ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ | ಮಾನವ–ಪ್ರಾಣಿಗಳ ಸಂಘರ್ಷ: ಆತಂಕದಲ್ಲಿ ರೈತರು

ವನ್ಯಜೀವಿಗಳಿಂದ ಬೆಳೆ ರಕ್ಷಣೆಗೆ ಹರಸಾಹಸ
ಮಂಜುನಾಥ ಎಸ್
Published 7 ಮೇ 2024, 6:20 IST
Last Updated 7 ಮೇ 2024, 6:20 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೊಟೆ ಹೋಬಳಿಯ ಗಡಿ ಭಾಗದಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿದೆ.

ಕಾಡಿನ ನಾಶ, ಬೆಂಕಿ, ಬರಗಾಲದಿಂದ ಕಾಡಿನಲ್ಲಿ ಮೇವು, ನೀರು ಸಿಗದೆ ಕಾಡು ಪ್ರಾಣಿಗಳು ಕಾಡಿನಿಂದ ನಾಡಿನತ್ತ ಮುಖ ಮಾಡುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಮತ್ತು ಬೂದಿಕೊಟೆ ಹೋಬಳಿಯ ಗಡಿ ಭಾಗದಲ್ಲಿರುವ ಜನರಿಗೆ ಕೃಷಿಯೇ ಜೀವನಾಧಾರವಾಗಿದ್ದು, ರೈತರು ಸಾಲ ಮಾಡಿ ಬೆಳೆದಂತಹ ಬೆಳೆಗಳು ಈಗ ಆನೆ, ಹಂದಿ, ಜಿಂಕೆ, ಮಂಗ, ನವಿಲುಗಳ ಪಾಲಾಗುತ್ತಿದ್ದು, ಬೆಳೆ ರಕ್ಷಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದಾರೆ.

ರಾತ್ರಿ ವೇಳೆ ಬೆಳೆ ರಕ್ಷಿಸಲು ಹೋಗಿ 13 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ನಡೆಯುತ್ತಿರುವ ಮಾವನ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇದಕ್ಕೆ ಸರ್ಕಾರಗಳು ಶಾಶ್ವತ ಪರಿಹಾರ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇನ್ನೂ ಅರಣ್ಯ ಇಲಾಖೆಯವರು ಮೃತಪಟ್ಟ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಧನ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ರಾತ್ರಿ ವೇಳೆ ವಿದ್ಯುತ್‌ ನೀಡುತ್ತಿದ್ದು, ಬೆಳೆಗಳಿಗೆ ನೀರು ಹಾಯಿಸಲು ಹೋಗಿ ರೈತರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಇದರಿಂದ ಬೇಸತ್ತ ಹಲವು ಮಂದಿ ಕೃಷಿಯನ್ನು ತೊರೆದು ನಗರಗಳತ್ತ ಕೆಲಸಕ್ಕೆ ವಲಸೆ ಹೊರಟಿದ್ದಾರೆ.

ಸರ್ಕಾರವು ಕಾಮಸಮುದ್ರ ಹೋಬಳಿಯ ಅರಣ್ಯ ಪ್ರದೇಶವನ್ನು ಆನೆಗಳ ವನ್ಯಧಾಮ ಎಂದು ಘೋಷಿಸಿ ಹಲವು ವರ್ಷಗಳು ಕಳೆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆನೆ ದಾಳಿಯಿಂದ ರೈತ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತರಿಗೆ ಜೀವನೋಪಾಯಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬುದು ರೈತರ ಒತ್ತಾಯವಾಗಿದೆ.

ಮಾನವ ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಅರಣ್ಯದಲ್ಲಿ ಪ್ರಾಣಿಗಳಿಗೆ ಮೇವು ನೀರಿನ ವ್ಯವಸ್ಥೆ ಮಾಡಬೇಕು. ಜತೆಗೆ ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಜನ ಜಾಗೃತಿ ಮೂಡಿಸಬೇಕು
ಬಿ.ಕೆ.ಮಂಜುನಾಥ ಬಲಮಂದೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು
ರೈತರು ಎಚ್ಚರದಿಂದ ಇರಬೇಕು
ಆನೆಗಳು ಅತ್ಯಂತ ವೇಗವಾಗಿ ಓಡುವ ಆಕ್ರಮಣಕಾರಿ ಜೀವಿಗಳು. ಪ್ರಚೋದನೆಗೆ ಒಳಗಾದ ಯಾವುದೇ ವನ್ಯಜೀವಿಗಳು ತಮ್ಮ ಆತ್ಮರಕ್ಷಣೆಗಾಗಿ ದಾಳಿ ನಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ವನ್ಯಜೀವಿಗಳಿಂದ ಯಾವಾಗಲೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಅತಿಮುಖ್ಯ. ಆನೆ ದಾಳಿಯಿಂದ ಮೃತಪಟ್ಟ ರೈತರಲ್ಲಿ ಶೇಕಡ 95ರಷ್ಟು ರೈತರ ಮೇಲೆ ಮುಂಜಾನೆಯೇ ದಾಳಿ ನಡೆಸಿವೆ. ಅವು ಮುಂಜಾನೆ 4 ರಿಂದ 6 ಗಂಟೆ ಸಮಯದಲ್ಲಿ ಆನೆಗಳು ಕಾಡಿಗೆ ಹಿಂದಿರುಗುವ ಸಮಯ. ಆ ವೇಳೆ ಅಡ್ಡ ಬಂದವರ ಮೇಲೆ ಪ್ರಾಣ ರಕ್ಷಣೆಗಾಗಿ ದಾಳಿ ಮಾಡುತ್ತವೆ. ಆ ಸಮಯದಲ್ಲಿ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ವೇಣು ಅವರ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT