ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸೇವೆ ಕಾಯಂಗೆ ಒತ್ತಾಯ: ಪೌರ ಕಾರ್ಮಿಕರ ಪ್ರತಿಭಟನೆ

ಅಧಿಕಾರಿಗಳ ಮೀನಮೇಷ: ಪ್ರತಿಭಟನಾಕಾರರ ಆಕ್ರೋಶ
Last Updated 19 ಮೇ 2022, 13:27 IST
ಅಕ್ಷರ ಗಾತ್ರ

ಕೋಲಾರ: ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರಸಭೆ ಪೌರ ಕಾರ್ಮಿಕರ ಮಹಾ ಸಂಘದ ಸದಸ್ಯರು ಇಲ್ಲಿ ಗುರುವಾರ ಪ್ರತಿಭಟನೆ ಮಾಡಿದರು.

ನಚಿಕೇತನ ವಿದ್ಯಾರ್ಥಿನಿಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ‘ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸೇವಾ ಭದ್ರತೆಯಿಲ್ಲ. ಸೇವೆ ಕಾಯಂಗೊಳಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವುದನ್ನು 2017-18ರಲ್ಲಿ ರದ್ದುಪಡಿಸಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಎಲ್ಲಾ ಪೌರ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬಹುತೇಕ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ದುಡಿಯುವಂತಾಗಿದೆ’ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.

‘ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಬದುಕು ಶೋಚನಿಯವಾಗಿದೆ. ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಕೊಡದೆ ಶೋಷಿಸಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದ್ದು, ಕಾರ್ಮಿಕರು ಬಡ್ಡಿ ಸಾಲ ಮಾಡಿ ಬದುಕು ಸಾಗಿಸುವಂತಾಗಿದೆ’ ಎಂದರು.

‘ಸಚಿವ ಸಂಪುಟದ ತೀರ್ಮಾನದಂತೆ ಎಲ್ಲಾ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳು ಕಾರ್ಮಿಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಬಗ್ಗೆ ಕಾರ್ಮಿಕರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಕಿಡಿಕಾರಿದರು.

ಅಧಿಕಾರಿಗಳ ತಾರತಮ್ಯ: ‘ಟ್ರ್ಯಾಕ್ಟರ್‌, ಲಾರಿ ಹಾಗೂ ಆಟೊಗಳಿಗೆ ಕಸ ತುಂಬುವವರು, ಸಾಗಿಸುವವರು ಮತ್ತು ಒಳ ಚರಂಡಿ, ಮಲಮೂತ್ರ ಸ್ವಚ್ಛಗೊಳಿಸುವವರನ್ನು ಸಫಾಯಿ ಕರ್ಮಚಾರಿಗಳೆಂದು ಕರೆಯುತ್ತಾರೆ. ಆದರೆ, ಅಧಿಕಾರಿಗಳು ಕಾರ್ಮಿಕರನ್ನು ವಿಂಗಡಿಸಿ ತಾರತಮ್ಯ ಮಾಡುತ್ತಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಗುತ್ತಿಗೆ ಪದ್ಧತಿ ಸಂಪೂರ್ಣವಾಗಿ ರದ್ದುಗೊಳಿಸಲು ಇಷ್ಟವಿಲ್ಲದ ಅಧಿಕಾರಿಗಳು ಗುತ್ತಿಗೆದಾರರಿಂದ ಕಮಿಷನ್ ಪಡೆದು ಪೌರ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ. ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂ ಮಾಡಬೇಕು. ಕಾರ್ಮಿಕ ಕಾನೂನು ಪ್ರಕಾರ ಸರ್ಕಾರಿ ಸವಲತ್ತು ನೀಡಬೇಕು. ತಿಂಗಳೊಳಗೆ ಸೇವೆ ಕಾಯಂಗೊಳಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯೆ ಪದ್ಮಾ, ಪೌರ ಕಾರ್ಮಿಕರಾದ ನಾರಾಯಣಸ್ವಾಮಿ, ವೆಂಕಟಲಕ್ಷ್ಮಮ್ಮ, ನಾಗೇಶ್‌, ಹರೀಶ್‌, ವೆಂಕಟೇಶ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT