳಲ್ಲಿ ₹ 1.76 ಕೋಟಿ ಚಿಕಿತ್ಸಾ ಅನುದಾನ ಬಂದಿದ್ದು, ಆಸ್ಪತ್ರೆಗೆ ಅವಶ್ಯವಿರುವ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 3,54,403 ಬಿಪಿಎಲ್ ಕುಟುಂಬಗಳಿದ್ದು, 12,02,849 ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಗೆ ತರಬೇಕಿದೆ. 2019ರ ಡಿಸೆಂಬರ್ ಅಂತ್ಯದವರೆಗೆ2,98,296 ಜನರನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಉಳಿದವರನ್ನು ಯೋಜನೆ ವ್ಯಾಪ್ತಿಗೆ ತರಲು 134 ಸೇವಾ ಸಿಂಧು ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 35 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಜತೆಗೆ 154 ಗ್ರಾ.ಪಂಗಳ ಬಾಪೂಜಿ ಸೇವಾ ಕೇಂದ್ರದಲ್ಲೂ ಕಾರ್ಡ್ ವಿತರಿಸಲಾಗುತ್ತಿದೆ’ ಎಂದರು.

‘ಯೋಜನೆ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯ ತೀರ್ಮಾನದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಜಿಲ್ಲಾ ಸಂಯೋಜಕರ ಮೊಬೈಲ್ ಸಂಖ್ಯೆ 9480902005 ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1800 425 4325 ಸಂಪರ್ಕಿಸಿ ಮಾಹಿತಿ ಪಡೆಯಬಹುದು’ ಎಂದು ಹೇಳಿದರು.

ಸೀಮೆಎಣ್ಣೆ ಮುಕ್ತ

‘ಜಿಲ್ಲೆಯಲ್ಲಿ ಅಡುಗೆ ಅನಿಲ ರಹಿತ 42,911 ಪಡಿತರದಾರರಿಗೆ ಪ್ರತಿ ತಿಂಗಳು 3 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿತ್ತು. ಉಜ್ವಲ, ಅನಿಲಭಾಗ್ಯ ಯೋಜನೆ, ಸಿಎಸ್‌ಆರ್ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯನ್ನು ಸೀಮೆಎಣ್ಣೆ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಪಡಿತರದಾರರು ಇಚ್ಛಿಸಿದರೆ 1 ಲೀಟರ್ ಸೀಮೆಎಣ್ಣೆ ಪಡೆಯಬಹುದು. ಪಡಿತರ ವಿತರಣೆಯಲ್ಲೂ ಜಿಲ್ಲೆಯು 2ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ತರುವಂತೆ ಸೂಚಿಸಲಾಗಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾರಾಯಣಸ್ವಾಮಿ, ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಉಪ ನಿರ್ದೇಶಕ ನಾಗರಾಜ್ ಕೆಳಗಿನಮನೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT