ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸ್‌ ಭಯಕ್ಕೆ ಬಿಟ್ಟರು’: ವರ್ತೂರು

Last Updated 2 ಡಿಸೆಂಬರ್ 2020, 14:52 IST
ಅಕ್ಷರ ಗಾತ್ರ

ಕೋಲಾರ: ‘ನಾನು ಕಾರು ಚಾಲಕನ ಜತೆ ಬೆಗ್ಲಿ ಹೊಸಹಳ್ಳಿಯ ತೋಟದ ಮನೆಯಿಂದ ನ.25ರ ರಾತ್ರಿ ಬೆಂಗಳೂರಿಗೆ ಹೋಗುತ್ತಿದ್ದಾಗ ನನ್ನ ಅಪಹರಣವಾಯಿತು’ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಹೇಳಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘2 ಕಾರುಗಳಲ್ಲಿ ಬಂದಿದ್ದ 8 ಮಂದಿ ಅಪರಿಚಿತರು ಮಾರ್ಗ ಮಧ್ಯೆ ಜಂಗಾಲಹಳ್ಳಿ ರಸ್ತೆಯಲ್ಲಿ ನನ್ನ ವಾಹನ ಅಡ್ಡಗಟ್ಟಿದ್ದರು. ಬಳಿಕ ನನ್ನ ಮುಖಕ್ಕೆ ಕಪ್ಪು ಬಟ್ಟೆ ಸುತ್ತಿ ಕಾರಿನಲ್ಲಿ ಕೂರಿಸಿದರು. ನನ್ನ ಕಾರು ಚಾಲಕ ಸುನಿಲ್‌ನನ್ನು ಮತ್ತೊಂದು ವಾಹನದಲ್ಲಿ ಕೂರಿಸಿಕೊಂಡರು. ಸುಮಾರು 4 ತಾಸು ಹಲವೆಡೆ ಸುತ್ತಾಡಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು’ ಎಂದು ಮಾಹಿತಿ ನೀಡಿದರು.

‘3 ದಿನ ನನ್ನನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಣ ಕೊಡುವಂತೆ ಬೆದರಿಸಿದರು. ಚುನಾವಣೆಗೆ ಎಲ್ಲಾ ಹಣ ಖರ್ಚು ಮಾಡಿ ಸೋತಿದ್ದೇನೆ ಎಂದು ಹೇಳಿದರೂ ಕೇಳಲಿಲ್ಲ. ಬೇರೆಯವರ ಬಳಿ ಹಣ ತರಿಸಿಕೊಡುವಂತೆ ಮಚ್ಚು, ಲಾಂಗ್‌ನಿಂದ ಹಲ್ಲೆ ನಡೆಸಿದರು. ಹೀಗಾಗಿ ಕೋಲಾರದ ಸ್ನೇಹಿತರಿಂದ ₹ 50 ಲಕ್ಷ ತರಿಸಿ ಕಾಫಿ ಡೇ ಬಳಿ ಕೊಡಿಸಿದೆ. ಆದರೂ ಅಪಹರಣಕಾರರು ಚಿತ್ರಹಿಂಸೆ ಕೊಟ್ಟರು’ ಎಂದರು.

‘ನನ್ನ ಕಾರು ಚಾಲಕ ಸುನಿಲ್‌ ಮೇಲೂ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡ ಸುನಿಲ್‌ ಪ್ರಜ್ಞೆ ತಪ್ಪಿದ. ಅಪಹರಣಕಾರರು ಆತನನ್ನು ಕಾರಿನಲ್ಲೇ ಬಿಟ್ಟು ಮದ್ಯಪಾನ ಮಾಡಲು ಹೋಗಿದ್ದರು. ಆಗ ಸುನಿಲ್ ತಪ್ಪಿಸಿಕೊಂಡು ಹೋಗಿ ಬೇಲಿಯಲ್ಲಿ ಅಡಗಿಕೊಂಡಿದ್ದ. ಅಪಹರಣಕಾರರು 2 ತಾಸು ಹುಡುಕಿದರೂ ಆತ ಪತ್ತೆಯಾಗಲಿಲ್ಲ. ಬಳಿಕ ಅಪಹರಣಕಾರರು ನನ್ನನ್ನು ಬೇರೆಡೆಗೆ ಎಳೆದೊಯ್ದರು’ ಎಂದು ವಿವರಿಸಿದರು.

‘ಸುನಿಲ್‌ ಪೊಲೀಸರಿಗೆ ದೂರು ನೀಡಬಹುದೆಂದು ಗಾಬರಿಯಾದ ಅಪಹರಣಕಾರರು ನ.28ರಂದು ಹೊಸಕೋಟೆ ಸಮೀಪದ ಶಿವನಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ನನ್ನನ್ನು ಕಾರಿನಿಂದ ಕೆಳಗಿಳಿಸಿ ಪರಾರಿಯಾದರು. ನನ್ನ ಮೈ ಮೇಲೆ ಬಟ್ಟೆ ಸಹ ಇರಲಿಲ್ಲ. ನಂತರ ಮುಖ್ಯರಸ್ತೆಗೆ ಬಂದು ಬೈಕ್‌ ಸವಾರರ ಸಹಾಯ ಪಡೆದು ಕೆ.ಆರ್.ಪುರದ ಖಾಸಗಿ ಆಸ್ಪತ್ರೆಗೆ ದಾಖಲಾದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT