ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | 2023ರಲ್ಲಿ 328 ಸಾವು, ಎಚ್ಚರ ಚಾಲಕರೇ!

Published 18 ಮಾರ್ಚ್ 2024, 7:05 IST
Last Updated 18 ಮಾರ್ಚ್ 2024, 7:05 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೋಲಾರ ಹಾಗೂ ಕೆಜಿಎಫ್‌ ಪೊಲೀಸ್‌ ವಿಭಾಗದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಒಂದಲ್ಲಾ ಒಂದು ಕಡೆ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿದ್ದಾರೆ. ಅಪಘಾತದಲ್ಲಿ ಗಾಯಕ್ಕೆ ಒಳಗಾಗಿ ಸಂಕಟ ಅನುಭವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಕೋಲಾರ ಪೊಲೀಸ್‌ ಜಿಲ್ಲೆಯಲ್ಲಿ ಕಳೆದ ವರ್ಷ 250 ಘೋರ ಅಪಘಾತ ಹಾಗೂ 516 ಸಾಮಾನ್ಯ ಅಪಘಾತ ಸಂಭವಿಸಿದ್ದು, 257 ಮಂದಿ ಮೃತರಾಗಿದ್ದರೆ, 778 ಗಾಯಗೊಂಡಿದ್ದರು. ಹಾಗೆಯೇ ಕೆಜಿಎಫ್‌ ಪೊಲೀಸ್‌ ವಿಭಾಗದಲ್ಲಿ 67 ಘೋರ ಅಪಘಾತ, 136 ಸಾಮಾನ್ಯ ಅಪಘಾತ ಸಂಭವಿಸಿದ್ದು 71 ಮಂದಿಯ ಜೀವ ಹೋಗಿತ್ತು, 179 ಮಂದಿ ಗಾಯಗೊಂಡಿದ್ದರು. ಒಟ್ಟು 328 ಮಂದಿ ಮೃತಪಟ್ಟಿದ್ದು, 957 ಮಂದಿ ಗಾಯಗೊಂಡಿದ್ದರು.

ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಈ ಅಪಘಾತಗಳ ಕುರಿತು ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ನೀಡಿದ್ದು, ‘ರಾಜ್ಯದಲ್ಲಿ 2023ರಲ್ಲಿ ಪ್ರತಿ‌ದಿನ ಅಪಘಾತದಲ್ಲಿ 34 ಮಂದಿ ಮೃತಪಟ್ಟಿದ್ದಾರೆ. ಅದಕ್ಕೂ ಹಿಂದಿನ ವರ್ಷಕ್ಕೆ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಅಪಘಾತಗಳು‌ ಹೆಚ್ಚಾಗಿವೆ’ ಎಂದಿದ್ದಾರೆ.

ಅಪಘಾತ ತಗ್ಗಿಸಲು ಕೋಲಾರ ಹಾಗೂ ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿಗಳು ಕ್ರಮ ವಹಿಸಿದ್ದರೂ ರಾಷ್ಟ್ರೀಯ ಹೆದ್ದಾರಿ, ಕೋಲಾರ ಗ್ರಾಮಾಂತರ, ವೇಮಗಲ್, ಮಾಲೂರು, ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿ, ಇತ್ತ ಕೆಜಿಎಫ್‌ನ ಬಂಗಾರಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಅಪಘಾತಗಳಿಗೆ ಅಜಾಗರೂಕತೆ ಹಾಗೂ ಅತಿ ವೇಗವೇ ಕಾರಣವಾಗುತ್ತಿದೆ. ವಾಹನ ಚಾಲನೆಯಲ್ಲಿ ನೈಪುಣ್ಯತೆ ಇಲ್ಲದಿದ್ದರೂ 120, 150 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುವುದು ಕಂಡುಬರುತ್ತಿದೆ. ದ್ವಿಚಕ್ರ ವಾಹನದವರು 80-90 ಕಿ.ಮೀ ವೇಗದಲ್ಲಿ ಹೋಗಿ ಡಿಕ್ಕಿ ಹೊಡೆಯುತ್ತಾರೆ. ಜಿಲ್ಲೆಯಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಬೈಕ್ ಸವಾರರೇ ಆಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣಕ್ಕೆ ಸೇರುವ ಒಳರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿರುವುದರಿಂದ ಈ ಸ್ಥಳಗಳಲ್ಲಿ ರೋಡ್ ಬ್ರೇಕರ್‌ ಅಳವಡಿಸಬೇಕಿದೆ. ಪೊಲೀಸ್ ಪೆಟ್ರೋಲಿಂಗ್ ವಾಹನ ಕಾಯ್ದಿರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

‘ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ 16 ಬ್ಲಾಕ್‌ಸ್ಟಾಟ್‌ಗಳನ್ನು 3ಕ್ಕೆ ಇಳಿಸಿದ್ದೇವೆ. ಮದನಪಲ್ಲಿ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ಇನ್ನೂ ಮುಗಿದಿಲ್ಲ. ಇಲ್ಲೂ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಜಿಲ್ಲೆಯಲ್ಲಿ ಹೆಲ್ಮೆಟ್‌ ಧರಿಸದವರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ್ದೇವೆ. ಜನರು ಎಚ್ಚೆತ್ತುಕೊಂಡು ಜಾಗರೂಕರಾಗಿ ವಾಹನ ಚಲಾಯಿಸಿದರೆ ಅಪಘಾತ ಕಡಿಮೆ ಆಗುತ್ತವೆ’ ಎಂದು ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲೋಕ್‌ ಕುಮಾರ್‌ ಕಳೆದ ಸೆಪ್ಟೆಂಬರ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು–ಚೆನ್ನೈ ಕಾರಿಡಾರ್‌ ಎಕ್ಸ್‌ಪ್ರೆಸ್‌ ವೇ ಕಾಮಗಾರಿಯನ್ನು ಪರಿಶೀಲಿಸಲು ಬಂದಾಗ ಕೆಲ ಸಲಹೆ ನೀಡಿದ್ದರು. ಬ್ಲ್ಯಾಕ್‍ ಸ್ಪಾಟ್‍ಗಳು ಎಲ್ಲಿ ಇವೆ, ಅವುಗಳನ್ನು ಯಾವ ರೀತಿ ಸರಿಪಡಿಸಲಾಗುತ್ತಿದೆ ಎನ್ನುವುದರ ಬಗ್ಗೆ ಚರ್ಚಿಸಿದ್ದರು. ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೆಲ್ಮೆಟ್ ಹಾಕದೇ ಇರುವುದು, ಸೀಟ್ ಬೆಲ್ಟ್ ಧರಿಸದೇ ಇರುವುದು, ತ್ರಿಬಲ್ ರೈಡಿಂಗ್ ಬಗ್ಗೆ ನಿರ್ದಾಕ್ಷಿಣ್ಯ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಈಗ ಪೊಲೀಸರು ಹೆಲ್ಮೆಟ್‌ ಕಡ್ಡಾಯ ಮಾಡಿ ಕಾರ್ಯಾಚರಣೆಗೆ ಇಳಿದಿದ್ದಾರೆ.

‘ರಸ್ತೆ ಸಂಚಾರ ಸುಧಾರಣೆ ಸಂಬಂಧ ಕೆಜಿಎಫ್‌ ನಗರಸಭೆ ಹಾಗೂ ಬಂಗಾರಪೇಟೆ ಪುರಸಭೆಗೆ ಕ್ರಿಯಾ ಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿ ಅನುಮೋದನೆ ಕೋರಿದ್ದೇವೆ. ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತ ನಡೆಯುವ ಸ್ಥಳ ಗಮನಿಸಿ ಮುನ್ನೆಚ್ಚರಿಕೆ ಫಲಕ ಹಾಕಲು ಕ್ರಮ ವಹಿಸಿದ್ದೇವೆ. ಅಪಘಾತ ಹೆಚ್ಚುತಿರುವ ಕಡೆ ರಾಷ್ಟ್ರೀಯ ರಸ್ತೆ ಸುಕ್ಷತಾ ಕಾರ್ಯಕ್ರಮ ನಡೆಸುತ್ತಿದ್ದೇವೆ. ಕುಡಿದು ವಾಹನ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕುಡಿದು ವಾಹನ ಚಾಲನೆ ಮಾಡಬಾರದು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು’ ಎಂದು ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹೇಳಿದರು.

ಹೆದ್ದಾರಿ ಮಾತ್ರವಲ್ಲ; ಗ್ರಾಮಾಂತರ ರಸ್ತೆಗಳಲ್ಲೂ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಟಿಪ್ಪರ್‌ ಹಾಗೂ ಲಾರಿಗಳ ಅಧಿಕ ಸಂಚಾರವೂ ಇದಕ್ಕೆ ಕಾರಣ. ಜಿಲ್ಲೆಯಲ್ಲಿ ಅಪಘಾತ ತಗ್ಗಿಸಲು ಕ್ರಮ ವಹಿಸಿದ್ದೇವೆ
-ಎಂ.ನಾರಾಯಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ
ರಸ್ತೆ ಸಂಚಾರ ಸುಧಾರಣೆಗೆ ಕ್ರಮ ವಹಿಸಿದ್ದು ಅಪಘಾತದ ಸ್ಥಳ ಗಮನಿಸಿ ಮುನ್ನೆಚ್ಚರಿಕೆ ಫಲಕ ಹಾಕುತ್ತಿದ್ದೇವೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದೇವೆ
- ಕೆ.ಎಂ.ಶಾಂತರಾಜು ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ

ಈ ವರ್ಷದಲ್ಲೂ ಹೆಚ್ಚುತ್ತಿರುವ ಅಪಘಾತ

2023ರಲ್ಲಿ ಮಾತ್ರವಲ್ಲ; ಈ ವರ್ಷದ ಆರಂಭಿಕ ತಿಂಗಳಲ್ಲೂ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವಾರ ಮಾಲೂರು ತಾಲ್ಲೂಕಿನ ಮಿಟ್ಟಗಾನಹಳ್ಳಿಯಲ್ಲಿ ಜಲ್ಲಿ ತುಂಬಿದ ಟಿಪ್ಪರ್‌ ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು  ಮೃತಪಟ್ಟರು. ಮೊನ್ನೆ ಬಂಗಾರಪೇಟೆ ತಾಲ್ಲೂಕಿನ ಬೆಂಗನೂರು ಕ್ರಾಸ್‌ ಬಳಿ ವಾಹನ ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಮೃತಪಟ್ಟರು.

ಶ್ರೀನಿವಾಸಪುರ ತಾಲ್ಲೂಕಿನ ಅವಗಾನಪಲ್ಲಿ ಗ್ರಾಮದ ಬಳಿ ಈಚೆಗೆ ಕಾರು ಅಪಘಾತದಲ್ಲಿ ವಕೀಲರೊಬ್ಬರು ಮೃತಪಟ್ಟರು. ಕೋಲಾರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ–75 ರ ಚೆಲುವನಹಳ್ಳಿ ಗೇಟ್ ಬಳಿ ಟ್ರ್ಯಾಕ್ಟರ್‌ ಹಾಗೂ ಖಾಸಗಿ ಬಸ್‌ ನಡುವೆ ಈಚೆಗೆ ಸಂಭವಿಸಿದ ಅಪಘಾತದಲ್ಲಿ ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟರು. ಹೀಗೆ ಈ ವರ್ಷವೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ವರದಿ ಸಲ್ಲಿಸಲು ಸೂಚಿಸಿರುವ ಜಿಲ್ಲಾಧಿಕಾರಿ

ಈಚೆಗೆ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮುಂಜಾಗ್ರತಾ ಕ್ರಮಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಅಪಘಾತ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಪಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ನಿಯಮ ಪಾಲನೆಯಾಗುವಂತೆ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದಿದ್ದಾರೆ. ನಿಯಮಗಳ ಕುರಿತು ಅರಿವು ಮೂಡಿಸಬೇಕು. ರಸ್ತೆಯ ಮಧ್ಯದಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಬೇಕು. ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು. ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಗೋಲ್ಡನ್ ಅವರ್‌ನಲ್ಲಿ ಆದ್ಯತೆ ಮೇರೆಗೆ ವೈದ್ಯಕೀಯ ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳಬೇಕು. ವಿವಿಧೆಡೆ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ಅಪಾಯ ಸೂಚನೆಯ ಗುರುತು ಫಲಕ ಅಳವಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ 12327 ಮಂದಿ ಸಾವು ರಾಜ್ಯದಲ್ಲಿ 2023ರಲ್ಲಿ ನಡೆದ ಅಪಘಾತಗಳಲ್ಲಿ 12327 ಜನರು ಪ್ರಾಣ ಕಳೆದುಕೊಂಡಿದ್ದರೆ 52531 ಮಂದಿ ಗಾಯಗೊಂಡಿದ್ದಾರೆ. 11608 ಘೋರ ಅಪಘಾತ ಪ್ರಕರಣಗಳು ಮತ್ತು 31832 ಸಾಮಾನ್ಯ ಅಪಘಾತ ಪ್ರಕರಣಗಳು ವರದಿಯಾಗಿರುವ ಬಗ್ಗೆ ‘ಎಕ್ಸ್‌’ ಖಾತೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT