ಸಾಲ ವಿತರಣೆಯಲ್ಲಿ ಲೋಪವಾದರೆ ತೊಂದರೆ: ಗೋವಿಂದಗೌಡ ಖಡಕ್‌ ಎಚ್ಚರಿಕೆ

ಶನಿವಾರ, ಮೇ 25, 2019
32 °C
ಎಸ್‍ಎಫ್‌ಸಿಎಸ್‌ ಸಿಇಒಗಳಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೂಚನೆ

ಸಾಲ ವಿತರಣೆಯಲ್ಲಿ ಲೋಪವಾದರೆ ತೊಂದರೆ: ಗೋವಿಂದಗೌಡ ಖಡಕ್‌ ಎಚ್ಚರಿಕೆ

Published:
Updated:
Prajavani

ಕೋಲಾರ: ‘ಬೆಳೆ ಸಾಲ ವಿತರಣೆಯಲ್ಲಿ ಸೊಸೈಟಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಲೋಪ ಎಸಗಿದರೆ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ನಡೆದ ಜಿಲ್ಲೆಯ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಗಳ (ಎಸ್‍ಎಫ್‌ಸಿಎಸ್‌) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸಾಲ ವಿತರಣೆಗೂ ಮುನ್ನ ರೈತರು ಬೆಳೆ ಬೆಳೆಯುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಸಾಲ ಕೊಡಿ’ ಎಂದು ಸೂಚಿಸಿದರು.

‘ಸಾಲಕ್ಕಾಗಿ ಯಾರೇ ಅರ್ಜಿ ಸಲ್ಲಿಸಿದರೂ ಸ್ಥಳ ಪರಿಶೀಲನೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಸ್ಥಳ ಪರಿಶೀಲನೆ ಮಾಡದೆ ಸಾಲ ನೀಡಬಾರದು. ಇನ್ನು ಮುಂದೆ ಸ್ಯಾಟಲೈಟ್ ಸರ್ವೆ ಮಾಡಿ ಸಿಕ್ಕಿಬಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಬೆಳೆ ಸಾಲ ವಿತರಣೆ ವಿಚಾರದಲ್ಲಿ ಸಿಇಒಗಳು ಪ್ರಾಮಾಣಿಕರಾಗಿರಬೇಕು. ರೈತರಿಗೆ ಎಷ್ಟು ಬೇಕಾದರೂ ಸಾಲ ಸೌಲಭ್ಯ ಕಲ್ಪಿಸಿ. ಆಡಳಿತ ಮಂಡಳಿಯವರ ಮಾತು ಕೇಳಿ ಕೈ ಕಟ್ಟಿ ಕೂರಬೇಡಿ, ನಿಮ್ಮ ಕೆಲಸ ನೀವು ಮಾಡಿ. ನಾವೆಲ್ಲಾ ಬ್ಯಾಂಕ್ ಉಳಿಸುವ ಉದ್ದೇಶಕ್ಕೆ ಇದ್ದೇವೆಯೇ ಹೊರತು ಜಾದೂ ಮಾಡಿ ಆಟವಾಡುವುದಕ್ಕಲ್ಲ’ ಎಂದರು.

ನೇರವಾಗಿ ಹಣ: ‘ಕೋಲಾರ ಹಾಗೂ -ಚಿಕ್ಕಬಳ್ಳಾಪುರ ಜಿಲ್ಲೆಯ 30 ಸೊಸೈಟಿಗಳಿಗೆ ಈ ಬಾರಿ ನಬಾರ್ಡ್‌ನಿಂದ ನೇರವಾಗಿ ಹಣ ನೀಡಲಾಗುತ್ತಿದ್ದು, ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಮುಚ್ಚುವ ಹಂತಕ್ಕೆ ತಲುಪಿದ್ದ ಬ್ಯಾಂಕ್ ಇಂದು ಅಭಿವೃದ್ಧಿ ಪಥದಲ್ಲಿ ಸಾಗಿ ನಬಾರ್ಡ್‌ನ ನಂಬಿಕೆ ಗಳಿಸಿದೆ. ಹೀಗಾಗಿ ಈ ಬಾರಿ 30 ಸಂಘಗಳಿಗೆ ನೇರವಾಗಿ ಹಣ ನೀಡಲು ಮುಂದಾಗಿದ್ದು, ಈ ನಂಬಿಕೆ ಉಳಿಸಿಕೊಳ್ಳಲು ಮತ್ತಷ್ಟು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ದೂರು ಬಂದಿವೆ: ‘ಕೆಲವರು ಸಾಲ ವಸೂಲಿ ದಿನದಂದು ಅಥವಾ ಆಹಾರ ಪದಾರ್ಥ ಬಂದ ಸಂದರ್ಭದಲ್ಲಿ ಮಾತ್ರ ಸೊಸೈಟಿ ಬಾಗಿಲು ತೆರೆಯುವ ಬಗ್ಗೆ ದೂರು ಬಂದಿವೆ. ಇನ್ನು ಮುಂದೆ ಈ ಆಟ ನಡೆಯಲ್ಲ. ಎಲ್ಲಾ ಸೊಸೈಟಿಗಳಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿ ಮಾಡಲಾಗುವುದು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಸೊಸೈಟಿ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಕುರುಬೂರು ಸೊಸೈಟಿಗೆ ₹ 1.50 ಕೋಟಿ ಮಾತ್ರ ನೀಡಿದ್ದೆವು. ಆ ಸೊಸೈಟಿಯಲ್ಲಿ ಈಗ 6 ಸಹಕಾರ ಸಾರಿಗೆ ಬಸ್‌ಗಳಿವೆ. ಅಲ್ಲದೇ, 3 ಸೂಪರ್ ಮಾರ್ಕೆಟ್, ಜನತಾ ಬಜಾರ್, ಹೀಗೆ ಸಾರ್ವಜನಿಕರಿಗೆ ಬೇಕಾದ ಎಲ್ಲಾ ವಸ್ತುಗಳು ಅಲ್ಲಿ ಸಿಗುತ್ತಿವೆ. ಸೊಸೈಟಿಯು ₹ 5 ಕೋಟಿ ಬಂಡವಾಳದಲ್ಲಿದ್ದು, ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ’ ಎಂದು ವಿವರಿಸಿದರು.

‘ಕುರುಬೂರು ಸೊಸೈಟಿ ಮಾದರಿಯಲ್ಲಿ ಇತರ ಸೊಸೈಟಿಗಳನ್ನು ಅಭಿವೃದ್ಧಿಪಡಿಸಬೇಕು. ಕೇವಲ ಸಕ್ಕರೆ, ಸೀಮೆಎಣ್ಣೆ ವಿತರಣೆಗಷ್ಟೇ ಸೊಸೈಟಿ ಸೀಮಿತವಾದರೆ ಯಾವುದೇ ಪ್ರಯೋಜನವಿಲ್ಲ. ಜನರಿಗೆ ಹತ್ತಿರವಾಗುವ ಕೆಲಸಕ್ಕೆ ಮುಂದಾಗಬೇಕು. ವಾಣಿಜ್ಯ ಬ್ಯಾಂಕ್‌ಗಳ ಬಡ್ಡಿಗಿಂತ ಅರ್ಧದಷ್ಟು ಹೆಚ್ಚು ಬಡ್ಡಿಯನ್ನು ನಾವು ನೀಡುತ್ತೇವೆ. ಹೀಗಾಗಿ ಈ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಮಾಡಿ’ ಎಂದು ಸಲಹೆ ನೀಡಿದರು.

ಕಿರುಕುಳವಾಗುತ್ತಿದೆ: ‘ಸಹಕಾರ ಇಲಾಖೆಯಲ್ಲಿ ಬಿಲ್‌ ವಿಚಾರವಾಗಿ ನಮಗೆ ಸಾಕಷ್ಟು ಕಿರುಕುಳವಾಗುತ್ತಿದೆ. ಬಿಲ್‌ಗಿಂತಲೂ ಹೆಚ್ಚು ಖರ್ಚು ಮಾಡುವಂತಾಗಿದೆ’ ಎಂದು ಸಿಇಒಗಳು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಈ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ತೊಂದರೆ ನೀಡದಂತೆ ಸೂಚಿಸುತ್ತೇನೆ. ಹಣಕಾಸು ವ್ಯವಹಾರದಲ್ಲಿ ನೀವು ಸರಿಯಾಗಿದ್ದರೆ ಯಾರೂ ಏನು ಮಾಡುವುದಿಲ್ಲ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !