ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ–ನಾಲಿಗೆ ಮೇಲೆ ಹಿಡಿತವಿರಲಿ: ಶಾಸಕ ಶ್ರೀನಿವಾಸಗೌಡ

Last Updated 27 ಅಕ್ಟೋಬರ್ 2021, 15:42 IST
ಅಕ್ಷರ ಗಾತ್ರ

ಕೋಲಾರ: ‘ದಾರಿಯಲ್ಲಿ ಹೋಗೊ ದಾಸಪ್ಪನೋರೆಲ್ಲಾ ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುತ್ತಿದ್ದಾರೆ. ರಾಜಕೀಯ ಇರುತ್ತೆ, ಹೋಗುತ್ತೆ. ಒಂದು ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಸರಿಯಲ್ಲ. ಬಾಯಿ ಮತ್ತು ನಾಲಿಗೆ ಮೇಲೆ ಹಿಡಿತ ಇರಬೇಕು’ ಎಂದು ಡಿಸಿಸಿ ಬ್ಯಾಂಕ್‌ ವಿರುದ್ಧದ ಟೀಕಾಕಾರರ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ಹರಿಹಾಯ್ದರು.

ತಾಲ್ಲೂಕಿನ ಕುರಗಲ್ ಗ್ರಾಮದಲ್ಲಿ ಬುಧವಾರ ನಡೆದ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸದಸ್ಯರ ಸಭೆ ಹಾಗೂ ಜನಸೇವಾ ಕೇಂದ್ರದ ಯೋಜನೆಯಡಿ ನಿರ್ಮಿಸಿರುವ ಗೋದಾಮು ಉದ್ಘಾಟಿಸಿ ಮಾತನಾಡಿದರು.

‘ಹಿಂದೆ ಡಿಸಿಸಿ ಬ್ಯಾಂಕ್‌ಗೆ ಬೀಗ ಹಾಕುವ ಪರಿಸ್ಥಿತಿ ಬಂದಿತ್ತು. ಡಿಸಿಸಿ ಬ್ಯಾಂಕ್ ಕತೆ ಮುಗಿಯಿತು ಎಂದೇ ಭಾವಿಸಿದ್ದೆ. ಆಗ ಬ್ಯಾಂಕ್‌ನ ನೆರವಿಗೆ ಯಾರೂ ಬರಲಿಲ್ಲ. ಬ್ಯಾಂಕ್‌ ಚೇತರಿಸಿಕೊಂಡು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇದನ್ನು ಸಹಿಸದೆ ಮಾತನಾಡುವ ದಾರಿಹೋಕರ ಟೀಕೆಗೆ ಕಿವಿಗೊಡುವ ಅಗತ್ಯವಿಲ್ಲ. ರಾಜಕೀಯ ಉದ್ದೇಶಕ್ಕೆ ಹೇಳಿಕೆ ನೀಡಿದರೆ ಅದನ್ನು ಜನ ನಂಬುವುದಿಲ್ಲ’ ಎಂದು ಹೇಳಿದರು.

‘ನಾನು ರಾಜಕೀಯಕ್ಕಿಂತ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದೇನೆ. ತಾಲ್ಲೂಕು ಸೊಸೈಟಿಯಿಂದ ಅಂತರರಾಷ್ಟ್ರೀಯ ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ಹೊರ ದೇಶದ ಸಹಕಾರ ಸಂಘದ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದೆ. ಈ ಕ್ಷೇತ್ರದ ಬಗ್ಗೆ ಅರಿವಿಲ್ಲದವರು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ತಾಕೀತು ಮಾಡಿದರು.

ಪಾಠ ಕಲಿಸಿ: ‘ಬ್ಯಾಂಕ್‌ನ ಅಭಿವೃದ್ಧಿ ಸಹಿಸಲಾರದವರು ನಾನಾ ಹೇಳಿಕೆ ನೀಡುತ್ತಿದ್ದಾರೆ. ರೈತರು ಮತ್ತು ಮಹಿಳೆಯರು ಬ್ಯಾಂಕ್‌ನ ಶಕ್ತಿಯಾಗಿದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ತಿಳಿಸಿದರು.

‘10 ವರ್ಷಗಳ ಹಿಂದೆ ಬ್ಯಾಂಕ್‌ ಹೀನಾಯ ಸ್ಥಿತಿಯಲ್ಲಿತ್ತು. ಆಗಿನ ಸರ್ಕಾರ ಅಡಳಿತಾಧಿಕಾರಿ ನೇಮಿಸಿದರೂ ಅಧಿಕಾರಿಗಳಿಂದ ಬ್ಯಾಂಕ್‌ ಉಳಿಸಲಾಗಲಿಲ್ಲ. ಹಿಂದೆ ಬ್ಯಾಂಕ್ ಹೀನಾಯ ಸ್ಥಿತಿಯಲ್ಲಿದ್ದ ಕಾರಣ ಸಾಲ ಮನ್ನಾ ಯೋಜನೆ ಪ್ರಯೋಜನ ಜಿಲ್ಲೆಗೆ ದೊರೆಯಲಿಲ್ಲ’ ಎಂದು ಬ್ಯಾಂಕ್‌ನ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ವಿವರಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣೇಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ. ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ವೆಂಕಟೇಶಪ್ಪ, ಕಡಗಟ್ಟೂರು ಸೊಸೈಟಿ ಅಧ್ಯಕ್ಷ ಕೆ.ವಿ.ದಯಾನಂದ್, ಉಪಾಧ್ಯಕ್ಷ ಡೇವಿಡ್, ನಿರ್ದೇಶಕರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT