ಕೆ.ಸಿ ವ್ಯಾಲಿ: ಹೋರಾಟದಲ್ಲಿ ರಾಜಕಾರಣಿ ಪಾತ್ರವಿಲ್ಲ

ಸೋಮವಾರ, ಏಪ್ರಿಲ್ 22, 2019
33 °C
ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿಕೆ

ಕೆ.ಸಿ ವ್ಯಾಲಿ: ಹೋರಾಟದಲ್ಲಿ ರಾಜಕಾರಣಿ ಪಾತ್ರವಿಲ್ಲ

Published:
Updated:
Prajavani

ಕೋಲಾರ: ‘ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಯೋಜನೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಹರಿಸಬೇಕೆಂಬ ಹೋರಾಟದ ಹಿಂದೆ ಯಾವುದೇ ರಾಜಕಾರಣಿಯ ಪಾತ್ರವಿಲ್ಲ. ವಿರೋಧಿಗಳು ತಮ್ಮ ಒಣಗೇಡಿತನ ಮುಚ್ಚಿಕೊಳ್ಳಲು ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಆರೋಪಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನೀರಿನ ವಿಚಾರವಾಗಿ ನಮ್ಮ ಹೋರಾಟದ ಹಿಂದೆ ವಿಜ್ಞಾನಿಗಳು, ಕಾನೂನು ತಜ್ಞರು ಇದ್ದಾರೆಯೇ ಹೊರತು ಯಾವುದೇ ರಾಜಕಾರಣಿಗಳಿಲ್ಲ’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

‘ತ್ಯಾಜ್ಯ ನೀರು ಬಳಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಇರುವಂತೆಯೇ ಬೆಂಗಳೂರಿನ ತ್ಯಾಜ್ಯ ನೀರನ್ನು 3 ಹಂತದಲ್ಲಿ ಸಂಸ್ಕರಿಸಬೇಕೆಂದು ವಿಶ್ವದ ಪ್ರತಿಷ್ಠಿತ ಸಂಸ್ಥೆಯೇ ವರದಿ ನೀಡಿದೆ. ಇದಕ್ಕೆ ತಕ್ಕ ಉತ್ತರ ಕೊಡದ ರಾಜಕಾರಣಿಗಳು ನನ್ನ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಇದು ಘೋರ ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆ.ಸಿ ವ್ಯಾಲಿ ಮತ್ತು ಎಚ್‍.ಎನ್ ವ್ಯಾಲಿ ಯೋಜನೆಗೆ ಈಗಾಗಲೇ ₹ 2,100 ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನು ₹ 500 ಕೋಟಿ ನೀಡಿದರೆ 3ನೇ ಹಂತದಲ್ಲಿ ನೀರು ಸಂಸ್ಕರಿಸಬಹುದು. ಸರ್ಕಾರ ಈ ಸಂಗತಿ ಅರಿತು ಕೆಲಸ ಮಾಡಿದರೆ ನಾನು ಯೋಜನೆ ವಿರುದ್ಧ ಮಾತನಾಡಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಚರ್ಚೆ ನಡೆಸಲಿ: ‘ನಾವೇನು ದೊಡ್ಡವರಲ್ಲ. 3ನೇ ಹಂತದಲ್ಲಿ ನೀರು ಸಂಸ್ಕರಿಸುವ ಬಗ್ಗೆ ಸರ್ಕಾರ ಇಂದಿಗೂ ಬಹಿರಂಗ ಚರ್ಚೆ ನಡೆಸಲಿ. ಅದನ್ನು ಬಿಟ್ಟು ಗುಂಪುಗಾರಿಕೆ ಮಾಡಿಕೊಂಡು ಪ್ರತಿಷ್ಠೆ ಸಾಧಿಸಲು ಮುಂದಾಗಿರುವುದು ಏಕೆಂದು ನನಗೂ ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.

‘2015ರಲ್ಲಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿ, ಬೆಂಗಳೂರಿನ ತ್ಯಾಜ್ಯ ನೀರು ತಮ್ಮ ಭಾಗದ ನದಿಗೆ ಸೇರುತ್ತಿರುವುದರಿಂದ ಅಂತರ್ಜಲ ಹಾಗೂ ಪರಿಸರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೊಳಚೆ ನೀರನ್ನು 2 ಹಂತದಲ್ಲಿ ಸಂಸ್ಕರಿಸಿ ಕೋಲಾರ ಭಾಗಕ್ಕೆ ಹರಿಸಿತು’ ಎಂದರು.

‘ತಮಿಳುನಾಡಿನಂತೆಯೇ ಆತಂಕ ಬಂದ ಹಿನ್ನೆಲೆಯಲ್ಲಿ ತ್ಯಾಜ್ಯ ನೀರಿನಿಂದ ಜಿಲ್ಲೆಗಳನ್ನು ರಕ್ಷಿಸಲು 17 ಮಂದಿಯ ಜತೆಗೆ ನಾನೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಕೆಲ ರಾಜಕಾರಣಿಗಳು ನನ್ನ ಮೇಲೆ ಮಾತ್ರ ಆರೋಪ ಮಾಡಿ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ. ಅವರ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ’ ಎಂದು ಗುಡುಗಿದರು.

ತಾತ್ಕಾಲಿಕ ತೆರವು: ‘ಅವಿಭಜಿತ ಕೋಲಾರ ಜಿಲ್ಲೆಯ ಬರಗಾಲ ಅರ್ಥ ಮಾಡಿಕೊಂಡು ಸುಪ್ರೀಂ ಕೋರ್ಟ್ ಯೋಜನೆಯ ತಡೆಯಾಜ್ಞೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದೆ. ನೀರು ಕೆರೆಯಿಂದ ಕೆರೆಗೆ ಹರಿಯುವ ಸಂದರ್ಭದಲ್ಲಿ ತಾನಾಗಿಯೇ ಶುದ್ಧೀಕರಣವಾಗುತ್ತದೆ ಎಂದು ಸರ್ಕಾರ ಹೇಳಿದ್ದು, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇಂತಹ ಮೊಂಡುತನ ಬಿಟ್ಟು ವೈಜ್ಞಾನಿಕವಾಗಿ ನೀರು ಸಂಸ್ಕರಿಸಬೇಕು’ ಎಂದು ಒತ್ತಾಯಿಸಿದರು.

‘ಜಿ.ಎಸ್.ಪರಮಶಿವಯ್ಯರ ಸಮಗ್ರ ನೀರಾವರಿ ಯೋಜನೆ ವರದಿ ಅನ್ವಯ ಬಯಲು ಸೀಮೆಗೆ ನೀರು ಒದಗಿಸುವುದು ಸೇರಿದಂತೆ 10 ಅಂಶಗಳ ಹಕ್ಕೊತ್ತಾಯ ಪ್ರಣಾಳಿಕೆ ಬಿಡುಗಡೆಗೊಳಿಸಿ ಮತ ನಮ್ಮ ಹಕ್ಕು, ನೀರು ನಮ್ಮ ಭವಿಷ್ಯ. ನೀರು ಕೊಡುವವರಿಗೆ ನಮ್ಮ ಮತ ಹಾಕುವುದಾಗಿ ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತೇವೆ’ ಎಂದು ವಿವರಿಸಿದರು.

ಸಮಿತಿ ಸದಸ್ಯರಾದ ಹರೀಶ್, ದೇವರಾಜ್, ವೆಂಕಟೇಶ್, ಮಂಜುನಾಥ್, ನವೀನ್, ಯುವಶಕ್ತಿ ಸಂಘಟನೆ ಅಧ್ಯಕ್ಷ ಶಿವಪ್ರಕಾಶ್‌ರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !