ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ಉಲ್ಲಂಘನೆ: ವಿದ್ಯಾವಂತರ ಮೌನ

ಬೆಂಗಳೂರು ಉತ್ತರ ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಕುಮುದಾ ಕಳವಳ
Last Updated 10 ಡಿಸೆಂಬರ್ 2019, 16:12 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾರ್ಥಿಗಳು ಮಾನವ ಹಕ್ಕುಗಳ ಮಹತ್ವ ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಿ.ಕುಮುದಾ ಸಲಹೆ ನೀಡಿದರು.

ಬೆಂಗಳೂರು ಉತ್ತರ ವಿ.ವಿ ಹಾಗೂ ಬರ್ಡ್ಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿ, ‘ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೂ ವಿದ್ಯಾವಂತರು ಮೌನವಾಗಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜನ ಸ್ವತಂತ್ರವಾಗಿದ್ದರೂ ಶೋಷಕರ ಮಧ್ಯೆ ಬದುಕುತ್ತಿದ್ದಾರೆ. ಇದಕ್ಕೆ ಹಕ್ಕುಗಳ ಉಲ್ಲಂಘನೆ ಪ್ರಶ್ನಿಸದಿರುವುದು ಕಾರಣ. ಸಮಾಜದಲ್ಲಿ ಪ್ರತಿ 3 ಸೆಕೆಂಡ್‌ಗೆ 1 ಅಪರಾಧ ಪ್ರಕರಣ ಸಂಭವಿಸುತ್ತಿದೆ. ಜನರು ತಮ್ಮ ಹಕ್ಕು ಕಾಪಾಡಿಕೊಳ್ಳುವುದರ ಜತೆಗೆ ಇತರರ ಹಕ್ಕುಗಳನ್ನು ರಕ್ಷಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆ ಹೊರತು ಮತ್ತೊಬ್ಬರ ಹಕ್ಕು ಕಸಿದುಕೊಳ್ಳಬಾರದು. ಪ್ರತಿ ಹಂತದಲ್ಲೂ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಕಾಲಕ್ರಮೇಣ ಅಗೌರವ ಕಡಿಮೆ ಮಾಡಬೇಕು. ಹಕ್ಕುಗಳು ಏನೆಂದು ಅರ್ಥ ಮಾಡಿಕೊಳ್ಳಬೇಕು. ಹಕ್ಕುಗಳ ಉಲ್ಲಂಘನೆಯ ಲಕ್ಷ್ಮಣ ರೇಖೆ ದಾಟದೆ ಉತ್ತಮ ಸಮಾಜ ಸೃಷ್ಟಿಸಬೇಕು’ ಎಂದು ತಿಳಿಸಿದರು.

ಹಕ್ಕು ಉಲ್ಲಂಘನೆ: ‘ದೇಶದಲ್ಲಿ ಸಂವಿಧಾನದಡಿಯ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಅನಾದಿ ಕಾಲದಿಂದಲೂ ಹಂತ ಹಂತವಾಗಿ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ’ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಅಶೋಕ್ ಆಂಟೋನಿ ಡಿಸೋಜಾ ವಿಷಾದಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಮತ್ತು ಪುರೋಹಿತಶಾಹಿ ವರ್ಗಗಳು ಹಕ್ಕುಗಳ ಉಲ್ಲಂಘನೆಯಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿವೆ. ಶೋಷಿತ ಸಮುದಾಯಗಳಿಂದ ಹೊರಬಂದು ಸ್ವತಂತ್ರ ಚೌಕಟ್ಟಿನಲ್ಲಿ ಬದುಕುವ ವಾತಾವರಣ ಸೃಷ್ಟಿಸಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

‘ಸಮಾಜದಲ್ಲಿ ಜಾತಿ ವ್ಯವಸ್ಥೆ, ರಾಜಕೀಯ, ಹಣ, ಧರ್ಮದ ಬಲದಿಂದಾಗಿ ಹೊಸ ವ್ಯವಸ್ಥೆ ಬರಲು ಸಾಧ್ಯವಿಲ್ಲ. ಸಾಮಾಜಿಕ ಬದಲಾವಣೆ ತರಲು ಸಾಧ್ಯವಿಲ್ಲ. ಅನ್ಯಾಯವನ್ನು ಪ್ರಶ್ನಿಸುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಾಗೃತಿ ಮೂಡಿಸಿ: ‘ವಿದ್ಯಾರ್ಥಿಗಳು ಸಮಾಜದ ಆಗುಹೋಗುಗಳ ಕಡೆ ಗಮನ ಹರಿಸಬೇಕು. ಸಮಾಜ ವಿರೋಧಿ ಚಟುವಟಿಕೆ ನಿಯಂತ್ರಣಕ್ಕೆ ಪಣ ತೊಡಬೇಕು’ ಎಂದು ಬೆಂಗಳೂರಿನ ಎಸ್‌ಎಂಸಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಪ್ರೊ.ವಿಕ್ಟರ್‌ ದಾಸ್ ತಿಳಿಸಿದರು.

‘ಯುವಕರು ಜವಾಬ್ದಾರಿ ಅರಿತು ಬದುಕು ರೂಪಿಸಿಕೊಳ್ಳಬೇಕು. ಹಕ್ಕುಗಳ ಅರಿವಿಲ್ಲದೆ ಸಾಕಷ್ಟು ಮಂದಿ ಅವಕಾಶ ವಂಚಿತರಾಗುತ್ತಿದ್ದಾರೆ. ಶೋಷಿತ ವರ್ಗದವರಿಗೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದು ಹೇಳಿದರು.

ಬೆಂಗಳೂರು ಉತ್ತರ ವಿ.ವಿ ಸಮಾಜಶಾಸ್ತ್ರ ವಿಭಾಗದ ಸಂಯೋಜಕ ಪ್ರೊ.ಗುಂಡಪ್ಪ, ಬರ್ಡ್ಸ್ ಸಂಸ್ಥೆ ನಿರ್ದೇಶಕ ಅಲ್ಬರ್ಟ್ ಕ್ಸೇವಿಯರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT