ಬುಧವಾರ, ಆಗಸ್ಟ್ 4, 2021
27 °C
ಮುಳಬಾಗಿಲು ತಾಲ್ಲೂಕು ಕೆರೆಗಳಲ್ಲಿ ತುಂಬಿದೆ ಮುಳ್ಳು ಗಿಡಗಳು, ರಾಜಕಾಲುವೆ ಮಾಯ

ನೆಪಮಾತ್ರಕ್ಕೆ ಕೆರೆ ಒತ್ತುವರಿ ತೆರವು

ಜಿ.ವಿ.ಪುರುಷೋತ್ತಮ ರಾವ್ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿನ 365 ಹಳ್ಳಿಗಳು ಕೆರೆಯ ಆಶ್ರಯ ಪಡೆದಿವೆ. ಒಂದು ಕೆರೆ ಮತ್ತೊಂದು ಕೆರೆಗೆ ಕೊಂಡಿಯಂತಿದ್ದು, ಒಂದು ಕೆರೆ ತುಂಬಿದೊಡನೆ ಅಲ್ಲಿನ ನೀರು ಮುಂದಿನ ಕೆರೆಗೆ ಹೋಗುತ್ತದೆ.

- ಇದು ಮೂವತ್ತು ವರ್ಷದ ಹಿಂದಿನ ಮಾತು.

ಏಕೆಂದರೆ ಇಂದು ಗ್ರಾಮಗಳಲ್ಲಿ ರಾಜಕಾಲುವೆಗಳು ಮಾಯವಾಗಿವೆ. ಕೆರೆಗಳು ಒತ್ತುವರಿಯಾಗಿವೆ. ಕೆರೆ ನೀರು ಹರಿಯುವ ಮೂಲಗಳು ಸಹ ಒತ್ತುವರಿಗೆ ಗುರಿಯಾಗಿವೆ. ರಾಜಕಾಲುವೆಗಳ ಮೇಲೆ ಮನೆಗಳು ಎದ್ದು ನಿಂತಿವೆ. ಕೆಲವೆಡೆ ಕೃಷಿ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಇನ್ನು ಕೆಲ ಕೆರೆಗಳಲ್ಲಿ ಮುಳ್ಳು ಗಿಡಗಳು ತುಂಬಿವೆ. ಇದು ಗ್ರಾಮೀಣ ಭಾಗದ ಕೆರೆಯ ಸ್ಥಿತಿ.

ಇನ್ನು ನಗರ ಪ್ರದೇಶಗಳ ಕೆರೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ನಗರಕ್ಕೆ ಹೊಂದಿಕೊಂಡಂತೆ ಹತ್ತು ಕೆರೆಗಳಿದ್ದು, ಅವು ಕೂಡ ಅತಿಕ್ರಮಕ್ಕೆ ಗುರಿಯಾಗಿವೆ. ಕೆಲವೆಡೆ ಕೊಳಚೆ ನೀರು ಕೆರೆಗಳಿಗೆ ಹರಿಸುವ ಕಾರಣ ದುರ್ನಾತ ಬೀರುತ್ತ ಸೊಳ್ಳೆಗಳ ಆವಾಸ ತಾಣವಾಗಿ ಮಾರ್ಪಟ್ಟಿವೆ.

ನಗರದ ಇಂಡ್ಲಕೆರೆ, ಕೊಲಿಮಿಕುಂಟೆ ಕೆರೆಗಳ ಅಚ್ಚುಕಟ್ಟು ನಾಪತ್ತೆ ಆಗಿದ್ದು, ನೀರು ಕಲುಷಿತಗೊಂಡಿದೆ. ಜೀವಜಲ ತುಂಬುತ್ತಿದ್ದ ಕೆರೆ ಈಗ ವಿಷದ ಗುಂಡಿಯಾಗಿದೆ. ಇನ್ನು ಸೋಮೇಶ್ವರಪಾಳ್ಯ ಕೆರೆಯ ಅರ್ಧ ಭಾಗವನ್ನು ವಾಯುವಿಹಾರ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು ಬಳಸಿಕೊಳ್ಳಲಾಯಿತು. ಈಗ ಅಲ್ಲಿ ತಲೆ ಎತ್ತಿದ ಪಾರ್ಕ್‌ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.

ಕೆರೆಗಳ ಒಟ್ಟು ವಿಸ್ತೀರ್ಣ ಕಂದಾಯ ಇಲಾಖೆಯ ಲೆಕ್ಕಪತ್ರಕ್ಕೆ ಮಾತ್ರ ಸೀಮಿತವಾಗಿದೆ. ಇಲಾಖೆ ತನಿಖಾ ಪಟ್ಟಿ ತಯಾರಿಸಿ 50 ವರ್ಷವಾಗಿದೆ!

2014ರಲ್ಲಿ ಮೊದಲ ಹಂತದಲ್ಲಿ ಕೆರೆ ಒತ್ತುವರಿ ತೆರವು ಮಾಡಿಸಲು ವಿಸ್ತೀರ್ಣವನ್ನು ಸರ್ವೆ ಮಾಡಿಸಲಾಯಿತು. ನಂತರ ಒತ್ತುವರಿಯಾದ ಸ್ಥಳಗಳಲ್ಲಿ ಹಳ್ಳ ತೋಡಿಸಲಾಯಿತು. ಇದಕ್ಕೆ ಒತ್ತುವರಿದಾರರಿಂದ ಯಾವುದೇ ಪ್ರತಿರೋಧ ಉಂಟಾಗಲಿಲ್ಲ. ಏಕೆಂದರೆ ‘ಹಳ್ಳ ಎರಡು ಮಳೆಗೆ ಮುಚ್ಚಿ ಹೋಗುತ್ತದೆ. ಅಷ್ಟು ಮಾತ್ರಕ್ಕೆ ಪ್ರತಿರೋಧವೇಕೆ’ ಎಂಬುದು ಬಹುಪಾಲು ಒತ್ತುವರಿದಾರರ ಅಭಿಪ್ರಾಯ ವಾಗಿತ್ತು.

ಕೆಲವು ಕಡೆ ಕೆರೆಯ ಮೂಲಕ ನೀರು ಹರಿಯುವ ಸ್ಥಳಗಳೂ ಒತ್ತುವರಿಯಾಗಿವೆ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಬೆರಳಿಣಿಕೆಯಷ್ಟು ಕೆರೆಗಳು ಅಭಿವೃದ್ಧಿ ಹೊಂದಿವೆ. ಹೂಳು ಎತ್ತುವುದರಿಂದ ಹಿಡಿದು ಪ್ರತಿಯೊಂದು ಜವಾಬ್ದಾರಿಯನ್ನು ಕೆರೆ ಅಭಿವೃದ್ಧಿ ಸಮಿತಿಗೆ ನೀಡಲಾಗಿದ್ದು, ಕೆಲವೊಂದು ಕೆರೆಗಳನ್ನು ಅಭಿವೃದ್ಧಿ ಪಡಿಸಿರುವುದು ಬಿಟ್ಟರೆ ಸರ್ಕಾರದ ಸಣ್ಣ ನೀರಾವರಿ ಇಲಾಖೆ ಹಿಡಿತದಲ್ಲಿರುವ ಕೆರೆಗಳ ಪರಿಸ್ಥಿತಿ ಚಿಂತಾಜನಕ ವಾಗಿದೆ.

‘ರಾಜಕಾಲುವೆ ಒತ್ತುವರಿ ತೆರವಿಗೆ ಹಿಂದೆ ಸರ್ಕಾರ ಹಲವಾರು ಕಠಿಣ ಕ್ರಮಕ್ಕೆ ಮುಂದಾಗಿತ್ತು. ಆದರೆ, ಅದು ಮುಂದಕ್ಕೆ ಸಾಗಲಿಲ್ಲ. ಕೆರೆಗಳನ್ನು ಉಳಿಸಿಕೊಳ್ಳಲು ಸರ್ಕಾರದ ಇಲಾಖೆ ಗಳಷ್ಟೇ ಅಲ್ಲ ಅಲ್ಲಿನ ಸ್ಥಳೀಯರು ರಕ್ಷಣೆಗೆ ಮುಂದಾಗಬೇಕು’ ಎಂದು ರೈತ ಮುಖಂಡ ಗೋಪಾಲ್ ಅಭಿಪ್ರಾಯಪಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು