ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‍ಐವಿ ಪೀಡಿತರಿಗೆ ಬದುಕುವ ಹಕ್ಕಿದೆ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಂಗಾಧರ್ ಹೇಳಿಕೆ
Last Updated 12 ಡಿಸೆಂಬರ್ 2019, 14:33 IST
ಅಕ್ಷರ ಗಾತ್ರ

ಕೋಲಾರ: ‘ಎಚ್‍ಐವಿ ಪೀಡಿತರಿಗೂ ಬದುಕುವ ಹಕ್ಕಿದೆ. ಅವರು ಸಮಾಜದಲ್ಲಿ ಎಲ್ಲರಂತೆ ಬದುಕಲು ಅನುವು ಮಾಡಿಕೊಡಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಮತ್ತು ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಯೌವ್ವನದಲ್ಲಿ ಮಾಡುವ ತಪ್ಪಿನಿಂದ ಅನೇಕ ಸಮಸ್ಯೆ ಎದುರಾಗುತ್ತವೆ. ವಿದ್ಯಾರ್ಥಿಗಳು ಆ ತಪ್ಪುಗಳಿಗೆ ಅವಕಾಶ ನೀಡದಿರಿ. ಸಂಯಮ ಹಾಗೂ ನೈತಿಕ ಮೌಲ್ಯ ಅರಿತು ಸಾಗಿದರೆ ಸಮಸ್ಯೆ ಎದುರಾಗದು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಯಾರು ಯಾರನ್ನೂ ದೂಷಿಸುವಂತಿಲ್ಲ. ನೆಮ್ಮದಿಯ ಬದುಕಿಗೆ ಇರುವ ಹಕ್ಕುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜತೆಗೆ ಕರ್ತವ್ಯ ಅರಿಯಬೇಕು’ ಎಂದರು.

‘ದೇಶದಲ್ಲಿ ಅನೇಕ ಕಾನೂನುಗಳಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕಾನೂನು ಅರಿಯುವುದು ಮುಖ್ಯ. ಎಲ್ಲಾ ಧರ್ಮಗಳ ಮೂಲ ಸಾರವೂ ಒಂದೇ ಆಗಿದೆ. ಯಾವುದೇ ಧರ್ಮ ಹಿಂಸೆ ಒಪ್ಪುವುದಿಲ್ಲ. ಸಂವಿಧಾನದ ಮೂಲವೂ ಅದೇ ಆಗಿದೆ. ಏನೇ ಆದರೂ ಮೊದಲು ಮಾನವನಾಗಬೇಕು. ಇನ್ನೊಬ್ಬರ ಹಕ್ಕಿಗೆ ಚ್ಯುತಿ ಆಗಬಾರದು’ ಎಂದು ಕಿವಿಮಾತು ಹೇಳಿದರು.

ಕೀಳು ಭಾವನೆ: ‘ಏಡ್ಸ್‌ ಮಾರಕ ರೋಗವಾಗಿದ್ದು, ಸಮಾಜದಲ್ಲಿ ಇದನ್ನು ನಿಯಂತ್ರಿಸದಿದ್ದರೆ ಸಂಕಷ್ಟ ಎದುರಾಗುತ್ತದೆ. ಎಚ್‌ಐವಿ ಸೋಂಕು ಪೀಡಿತರ ಬಗ್ಗೆ ಸಮಾಜದಲ್ಲಿ ಕೀಳು ಭಾವನೆಯಿದೆ. ಅಲ್ಲದೇ, ಅವರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಗದೀಶ್ ಬೇಸರ ವ್ಯಕ್ತಪಡಿಸಿದರು.

‘ಅಸುರಕ್ಷಿತ ಲೈಂಗಿಕತೆ, ಎಚ್‌ಐವಿ ಸೋಂಕು ತಗುಲಿರುವ ವ್ಯಕ್ತಿಗಳಿಂದ ರಕ್ತ ಪಡೆಯುವುದು, ಮಾದಕ ವಸ್ತುಗಳ ಸೇವನೆಯಿಂದ ಏಡ್ಸ್‌ ಬರುತ್ತದೆ. ಆದ ಕಾರಣ ದೃಢೀಕೃತ ರಕ್ತ ಕೇಂದ್ರಗಳಿಂದ ಮಾತ್ರ ರಕ್ತ ಪಡೆಯಬೇಕು. ರಕ್ತದಾನ ಮಾಡುವಾಗಲೂ ಎಚ್ಚರ ವಹಿಸಬೇಕು. ಎಚ್‍ಐವಿ ಸೋಂಕು ಹರಡುವ ವಿಧಾನಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಸಂಸ್ಕಾರ ಮುಖ್ಯ: ‘ಧರ್ಮ ಪಾಲಿಸುವುದರ ಜತೆಗೆ ಮತ್ತೊಬ್ಬರಿಗೆ ನೋವುಂಟು ಮಾಡಬಾರದು. ಜೀವನದಲ್ಲಿ ಶಿಕ್ಷಣದ ಜತೆ ಸಂಸ್ಕಾರ ಮುಖ್ಯ. ಗುರು ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಕೆ.ಮಂಜುನಾಥ್ ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಮೇಲ್ವಿಚಾರಕಿ ಹೇಮಲತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಯರಾಮ್‌, ವಕೀಲ ಕೆ.ಆರ್.ಧನರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT