ಶುಕ್ರವಾರ, ಮಾರ್ಚ್ 31, 2023
32 °C
ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೇಳಿಕೆ

ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ: ಗೋವಿಂದಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್‌) ಜುಲೈ 31ರೊಳಗೆ ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿ ಮೂಲಕ ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಅನುಷ್ಠಾನದ ಗುತ್ತಿಗೆ ಪಡೆದಿರುವ ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳೊಂದಿಗೆ ಇಲ್ಲಿ ಶುಕ್ರವಾರ ಆನ್‌ಲೈನ್‌ ಮೂಲಕ ಸಭೆ ನಡೆಸಿದ ಅವರು, ‘ದೇಶದಲ್ಲೇ ಮಾದರಿ ವ್ಯವಸ್ಥೆಯಾಗಿಸುವ ನಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಕೆಲಸ ಮಾಡಿ’ ಎಂದರು.

‘ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಜಾರಿಯು ನಮ್ಮ ಹಾಗೂ ಆಡಳಿತ ಮಂಡಳಿಯ ಕನಸಾಗಿದೆ. ಇದಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ 188 ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಸಿಇಒಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಸಹಕಾರಿ ವ್ಯವಸ್ಥೆ ಕುರಿತು ನಂಬಿಕೆ ಮತ್ತಷ್ಟು ಬಲಗೊಳ್ಳಲು ಗಣಕೀಕೃತ ಲೆಕ್ಕಪರಿಶೋಧನೆಯು ಅತಿ ಮುಖ್ಯ ಹಂತ. ಇದರಿಂದ ಗ್ರಾಹಕರಲ್ಲಿ ವಿಶ್ವಾಸ ವೃದ್ಧಿಯಾಗುವುದರ ಜತೆಗೆ ಅಂದಿನ ವಹಿವಾಟಿನ ಲೆಕ್ಕ ಅಂದೇ ಆನ್‌ಲೈನ್‌ನಲ್ಲಿ ದಾಖಲಾಗುವ ಮೂಲಕ ಆರ್ಥಿಕ ಅಪರಾಧ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜುಲೈ ಗಡುವು: ‘ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನದಲ್ಲಿ ವಿ-ಸಾಫ್ಟ್ ಸಂಸ್ಥೆ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಸರಿಯಲ್ಲ. ಜುಲೈ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲೇಬೇಕು. ಪ್ರತಿ 15 ಸೊಸೈಟಿಗಳಿಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ತಾಕೀತು ಮಾಡಿದರು.

‘ಅವಿಭಜಿತ ಜಿಲ್ಲೆಯ 188 ಪ್ಯಾಕ್ಸ್‌ಗಳ ಪೈಕಿ ಈಗಾಗಲೇ 21 ಸೊಸೈಟಿಗಳಲ್ಲಿ ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನ ಮುಗಿದಿದೆ. 41 ಸೊಸೈಟಿಗಳಲ್ಲಿ ಈ ಕಾರ್ಯ ಮುಕ್ತಾಯದ ಹಂತದಲ್ಲಿದೆ. 26 ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗಣಕೀಕೃತ ಲೆಕ್ಕಪರಿಶೋಧನೆ ಜಾರಿಯಲ್ಲಿ ವಿಫಲವಾಗುವ ಯಾವುದೇ ಪ್ಯಾಕ್ಸ್‌ಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ನೀಡುವುದಿಲ್ಲ. ಸಹಕಾರಿ ವ್ಯವಸ್ಥೆ ಬಲಗೊಳಿಸಿ ಪಾರದರ್ಶಕ ವ್ಯವಸ್ಥೆಯಲ್ಲಿ ಜನರ ನಂಬಿಕೆ ಉಳಿಸಿಕೊಳ್ಳಲು ಈ ಕಾರ್ಯ ಆಗಲೇಬೇಕು’ ಎಂದು ಹೇಳಿದರು.

ಬದ್ಧತೆಯಿದೆ: ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗಿಯಾದ ವಿ-ಸಾಫ್ಟ್‌ ಸಂಸ್ಥೆ ಮುಖ್ಯಾಧಿಕಾರಿ ಸಿರೀಶ್‌, ‘ನಿಮ್ಮ ಸಂಕಲ್ಪಕ್ಕೆ ನಮ್ಮ ಬದ್ಧತೆಯಿದೆ. ಜುಲೈ 31ರೊಳಗೆ ಗಣಕೀಕೃತ ಲೆಕ್ಕಪರಿಶೋಧನೆ ಅನುಷ್ಠಾನ ಪೂರ್ಣಗೊಳಿಸುತ್ತೇವೆ. ಈ ಕಾರ್ಯಕ್ಕೆ ಹೆಚ್ಚಿನ ನುರಿತ ಸಿಬ್ಬಂದಿ ನಿಯೋಜಿಸುತ್ತೇವೆ. ಶನಿವಾರ ಹಾಗೂ ಭಾನುವಾರ ಸಹ ಕೆಲಸ ಮಾಡುತ್ತೇವೆ’ ಎಂದರು.

‘ಗಣಕೀಕೃತ ಲೆಕ್ಕಪರಿಶೋಧನೆ ವ್ಯವಸ್ಥೆ ಅನುಷ್ಠಾನದಲ್ಲಿ ತೀವ್ರ ಹಿನ್ನಡೆ ಹೊಂದಿರುವ ಸಹಕಾರ ಸಂಘಗಳ ಮಾಹಿತಿ ಕೊಡಿ. ಕೋಲಾರ ತಾಲ್ಲೂಕಿನ ಹುತ್ತೂರು, ಕಸಬಾ ದಕ್ಷಿಣ, ಅರಹಳ್ಳಿ ಸೊಸೈಟಿಗಳು ಈ ಕಾರ್ಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ವಿವರಿಸಿದರು.

ಬ್ಯಾಂಕ್‌ನ ತಾಂತ್ರಿಕ ಸಹಾಯಕ ಹ್ಯಾರೀಸ್, ವಿ-ಸಾಫ್ಟ್ ಸಂಸ್ಥೆ ಅಧಿಕಾರಿಗಳಾದ ವಿಶ್ವ, ಸತೀಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು