ಬುಧವಾರ, ಫೆಬ್ರವರಿ 19, 2020
30 °C
ನರಸಾಪುರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ವಾಣಿ ಕಿವಿಮಾತು

ಹಣ– ಆಸ್ತಿಗಿಂತ ಆರೋಗ್ಯ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಆರೋಗ್ಯವಂತ ವಿದ್ಯಾರ್ಥಿಗಳು ಮಾತ್ರ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯ. ಈ ಸತ್ಯ ಅರಿತು ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಂಕಲ್ಪ ಮಾಡಿ’ ಎಂದು ನರಸಾಪುರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಎಚ್.ವಿ.ವಾಣಿ ಸಲಹೆ ನೀಡಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆಯಲ್ಲಿ ಮಾತನಾಡಿ, ‘ಆರೋಗ್ಯಕ್ಕಿಂತ ದೊಡ್ಡ ಭಾಗ್ಯವಿಲ್ಲ. ಹಣ, ಆಸ್ತಿ ಸಂಪಾದನೆಗಿಂತ ಆರೋಗ್ಯವಾಗಿರುವುದು ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಪರಿಸರ ಸಂರಕ್ಷಣೆಯಲ್ಲಿನ ವೈಫಲ್ಯದಿಂದ ಇಂದು ಸೊಳ್ಳೆ ಕಾಟ ಹೆಚ್ಚಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮನೆ ಮತ್ತು ಶಾಲೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಸುತ್ತಲ ಪರಿಸರ ಸ್ವಚ್ಛವಾಗಿದ್ದರೆ ಯಾವುದೇ ಕಾಯಿಲೆ ಬರುವುದಿಲ್ಲ’ ಎಂದು ಹೇಳಿದರು.

‘ಡೆಂಗಿ, ಚಿಕೂನ್‌ ಗುನ್ಯಾ ಕಾಯಿಲೆಗಳು ಜನರನ್ನು ಕಾಡುತ್ತಿವೆ. ಇದಕ್ಕೆ ಸೊಳ್ಳೆಗಳೇ ಕಾರಣ. ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮನುಷ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡ ಹೆಚ್ಚಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾದರೆ ರೋಗಮುಕ್ತ ಬದುಕು ಸಾಗಿಸಬಹುದು’ ಎಂದರು.

‘ಬಯಲು ಬಹಿರ್ದೆಸೆಯೇ ಜಂತು ಹುಳುಗಳು ಬರಲು ಕಾರಣ ಆಗುತ್ತದೆ. ಆದ್ದರಿಂದ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸುವಂತೆ ವಿದ್ಯಾರ್ಥಿಗಳು ಪೋಷಕರ ಮನವೊಲಿಸಬೇಕು. ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಶೌಚಾಲಯ ಕಟ್ಟಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಲಿಕೆಗೆ ಅಡ್ಡಿ: ‘ಬಯಲು ಬಹಿರ್ದೆಸೆಯಿಂದ ಜಂತು ಹುಳುಗಳು ದೇಹ ಸೇರುತ್ತವೆ, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜಂತು ಹುಳು ಸೋಂಕಿನಿಂದ ರಕ್ತಹೀನತೆ, ಅಪೌಷ್ಟಿಕತೆ, ನಿಶಕ್ತಿ, ವಾಂತಿ, ಭೇದಿ ಮೂಲಕ ದೇಹ ನಿತ್ರಾಣಗೊಳ್ಳುವ ಸಾಧ್ಯತೆಯಿದೆ. ಇದರಿಂದ ಕಲಿಕೆಗೆ ಅಡ್ಡಿಯಾಗುತ್ತದೆ’ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಸ್.ಅನಂತಪದ್ಮನಾಭ್ ಅಭಿಪ್ರಾಯಪಟ್ಟರು.

‘ಸರ್ಕಾರ 19 ವರ್ಷದೊಳಗಿನ ಮಕ್ಕಳಿಗೆ ಜಂತು ಹುಳು ನಿರ್ಮೂಲನೆ ಮಾತ್ರೆಯನ್ನು ವರ್ಷದಲ್ಲಿ 2 ಬಾರಿ ಉಚಿತವಾಗಿ ವಿತರಿಸುತ್ತದೆ. ಪೋಷಕರು ವದಂತಿಗೆ ಕಿವಿಗೂಟ್ಟು ಮಕ್ಕಳಿಗೆ ಮಾತ್ರೆ ಕೊಡಲು ಹಿಂದೇಟು ಹಾಕುತ್ತಾರೆ. ಆದರೆ, ಮಾತ್ರೆ ಸೇವನೆಯಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ’ ಎಂದು ಹೇಳಿದರು.

‘ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಎಲ್ಲಾ ಮಕ್ಕಳಿಗೆ ಜಂತು ಹುಳು ನಿರ್ಮೂಲನೆ ಮಾತ್ರೆ ನೀಡಲಾಗುತ್ತಿದೆ. ಈ ಮಾತ್ರೆ ಸೇವನೆಯಿಂದ ಆರೋಗ್ಯ ಕಾಪಾಡುವುದರ ಜತೆಗೆ ಅಪೌಷ್ಟಿಕತೆ ನಿವಾರಣೆಯಾಗಿ ಬೌದ್ಧಿಕ ಬೆಳವಣಿಗೆಯಾಗುತ್ತದೆ’ ಎಂದು ವಿವರಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಗೈರು ಹಾಜರಿಗೆ ಮಕ್ಕಳು ನೀಡುತ್ತಿರುವ ಪ್ರಮುಖ ಕಾರಣ ಆರೋಗ್ಯ ಸಮಸ್ಯೆ. ಇದು ತಪ್ಪಲು ಸ್ವಚ್ಛತೆ ಕಾಪಾಡಿಕೊಳ್ಳುವ ಅಗತ್ಯವಿದೆ. ಜಂತು ಹುಳು ನಿರ್ಮೂಲನಾ ಮಾತ್ರೆ ಬೆಲೆ 1ಕ್ಕೆ ₹15 ಇದೆ. ಈ ಮಾತ್ರೆ ನುಂಗಲು ಹಿಂಜರಿಕೆ ಬೇಡ’ ಎಂದರು.

ಶಾಲೆ ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಸಿ.ಎಲ್.ಶ್ರೀನಿವಾಸಲು, ಸುಗುಣ, ಫರೀದಾ, ವೆಂಕಟರೆಡ್ಡಿ, ಡಿ.ಚಂದ್ರಶೇಖರ್, ಸುನೀತಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು