ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಮನೆಗೆ ಮುತ್ತಿಗೆ: ಅಲ್ಪಸಂಖ್ಯಾತ ಮುಖಂಡರ ನಿರ್ಧಾರ

Last Updated 20 ಮಾರ್ಚ್ 2023, 12:45 IST
ಅಕ್ಷರ ಗಾತ್ರ

ಕೋಲಾರ: 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸಲು ಹೈಕಮಾಂಡ್‌ ಅನುವು ಮಾಡಿಕೊಡಬೇಕು. ಈ ಸಂಬಂಧ ಮಂಗಳವಾರ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸಕ್ಕೆ ಮುತ್ತಿಗೆ ಹಾಕಿ ಎಚ್ಚರಿಸಲಿದ್ದೇವೆ’ ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಅನ್ವರ್ ಪಾಷ, ‘ಇದುವರೆಗೆ ಕ್ಷೇತ್ರದಲ್ಲಿ ವಿವಿಧ ಪಕ್ಷಗಳು, ಖಾಸಗಿ ಏಜೆನ್ಸಿಗಳು ನಡೆಸಿದ ನಾಲ್ಕು ಸಮೀಕ್ಷೆಗಳೂ ಸಿದ್ದರಾಮಯ್ಯ ಪರವಾಗಿವೆ. ಹೀಗಾಗಿ, ಅವರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಈ ವಿಚಾರವಾಗಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ ಅವರಿಗೂ ಒತ್ತಾಯಿಸುತ್ತೇವೆ’ ಎಂದರು.

‘ಎಲ್ಲಾ ಸಮುದಾಯಗಳ ಹಿತ ಕಾಪಾಡುವ ಸಾಮರ್ಥ್ಯ ಸಿದ್ದರಾಮಯ್ಯ ಅವರಿಗೆ ಇದೆ. ಕ್ಷೇತ್ರವೂ ಅಭಿವೃದ್ಧಿ ಆಗಲಿದೆ. ಅವರು ಕಣಕ್ಕಿಳಿದರೆ ಗೆಲುವು ಖಚಿತ. ಆದರೆ, ಸ್ಪರ್ಧೆ ಮಾಡುವುದಿಲ್ಲ ಎಂಬ ವದಂತಿಯಿಂದ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳ ಜನರಲ್ಲಿ ದುಃಖ ಉಂಟಾಗಿದೆ’ ಎಂದು ಹೇಳಿದರು.

‘ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಮೇಲೂ ಜಿಲ್ಲಾ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಒತ್ತಡ ತಂದು ಸಿದ್ದರಾಮಯ್ಯ ಕೋಲಾರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನೋಡಿಕೊಳ್ಳುತ್ತೇವೆ’ ಎಂದು ನುಡಿದರು.

ಮುಖಂಡ ಅಬ್ದುಲ್ ಕಯ್ಯುಮ್ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್‌.ಮುನಿಯಪ್ಪ ‌ಅವರಿಗೆ ಮುಸ್ಲಿಮ ಸಮುದಾಯದ ಹೆಚ್ಚಿನ ಮತಗಳು ಬಿದ್ದಿದ್ದವು. ನಮಗೆ ರಾಜಕೀಯ ಅಧಿಕಾರಕ್ಕಿಂತ ಜಿಲ್ಲೆ ಹಾಗೂ ಕೋಲಾರ‌ ಕ್ಷೇತ್ರ ಅಭಿವೃದ್ಧಿ ಆಗುವುದು ಮುಖ್ಯ' ಎಂದರು.

ನಗರಸಭೆ ಉಪಾಧ್ಯಕ್ಷ ಜುಗ್ನುಂ ಅಸ್ಲಾಂ, ಸದಸ್ಯ ಅಪ್ಸರ್‌ ಪಾಷ, ಮಾಜಿ ಸದಸ್ಯರಾದ ಅಪ್ರೋಜ್ ಪಾಷ, ಸಲ್ಲಾವುದ್ದೀನ್ ಬಾಬು, ಜಾಫರ್, ‌ಮುಖಂಡರಾದ ಇದಾಯಾತ್ ವುಲ್ಲಾ, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಮಹಮದ್‌ ಹನೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT