ಮಂಗಳವಾರ, ಮಾರ್ಚ್ 9, 2021
28 °C
ರಾಜ್ಯ ಕ್ವಾರಿ ಗುತ್ತಿಗೆದಾರರ ಮತ್ತು ವೃತ್ತಿಪರ ಕಾರ್ಮಿಕರ ಮಹಾಸಂಘದ ಆರೋಪ

ವೃತ್ತಿಪರ ಕಲ್ಲು ಕುಟಿಕರಿಗೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಂಘದ ಅಧ್ಯಕ್ಷ ಆಂಜನಪ್ಪರ ಮೇಲೆ ಮಂಜು ಮತ್ತು ಸಹಚರರು ಸುಳ್ಳು ಆರೋಪ ಮಾಡಿದ್ದಾರೆ’ ಎಂದು ರಾಜ್ಯ ಕ್ವಾರಿ ಗುತ್ತಿಗೆದಾರರ ಮತ್ತು ವೃತ್ತಿಪರ ಕಾರ್ಮಿಕರ ಮಹಾಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಶಂಕರಚಾರಿ ದೂರಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಂಜು ಸಹಚರರು ಬಂಡವಾಳಶಾಹಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭ್ರಷ್ಟ ಅಧಿಕಾರಿಗಳ ಶಾಮೀಲಾಗಿದ್ದಾರೆ. ಚೌಡೇಶ್ವರಿ ಸಂಘದ ಹೆಸರಿನಲ್ಲಿ ಅಕ್ರಮವಾಗಿ ಕಲ್ಲು ಬಂಡೆ ಬ್ಲಾಕ್‌ಗಳನ್ನು ಮಂಜೂರು ಮಾಡಿಸಿಕೊಂಡು ವೃತ್ತಿಪರ ಕಲ್ಲು ಕುಟಿಕರಿಗೆ ಕೆಲಸ ಸಿಗದಂತೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಲಂಚದಾಸೆಗೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದಾರೆ. ಕೋಲಾರ ತಾಲ್ಲೂಕಿನ ದಿನ್ನೆಹೊಸಹಳ್ಳಿ, ದಾನವಹಳ್ಳಿ ಸುತ್ತಮುತ್ತ ಸರ್ವೆ ನಂಬರ್‌ಗಳನ್ನು ಬಂಡೆ ಜಾಗವನ್ನು ಅಕ್ರಮವಾಗಿ ಬ್ಲಾಕ್‌ಗಳಾಗಿ ವಿಂಗಡಿಸಿದ್ದಾರೆ’ ಎಂದು ದೂರಿದರು.

‘ದಿನ್ನೆಹೊಸಹಳ್ಳಿಯ ಸರ್ವೆ ನಂಬರ್‌ 58 ಮತ್ತು ದಾನವಹಳ್ಳಿಯ ಸರ್ವೆ ನಂಬರ್‌ 2ರಲ್ಲಿ ಮಂಜು, ನಾಗಪ್ಪ, ವಿಜಯಕುಮಾರ್‌ ಎಂಬುವರು ತಲಾ 3 ಎಕರೆ 10 ಗುಂಟೆ ಹಾಗೂ ಅವರ ಸಂಬಂಧಿಕರು 16 ಎಕರೆ ಬಂಡೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಮಂಜು ಮತ್ತು ಮತ್ತು ನಮ್ಮ ಕುಟುಂಬದವರು ಗಣಿಗಾರಿಕೆ ನಡೆಸುತ್ತಿದ್ದ ಜಾಗವನ್ನು ನಾವು ಕಾನೂನು ಪ್ರಕಾರ ಲೀಸ್‌ಗೆ ಪಡೆದು ಸುಮಾರು 40 ವರ್ಷದಿಂದ ಸರ್ಕಾರಕ್ಕೆ ರಾಜಧನ ಪಾವತಿಸುತ್ತಿದ್ದೇವೆ. ಆದರೆ, ಮಂಜು ಮತ್ತು ಕುಟುಂಬದವರ ಕುತಂತ್ರದಿಂದ ಹಳೇ ಲೀಸ್‌ದಾರರಿಗೆ ಅನ್ಯಾಯವಾಗಿದೆ’ ಎಂದರು.

ನವೀಕರಿಸಲಿಲ್ಲ: ‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿಗದಿತ ಕಾಲಮಿತಿಯಲ್ಲಿ ಲೀಸ್‌ ನವೀಕರಿಸಲಿಲ್ಲ. ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಶಾಮೀಲಾಗಿ 40 ಮಂದಿಯ ನಿರಾಕ್ಷೇಪಣಾ ಪತ್ರ ತಿರಸ್ಕರಿಸಿ ಲೀಸ್‌ ರದ್ದು ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಲಾಟರಿ ಮೂಲಕ ಲೀಸ್‌ ನೀಡಿಕೆಯಲ್ಲೂ ಅಕ್ರಮ ಎಸಗಿದ್ದಾರೆ. ನ್ಯಾಯಾಲಯವು ಹಳೇ ಲೀಸ್‌ದಾರರಿಗೆ ಮತ್ತೆ ಅವಕಾಶ ಕೊಡಬೇಕೆಂದು ಸೂಚಿಸಿದ್ದರೂ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಧಿಕ್ಕರಿಸಿ ತಮಗೆ ಬೇಕಾದವರಿಗೆ ಬ್ಲಾಕ್‌ ಹಂಚಿಕೆ ಮಾಡಿದ್ದಾರೆ. ಇದರಿಂದ 400 ಮಂದಿ ಕಲ್ಲು ಕುಟಿಕರ ಕುಟುಂಬಗಳು ಬೀದಿ ಪಾಲಾಗಿವೆ’ ಎಂದು ಹೇಳಿದರು.

‘ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಾನೂನು ಉಲ್ಲಂಘಿಸಿರುವ ಮತ್ತು ನ್ಯಾಯಾಲಯದ ಆದೇಶ ನಿರ್ಲಕ್ಷಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಜತೆಗೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬಡ ವೃತ್ತಿಪರ ಕಲ್ಲು ಕುಟಿಕರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ದೇವರಾಜ್ ಮತ್ತು ಪೃಥ್ವಿರಾಜ್‌, ಅನಿಲ್‌ಕುಮಾರ್, ಅಂಬರೀಶ್‌ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು