ಶನಿವಾರ, ಅಕ್ಟೋಬರ್ 16, 2021
21 °C
ಕೃಷಿ ಇಲಾಖೆ ಅವ್ಯವಹಾರ ಪ್ರಕರಣಕ್ಕೆ ಮಹತ್ವದ ತಿರುವು

ಅಕ್ರಮದಲ್ಲಿ ಜಂಟಿ ನಿರ್ದೇಶಕರ ಕೈವಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೃಷಿ ಇಲಾಖೆಯಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣವು ಮಹತ್ವದ ತಿರುವು ಪಡೆದಿದ್ದು, ಪ್ರಕರಣದಲ್ಲಿ ಇಲಾಖೆಯ ಹಿಂದಿನ ಜಂಟಿ ನಿರ್ದೇಶಕ ಎಚ್‌.ಕೆ.ಶಿವಕುಮಾರ್‌ ಅವರ ಕೈವಾಡವಿರುವುದು ಉನ್ನತ ಅಧಿಕಾರಿಗಳ ವಿಶೇಷ ಲೆಕ್ಕ ತಪಾಸಣೆಯಲ್ಲಿ ಬಯಲಾಗಿದೆ.

ಅಕ್ರಮದ ಸಂಬಂಧ ಶಿವಕುಮಾರ್‌ (ಸದ್ಯ ಇಲಾಖೆ ಜಾಗೃತ ಕೋಶದಲ್ಲಿದ್ದಾರೆ), ಕೋಲಾರದಲ್ಲಿನ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ್‌ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್‌ ಆಪರೇಟರ್‌ ಆದರ್ಶ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಸುಮಾರು 3 ವರ್ಷ ಸೇವೆಯಲ್ಲಿದ್ದ ಶಿವಕುಮಾರ್‌ ಅವರು 2020ರ ಆ.3ರಂದು ಇಲಾಖೆಯ ಜಾಗೃತ ಕೋಶಕ್ಕೆ ವರ್ಗಾವಣೆಯಾಗಿ ಬೆಂಗಳೂರಿಗೆ ಹೋಗಿದ್ದರು. ಆ ನಂತರ ಅವರ ಹುದ್ದೆಗೆ ವರ್ಗಾವಣೆಯಾಗಿ ಬಂದ ವಿ.ಡಿ.ರೂಪಾದೇವಿ ಅವರು ಇಲಾಖೆಯ ಖರ್ಚು ವೆಚ್ಚ ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿತ್ತು.

2020ರ ಜೂನ್‌ ಒಂದೇ ತಿಂಗಳಲ್ಲಿ ಹೊರ ಗುತ್ತಿಗೆ ನೌಕರರ ವೇತನಕ್ಕಾಗಿ ಇಲಾಖೆಯಿಂದ ₹ 15.99 ಲಕ್ಷ ಪಾವತಿಸಿರುವುದು ಗೊತ್ತಾಗಿತ್ತು. ಆದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ಕಚೇರಿಯಲ್ಲಿ ಲಭ್ಯವಾಗಿರಲಿಲ್ಲ. ಇದರಿಂದ ಅನುಮಾನಗೊಂಡ ರೂಪಾದೇವಿ ಅವರು ಅಕ್ರಮದ ಸಂಗತಿಯನ್ನು ಸೆ.29ರಂದು ಇಲಾಖೆ ನಿರ್ದೇಶಕರು ಮತ್ತು ಶಿವಕುಮಾರ್‌ರ ಗಮನಕ್ಕೆ ತಂದಿದ್ದರು.

ಬಳಿಕ ಶಿವಕುಮಾರ್‌ ಅವರು ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ನಿವೃತ್ತ ಸೂಪರಿಂಟೆಂಡೆಂಟ್‌ ಸತ್ಯನಾರಾಯಣ ಪ್ರಸಾದ್‌, ಹೊರ ಗುತ್ತಿಗೆ ನೌಕರ ನಯಾಜ್‌ ಅಹಮ್ಮದ್‌ ಮತ್ತು ಎಂ.ಎ ಎಂಟರ್‌ಪ್ರೈಸಸ್‌ ಮಾಲೀಕರಾದ ಮುಹಿಬ್‌ ಅಜ್ಮಿ ವಿರುದ್ಧ ಗಲ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅನುದಾನ ಬಳಕೆ, ದೈನಂದಿನ ಕಾರ್ಯ ನಿರ್ವಹಣೆ ಉದ್ದೇಶಕ್ಕೆ ಇಲಾಖೆಯಿಂದ ತಮಗೆ ನೀಡಿದ್ದ ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌ ಕೀಯನ್ನು (ಡಿಎಸ್‌ಇ) ಸತ್ಯನಾರಾಯಣ ಪ್ರಸಾದ್‌ ಮತ್ತು ನಯಾಜ್‌ ಅಹಮ್ಮದ್‌ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಈ ಇಬ್ಬರು ತಮ್ಮ ಗಮನಕ್ಕೆ ಬಾರದಂತೆ ಡಿಜಿಟಲ್‌ ಕೀ ಬಳಸಿ ಎಂ.ಎ ಎಂಟರ್‌ಪ್ರೈಸಸ್‌ ಕಂಪನಿಯ ಬ್ಯಾಂಕ್‌ ಖಾತೆಗೆ ಇಲಾಖೆಯ ಲಕ್ಷಾಂತರ ರೂಪಾಯಿ ಹಣ ಪಾವತಿಸಿದ್ದಾರೆ ಎಂದು ಶಿವಕುಮಾರ್‌ ದೂರಿನಲ್ಲಿ ಆರೋಪಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಸತ್ಯನಾರಾಯಣ ಪ್ರಸಾದ್‌ ಮತ್ತು ನಯಾಜ್‌ರನ್ನು ಬಂಧಿಸಿದ್ದರು.

ತಿರುಗು ಬಾಣ: ಅಕ್ರಮದ ಸಂಬಂಧ ಉನ್ನತ ತನಿಖೆ ನಡೆಸಲು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ತಂಡವೊಂದನ್ನು ಜಿಲ್ಲೆಗೆ ಕಳುಹಿಸಲಾಗಿತ್ತು. ಈ ತಂಡವು 2020ರ ಅ.7ರಿಂದ ಅ.10ರವರೆಗೆ ಶಿವಕುಮಾರ್‌ರ ಸೇವಾವಧಿಯ ಹಣಕಾಸು ವ್ಯವಹಾರದ ದಾಖಲೆಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿತ್ತು. ಈ ತಂಡದ ಲೆಕ್ಕ ತಪಾಸಣೆಯಲ್ಲಿ ಸುಮಾರು ₹ 1.25 ಕೋಟಿ ಅಕ್ರಮ ನಡೆದಿರುವ ಸಂಗತಿ ಬಯಲಾಗಿತ್ತು. ಈ ಬಗ್ಗೆ ತಂಡವು ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿತ್ತು.

ಜಾಮೀನಿನ ಮೇಲೆ ಬಿಡುಗಡೆಯಾದ ಸತ್ಯನಾರಾಯಣ ಪ್ರಸಾದ್‌ ಅವರು ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಸಿ.ರಾಜಣ್ಣ ಎಂಬುವರ ನೆರವಿನಿಂದ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೃಷಿ ಆಯುಕ್ತರ ಕಚೇರಿಯಿಂದ ಪಡೆದ ವಿಶೇಷ ಲೆಕ್ಕ ತಪಾಸಣೆ ವರದಿಯೊಂದಿಗೆ ಗಲ್‌ಪೇಟೆ ಠಾಣೆಗೆ ಶಿವಕುಮಾರ್‌, ಮಂಜುನಾಥ್‌ ಮತ್ತು ಆದರ್ಶ್‌ ವಿರುದ್ಧ ದೂರು ಕೊಟ್ಟಿದ್ದರು.

ಶಿವಕುಮಾರ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆಪತ್ರ ಸೃಷ್ಟಿಸಿ ಇಲಾಖೆಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಇದಕ್ಕೆ ಮಂಜುನಾಥ್‌ ಮತ್ತು ಆದರ್ಶ್‌ ನೆರವು ನೀಡಿದ್ದಾರೆ. ಈ ಮೂವರು ಸಂಚು ರೂಪಿಸಿ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ್ದರು. ಅಲ್ಲದೇ, ತನಿಖೆ ವೇಳೆ ಸುಳ್ಳು ಮಾಹಿತಿ ಕೊಟ್ಟು ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ ಎಂದು ಸತ್ಯನಾರಾಯಣ ಪ್ರಸಾದ್‌ ಆರೋಪಿಸಿದ್ದರು.

ಶಿವಕುಮಾರ್‌ ಅವರು ಈ ಹಿಂದೆ ನೀಡಿದ್ದ ದೂರು ಇದೀಗ ಅವರಿಗೆ ತಿರುಗು ಬಾಣವಾಗಿದೆ. ಪ್ರಕರಣವು ಮಹತ್ವದ ತಿರುವು ಪಡೆದಿದ್ದು, ಪೊಲೀಸರು ವಂಚನೆ, ಅಪರಾಧ ಸಂಚು, ವಂಚನೆ ಉದ್ದೇಶಕ್ಕೆ ನಕಲಿ ದಾಖಲೆಪತ್ರ ಸೃಷ್ಟಿ, ಡಿಜಿಟಲ್ ಉಪಕರಣದ ದುರ್ಬಳಕೆ, ಅಧಿಕಾರ ದುರುಪಯೋಗ, ಸರ್ಕಾರಿ ನೌಕರದ ದುರ್ನಡತೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.