ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರು ಸಮಾನತೆಯ ಹರಿಕಾರರು: ಡಿ.ಸಿ

Last Updated 3 ಡಿಸೆಂಬರ್ 2020, 16:04 IST
ಅಕ್ಷರ ಗಾತ್ರ

ಕೋಲಾರ: ‘ಸಮ ಸಮಾಜದ ಕಲ್ಪನೆಯ ಹಾದಿಯಲ್ಲಿ ಹೋರಾಟ ಮಾಡಿದ ಕನಕದಾಸರನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೆ ಸಮುದಾಯದ ಆದರ್ಶ ವ್ಯಕ್ತಿಯಾಗಿ ಕಾಣಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಮಾತನಾಡಿ, ‘ನಿಷ್ಠೆ, ಭಕ್ತಿಯೊಂದಿಗೆ ಕೃಷ್ಣನ ದರ್ಶನ ಪಡೆದ ಕನಕದಾಸರು ಭಕ್ತಿ ಪಂಥದ ಶ್ರೇಷ್ಠತೆ ತೋರಿಸಿಕೊಟ್ಟರು’ ಎಂದು ಅಭಿಪ್ರಾಯಪಟ್ಟರು.

‘ಹಲವು ದಾರ್ಶನಿಕರಲ್ಲಿ ಭಕ್ತ ಕನಕದಾಸರೂ ಒಬ್ಬರಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ದಾಸ ಸಾಹಿತ್ಯದ ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದರು. ಜಾತಿ ಪದ್ಧತಿ ವಿರುದ್ಧ ಧ್ವನಿ ಎತ್ತುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ದೊರಕಿಸಿದ ಹರಿಕಾರ. ಬಸವಣ್ಣರ ಚಿಂತನೆಗಳು ಸಹ ಕನಕದಾಸರ ಹಾದಿಯಲ್ಲಿತ್ತು’ ಎಂದು ತಿಳಿಸಿದರು.

‘ಸ್ವಾರ್ಥದ ಅಹಂಕಾರ ಬಿಟ್ಟಾಗ ಮನುಷ್ಯನಿಗೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬುದು ಭಕ್ತ ಕನಕದಾಸರ ನಂಬಿಕೆ. ಅವರು ಸಮಾಜದ ಏಕತೆಗೆ ಶ್ರಮಿಸಿದ ಮಹಾನ್ ಸಂತರು. ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ ಮಹನೀಯರ ಜಯಂತಿಯನ್ನು ಎಲ್ಲಾ ವರ್ಗದವರು ಆಚರಿಸಬೇಕು. ಸಾಧಕರ, ಸಂತರ ಶ್ರೇಷ್ಠತೆ ಪರಿಚಯಿಸುವ ಕೆಲಸ ಆಗಬೇಕು’ ಎಂದು ಆಶಿಸಿದರು.

‘ಕನಕದಾಸರು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಜನರಲ್ಲಿದ್ದ ಮೂಢನಂಬಿಕೆ ತೊಡೆದು ಹಾಕಿ ಸರಳ ಭಕ್ತಿಯ ಮೂಲಕ ದೇವರ ಕಾಣಬಹುದು ಎಂಬುದನ್ನು ತೋರಿಸಿದ್ದಾರೆ. ವ್ಯಾಸರಾಯರ ಶಿಷ್ಯರಾಗಿ ದಾಸ ಸಾಹಿತ್ಯದಲ್ಲಿ ಅಪಾರ ಕೀರ್ತಿ ಸಾಧಿಸಿ ಜನರಿಗೆ ಕೀರ್ತನೆಗಳ ಮಹತ್ವ ಸಾರಿ ಹೇಳಿದರು. ಸಮಾಜದ ಏಳಿಗೆಗೆ ಎಲ್ಲಾ ಸಮುದಾಯಗಳು ಒಗ್ಗೂಡಬೇಕು’ ಎಂದು ಕಿವಿಮಾತು ಹೇಳಿದರು.

ಅಧಿಕಾರ ತಾತ್ಕಾಲಿಕ: ‘ಮಹನೀಯರ ಜಯಂತಿ ಕೇವಲ ಆಚರಣೆಗೆ ಸೀಮಿತವಾದರೆ ಸಾಲದು. ಅವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಎಲ್ಲಾ ಸಮುದಾಯಗಳನ್ನು ಸಮನಾಗಿ ನೋಡಬೇಕು. ಅಧಿಕಾರ, ಹಣ, ಸಂಪತ್ತು ತಾತ್ಕಾಲಿಕ. ಅಧಿಕಾರ ಇರುವಾಗ ಸಮಾಜಮುಖಿಯಾಗಿ ಕೆಲಸ ಮಾಡಿ ಜನರ ಕಷ್ಟ ಪರಿಹರಿಸಬೇಕು’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ.ಸ್ನೇಹಾ, ಕುಡಾ ಸದಸ್ಯರಾದ ಮಮತಾ, ಅಪ್ಪಿ ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT