ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಾಂಡಹಳ್ಳಿ: ತರಾತುರಿಯಲ್ಲಿ ರಸ್ತೆ ನಿರ್ಮಾಣ

ಕೆಆರ್‌ಐಡಿಎಲ್‌ ಅಕ್ರಮ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೀನಮೇಷ
Last Updated 5 ಆಗಸ್ಟ್ 2020, 14:27 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಮತ್ತು ಎಂ-.ಸೊಣ್ಣೂರು ಗ್ರಾಮದಲ್ಲಿನ ಕಾಂಕ್ರಿಟ್‌ ರಸ್ತೆಯ ಅಕ್ರಮ ಬಯಲಾದ ಬೆನ್ನಲ್ಲೇ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಅಧಿಕಾರಿಗಳು ತರಾತುರಿಯಲ್ಲಿ ರಸ್ತೆ ನಿರ್ಮಿಸಿದ್ದಾರೆ.

ಅಧಿಕಾರಿಗಳು ರಸ್ತೆ ನಿರ್ಮಿಸದಿದ್ದರೂ ಕಾಮಗಾರಿ ಪೂರ್ಣಗೊಂಡಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಿ ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡಿದ್ದ ಸಂಬಂಧ ‘ಪ್ರಜಾವಾಣಿ’ಯಲ್ಲಿ ಜುಲೈ 23ರಂದು ವರದಿ ಪ್ರಕಟವಾಗಿತ್ತು.

ಅಧಿಕಾರಿಗಳ ಅಕ್ರಮದ ಸಂಬಂಧ ಕೆಆರ್‌ಐಡಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿತ್ತು. ಈ ಸಂಗತಿ ತಿಳಿದ ಅಧಿಕಾರಿಗಳು ಶಿಸ್ತುಕ್ರಮದ ತೂಗುಗತ್ತಿಯಿಂದ ಪಾರಾಗಲು ನಾಲ್ಕೈದು ದಿನದಲ್ಲೇ ರಸ್ತೆ ನಿರ್ಮಾಣ ಮಾಡಿದ್ದಾರೆ.

ರಸ್ತೆಯನ್ನೇ ನಿರ್ಮಿಸದೆ ಗುತ್ತಿಗೆದಾರರಿಗೆ ಬಿಲ್‌ ನೀಡಿದ ಮತ್ತು ರಸ್ತೆಯ ಗುಣಮಟ್ಟ ಉತ್ತಮವಾಗಿದೆ ಎಂದು ದೃಢೀಕರಿಸಿ ವರದಿ ನೀಡಿ ಅಕ್ರಮ ಎಸಗಿರುವ ಕೆಆರ್‌ಐಡಿಎಲ್‌ ಅಧಿಕಾರಿಗಳು ಹಾಗೂ ಮೂರನೇ ವ್ಯಕ್ತಿ ಸಂಸ್ಥೆ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಐತಾಂಡಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಕ್ರಮವೇನು?

ಐತಾಂಡಹಳ್ಳಿ ಮತ್ತು ಎಂ-.ಸೊಣ್ಣೂರು ಗ್ರಾಮದ ನಡುವೆ ₹ 20 ಲಕ್ಷ ಅಂದಾಜು ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2018–19ನೇ ಸಾಲಿನಲ್ಲಿ ಹಣ ಬಿಡುಗಡೆ ಮಾಡಿತ್ತು.

ನಂತರ ಕೆಆರ್‌ಐಡಿಎಲ್‌ ಅಧಿಕಾರಿಗಳು ಕಾಂಕ್ರಿಟ್‌ ರಸ್ತೆ ನಿರ್ಮಿಸಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಿ ಕಾಮಗಾರಿಯ ಗುತ್ತಿಗೆದಾರ ಸಂಕೇತ್‌ ಅವರಿಗೆ ಬಿಲ್‌ ಮಂಜೂರು ಮಾಡಿದ್ದರು. 2019ರ ಅಕ್ಟೋಬರ್‌ನಲ್ಲಿ ಆರಂಭವಾದ ಕಾಮಗಾರಿ 2020ರ ಮಾರ್ಚ್‌ನಲ್ಲಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ದಾಖಲೆಪತ್ರ ಸೃಷ್ಟಿಸಿದ್ದರು.

ಗುತ್ತಿಗೆದಾರರಿಗೆ ₹ 5.37 ಲಕ್ಷ ವೆಚ್ಚದ ಕಾಮಗಾರಿ ಸಾಮಗ್ರಿಗಳನ್ನು ಕೊಡಿಸಲಾಗಿದೆ. ಕಾಮಗಾರಿಗೆ ಬಳಸಿರುವ ಕಚ್ಚಾ ಸಾಮಗ್ರಿಗಳಿಗೆ ₹ 5.74 ಲಕ್ಷ ನೀಡಲಾಗಿದೆ. ಜತೆಗೆ ಕಾಮಗಾರಿಗೆ ಬಂದ ಕಾರ್ಮಿಕರ ಕೂಲಿಗಾಗಿ ₹ 4.32 ಲಕ್ಷ ನೀಡಲಾಗಿದೆ ಎಂದು ಅಧಿಕಾರಿಗಳು ದಾಖಲೆಪತ್ರದಲ್ಲಿ ಉಲ್ಲೇಖಿಸಿದ್ದರು.

ರಕ್ಷಣೆ ಪ್ರಯತ್ನ: ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ನಿರ್ಮಾಣವೇ ಆಗದ ರಸ್ತೆಗೆ ಬಿಲ್‌ ಮಂಜೂರು ಮಾಡಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಅಲ್ಲದೇ, ₹ 11 ಸಾವಿರ ಖರ್ಚು ಮಾಡಿ ಉದ್ದೇಶಿತ ಕಾಮಗಾರಿಯ ಎರಡೂ ಸ್ಥಳಗಳಲ್ಲಿ ಕಾಮಗಾರಿಯ ಮಾಹಿತಿಯುಳ್ಳ ಫಲಕಗಳನ್ನು ಹಾಕಿಸಿದ್ದರು.

ಅಕ್ರಮ ಎಸಗಿ ಸಿಕ್ಕಿಬಿದ್ದಿರುವ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಮೂರನೇ ವ್ಯಕ್ತಿ ಸಂಸ್ಥೆಯ ರಕ್ಷಣೆಗೆ ತೆರೆಮರೆಯಲ್ಲೇ ಪ್ರಯತ್ನ ನಡೆದಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT