ಸೋಮವಾರ, ನವೆಂಬರ್ 30, 2020
24 °C
ಹೈನೋದ್ಯಮ ರೈತರ ಬೆನ್ನೆಲುಬು: ಕೋಚಿಮುಲ್‌ ನಿರ್ದೇಶಕ ಹರೀಶ್‌ ಹೇಳಿಕೆ

ರಾಸುಗಳಿಗೆ ವಿಮೆ ಯೋಜನೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರ ಹಿತದೃಷ್ಟಿಯಿಂದ ರಾಸುಗಳಿಗೆ ವಿಮಾ ಯೋಜನೆ ಜಾರಿಗೆ ತಂದಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕಿವಿಮಾತು ಹೇಳಿದರು.

ನಗರದಲ್ಲಿ ಮಂಗಳವಾರ ಗುಂಪು ವಿಮೆ ಯೋಜನೆ ಫಲಾನುಭವಿಗಳಿಗೆ ₹ 17 ಲಕ್ಷ ಮೊತ್ತದ ಚೆಕ್‌ ವಿತರಿಸಿ ಮಾತನಾಡಿ, ‘ಜಿಲ್ಲೆಯ ರೈತರು ಹೈನೋದ್ಯಮ ನಂಬಿ ಜೀವನ ನಡೆಸುತ್ತಿದ್ದಾರೆ. ಈ ರೈತರಿಗೆ ಸೌಕರ್ಯ ಕಲ್ಪಿಸದಿದ್ದರೆ ಮೋಸ ಮಾಡಿದಂತೆ’ ಎಂದರು.

‘ಹೈನೋದ್ಯಮವು ರೈತರ ಬೆನ್ನೆಲುಬು. ಬಹುಪಾಲು ರೈತ ಕುಟುಂಬಗಳು ಜೀವನ ನಿರ್ವಹಣೆಗೆ ಹೈನುಗಾರಿಕೆ ಅವಲಂಬಿಸಿವೆ. ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದ ಕಾರಣ ರಾಸುಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ’ ಎಂದು ಸಲಹೆ ನೀಡಿದರು.

‘ರೈತರು ಬರ ಪರಿಸ್ಥಿತಿ ನಡುವೆಯೂ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರೈತರಿಗೆ ನೆರವು ನೀಡಲು ಒಕ್ಕೂಟ ಮುಂದಾಗಿದೆ. ಹಾಲು ಉತ್ಪಾದಕರ ಕುಟುಂಬ ಸದಸ್ಯರಿಗೆ ₹ 1 ಲಕ್ಷದವರೆಗೆ ವೈದ್ಯಕೀಯ ವೆಚ್ಚ ಹಾಗೂ ಆಕಸ್ಮಿಕವಾಗಿ ಮೃತಪಟ್ಟರೆ ₹ 3 ಲಕ್ಷ ಪರಿಹಾರ ನೀಡಲಾಗುತ್ತದೆ. ಮೃತ ರಾಸುಗಳಿಗೆ ಪರಿಹಾರ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ರೈತರು ₹ 585 ಪಾವತಿಸಿ ರಾಸುಗಳಿಗೆ ವಿಮೆ ಮಾಡಿಸಬಹುದು. ಆಕಸ್ಮಿಕವಾಗಿ ಮೃತಪಟ್ಟ ಪ್ರತಿ ರಾಸುವಿಗೆ ₹ 70 ಸಾವಿರದವರೆಗೆ ಪರಿಹಾರ ಸಿಗುತ್ತದೆ. ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಒಕ್ಕೂಟದಿಂದ ವಸತಿನಿಲಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುತ್ತಿದೆ’ ಎಂದು ಹೇಳಿದರು.

ವೈಜ್ಞಾನಿಕ ದರ: ‘ರೈತರು ಹೈನೋದ್ಯಮ ಕ್ಷೇತ್ರದಿಂದ ದೂರ ಸರಿಯಬಾರದು. ಗ್ರಾಮೀಣ ಭಾಗದಲ್ಲಿ ಹಾಲು ಸಂಘ ಅಭಿವೃದ್ಧಿಪಡಿಸಿದರೆ ರೈತರು ಆರ್ಥಿಕವಾಗಿ ಸಬಲರಾಗಬಹುದು. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾಲು ಉತ್ಪಾದಕರಿಗೆ ವೈಜ್ಞಾನಿಕ ದರ ಪಟ್ಟಿಯಂತೆ ದರ ನೀಡಬೇಕು. ಒಕ್ಕೂಟದ ಸವಲತ್ತುಗಳು ಹಾಲು ಉತ್ಪಾದಕರಿಗೆ ಸಕಾಲಕ್ಕೆ ತಲುಪಬೇಕು’ ಎಂದು ಸೂಚಿಸಿದರು.

‘ಬೇಸಿಗೆಯಲ್ಲಿ ರಾಸುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಈಗಿನಿಂದಲೇ ಮೇವು ಬೆಳೆಯಲು ಆರಂಭಿಸಿ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಒಕ್ಕೂಟಕ್ಕೆ ಹೆಚ್ಚು ಲಾಭ ಬಂದರೆ ಆ ಹಣವನ್ನು ರೈತರ ಉಪಯೋಗಕ್ಕೆ ನೀಡಲಾಗುತ್ತದೆ’ ಎಂದರು.

ಲಸಿಕೆ ಹಾಕಿಸಿ: ‘ಬಿಎಂಸಿ ಕೇಂದ್ರಗಳಲ್ಲಿ ಶೇಖರಣೆಯಾಗುವ ಹಾಲು ಗುಣಮಟ್ಟ ಮತ್ತು ಕಲಬೆರಕೆರಹಿತವಾಗಿ ಇರಬೇಕು. ಹಾಲು ಕಲಬೆರಕೆ ಮಾಡುವುದು ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಅಪರಾಧ. ರಾಸುಗಳಿಗೆ ವರ್ಷದಲ್ಲಿ 2 ಬಾರಿ ಕಡ್ಡಾಯವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ತಿಳಿಸಿದರು.

ಕೋಚಿಮುಲ್‌ ವಿಸ್ತರಣಾಧಿಕಾರಿ ವಿ.ರಾಜಬಾಬು, ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.