ಗುರುವಾರ , ಮಾರ್ಚ್ 23, 2023
31 °C
ಪಕ್ಷದ ನಾಯಕ ರಾಹುಲ್‌ ಗಾಂಧಿ ಸೂಚನೆಗೆ ತಲೆಬಾಗಿದ ನಾಯಕ

ವಿಧಾನಸಭೆ ಚುನಾವಣೆ | ಕೋಲಾರದಿಂದಲೂ ಸಿದ್ದರಾಮಯ್ಯ ‘ವಲಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಅಣಿಯಾಗಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಅವರ ಸೂಚನೆಯಂತೆ ತಮ್ಮ ನಿರ್ಧಾರದಿಂದ ದಿಢೀರ್‌ ಹಿಂದಕ್ಕೆ ಸರಿದಿದ್ದಾರೆ. ಅವರು ಮತ್ತೆ ವರುಣಾ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ನಂತರ ಸಿದ್ದರಾಮಯ್ಯ ಅವರನ್ನು ಪಕ್ಕದ ಕೊಠಡಿಗೆ ಕರೆಸಿಕೊಂಡ ರಾಹುಲ್‌, ಕೋಲಾರದಿಂದ ಸ್ಪರ್ಧೆ ಮಾಡಬೇಡಿ ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ.

ತಮ್ಮ ಪರಮಾಪ್ತ ಪಡೆಯ ಸಲಹೆ ಹಾಗೂ ಹಲವು ಸುತ್ತಿನ ಸಮೀಕ್ಷೆಗಳ ಬಳಿಕ ‘ಸುರಕ್ಷಿತ ಕ್ಷೇತ್ರ’ವೆಂದು ಖಾತರಿಯಾದ ಬಳಿಕವೇ ಕೋಲಾರದಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ನಿರ್ಧರಿಸಿದ್ದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಶನಿವಾರ ಬೆಳಿಗ್ಗೆ ಸಿದ್ದರಾಮಯ್ಯ ಉಪಾಹಾರ ಸೇವಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹಿರಿಯ ಮುಖಂಡ ಕೆ.ಎಚ್‌. ಮುನಿಯಪ್ಪ, ಕೋಲಾರ ಗ್ರಾಮಾಂತರ ಪ್ರದೇಶದಲ್ಲಿ ಭಾನುವಾರ ನಿಗದಿಯಾಗಿದ್ದ ಸಭೆಯ ಕುರಿತು ನೆನಪಿಸಿದರು. ಆಗ ಸಿದ್ದರಾಮಯ್ಯ ಜೋರಾಗಿ, ‘ಕೋಲಾರಕ್ಕೆ ನಾನು ನಾಳೆ ಬರುವುದಿಲ್ಲ. ಅಲ್ಲಿ ಸ್ಪರ್ಧೆ ಮಾಡದಂತೆ ರಾಹುಲ್‌ ಹೇಳಿದ್ದಾರೆ’ ಎಂದು ಪ್ರತಿಕ್ರಿಯಿಸಿದರು. ‘ನಿಮ್ಮ ಗೆಲುವಿಗೆ ನಾವೆಲ್ಲ ಜತೆಗೂಡಿ ಕೆಲಸ ಮಾಡುತ್ತೇವೆ’ ಎಂದು ಮುನಿಯಪ್ಪ ಮನವೊಲಿಸಲು ಯತ್ನಿಸಿದರು. ‘ರಾಹುಲ್‌ ಗಾಂಧಿ ಹೇಳಿದ ಮೇಲೆ ಮುಗಿಯಿತು’ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಶುಕ್ರವಾರದ ಸಭೆಯಲ್ಲಿ ನನ್ನ ಟಿಕೆಟ್‌ ಅಂತಿಮ ಆಗಿಲ್ಲ’ ಎಂದರು. 

ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯದವರು ಹೆಚ್ಚಿರುವ ಕೋಲಾರ ಕ್ಷೇತ್ರವು ಅತ್ಯಂತ ಸುರಕ್ಷಿತ ಎಂದು ಸಿದ್ದರಾಮಯ್ಯ ಭಾವಿಸಿದ್ದರು. ಅಹಿಂದ ಮತಗಳು ನಿರ್ಣಾಯಕ ಸಂಖ್ಯೆಯಲ್ಲಿರುವುದರಿಂದ ಗೆಲುವು ಸುಲಭ ಎಂಬುದು ಸಿದ್ದರಾಮಯ್ಯ ಬಣದ ಲೆಕ್ಕಾಚಾರವಾಗಿತ್ತು. ‘ಸಿದ್ದರಾಮಯ್ಯ ಕೋಲಾರದಿಂದ ವರುಣಾ ಕ್ಷೇತ್ರಕ್ಕೆ ಓಡಿ ಹೋಗಲಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ತಿಂಗಳ ಹಿಂದೆಯೇ ವ್ಯಂಗ್ಯವಾಗಿ ಹೇಳಿದ್ದರು. 

ಹತ್ತು ಹಲವು ಸವಾಲು– ನಿಲುವು ಬದಲು
* ಕ್ಷೇತ್ರದಲ್ಲಿ ಒಕ್ಕಲಿಗರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗ ಸಮುದಾಯದ ಉದ್ಯಮಿ ಸಿಎಂಆರ್ ಶ್ರೀನಾಥ್‌ ಪಕ್ಷದ ಅಭ್ಯರ್ಥಿ ಎಂದು ಜೆಡಿಎಸ್‌ ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರ ನಡೆಸಿದರೆ ಸಿದ್ದರಾಮಯ್ಯ ಗೆಲುವಿಗಾಗಿ ಬೆವರು ಸುರಿಸಬೇಕಾಗುತ್ತದೆ. ಜತೆಗೆ, ‘ಒಕ್ಕಲಿಗ ವಿರೋಧಿ ಹಣೆಪಟ್ಟಿ’ ಸಿದ್ದರಾಮಯ್ಯ ಅವರಿಗೆ ‘ಕೈ’ ಕೊಡಬಹುದು ಎಂಬ ಆತಂಕವೂ ಕಾರಣ.

* 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯ ಅವರಿಗೆ ಸೋಲಿನ ರುಚಿ ತೋರಿಸಿದ್ದವು. ಕರ್ನಾಟಕ ಕಾಂಗ್ರೆಸ್‌ ಪಾಲಿಗೆ ಸಿದ್ದರಾಮಯ್ಯ ಅವರೇ ಸ್ಟಾರ್‌ ಪ್ರಚಾರಕರು. ಕೋಲಾರದಲ್ಲಿ ವಿಪಕ್ಷಗಳು ‘ಚಕ್ರವ್ಯೂಹ’ ಹೆಣೆದರೆ ಇತರ ಕ್ಷೇತ್ರಗಳ ಪ್ರಚಾರದ ಕಡೆಗೆ ಗಮನಹರಿಸಲು ಸಿದ್ದರಾಮಯ್ಯ ಅವರಿಗೆ ಕಷ್ಟವಾಗಬಹುದು ಎಂಬ ಲೆಕ್ಕಾಚಾರವೂ ನಿಲುವು ಬದಲಿಸಲು ಕಾರಣ.

* ಈ ಕ್ಷೇತ್ರದಲ್ಲಿ 2004ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದೇ ಕೊನೆ. ಮತ್ತೆ ಈ ಕ್ಷೇತ್ರದಲ್ಲಿ ’ಕೈ’ ಪಕ್ಷಕ್ಕೆ ಗೆಲುವು ಒಲಿದಿಲ್ಲ. ಬರೋಬ್ಬರಿ 18 ವರ್ಷಗಳಾಗಿದ್ದು, ತಳಮಟ್ಟದಲ್ಲಿ, ಬೂತ್‌ ಹಂತದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಕೊರತೆಯೂ ಇದೆ.

* ಈ ಹಿಂದೆ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ವರ್ತೂರು ಪ್ರಕಾಶ್‌ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಿದ್ದರಾಮಯ್ಯ ಅವರಂತೆ ವರ್ತೂರು ಕೂಡ ಕುರುಬ ಸಮುದಾಯದವರು. ಹೀಗಾಗಿ, ವರ್ತೂರು ಸ್ಪರ್ಧಿಸಿದರೆ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೆಲ ಮುಖಂಡರು ಸಿದ್ದರಾಮಯ್ಯ ವಿರುದ್ಧ ‘ದಲಿತ ಮತದಾರರ ಜಾಗೃತಿ ಅಭಿಯಾನ’ ಆರಂಭಿಸಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಕರಪತ್ರ ಹಂಚಿದ್ದಾರೆ. 2013ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಡಾ.ಜಿ. ಪರಮೇಶ್ವರ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್‌. ಮುನಿಯಪ್ಪ ಸೋಲಿಗೆ ಸಿದ್ದರಾಮಯ್ಯ ಬಣದ ಕೆಲವು ಮುಖಂಡರೇ ಕಾರಣ ಎಂಬುದು ‘ಕೈ’ ಪಡೆಯ ಪಡಸಾಲೆಯಲ್ಲಿ ಬಲವಾಗಿ ಕೇಳಿಬರುವ ಮಾತು. ಇದು ಸಹ ಸಿದ್ದರಾಮಯ್ಯ ಅವರಿಗೆ ಮುಳುವಾಗಬಹುದು ಎಂಬುದು ಸಹ ನಿರ್ಧಾರ ಬದಲಿಸಲು ಕಾರಣ. 

ಗೋವಿಂದ ಗೌಡ ಕಣಕ್ಕೆ?
ಸಿದ್ದರಾಮಯ್ಯ ನಿಲುವು ಬದಲಿಸಿದ ಬೆನ್ನಲ್ಲೇ, ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಅವರನ್ನು ಕೋಲಾರದಿಂದ ಕಣಕ್ಕೆ ಇಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನ ಆರಂಭಿಸಿದ್ದಾರೆ.

ಶಿಡ್ಲಘಟ್ಟದಿಂದ ಈ ಸಲ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅಲ್ಲಿನ ಶಾಸಕ ವಿ.ಮುನಿಯಪ್ಪ, ಗೋವಿಂದ ಗೌಡ ಸ್ಪರ್ಧೆ ಮಾಡುವರು ಎಂದು ಈಗಾಗಲೇ ಘೋಷಿಸಿದ್ದಾರೆ. ಶಿಡ್ಲಘಟ್ಟಕ್ಕೆ ಗೋವಿಂದ ಗೌಡ ಹೆಸರನ್ನು ಪಕ್ಷದ ಟಿಕೆಟ್‌ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ಅವರಿಗೆ ಟಿಕಟ್‌ ನೀಡಲು ಕೇಂದ್ರ ಚುನಾವಣಾ ಸಮಿತಿ ಒಪ್ಪಿಗೆ ಕೊಟ್ಟಿದೆ. 

ಇದರ ನಡುವೆ, ಶುಕ್ರವಾರ ರಾ‌ತ್ರಿ 10.45ಕ್ಕೆ ಗೋವಿಂದ ಗೌಡ ಅವರಿಗೆ ಕರೆ ಮಾಡಿದ ಶಿವಕುಮಾರ್‌, ಕೋಲಾರದಿಂದ ಸ್ಪರ್ಧಿಸಲು ಸಜ್ಜಾಗಿರುವಂತೆ ಸೂಚಿಸಿದರು. ಇದಕ್ಕೆ ಗೋವಿಂದ ಗೌಡ ಒಪ್ಪಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ. ‘ಹೈಕಮಾಂಡ್ ಸೂಚಿಸಿದರೆ ಕೋಲಾರದಿಂದ ಕಣಕ್ಕೆ ಇಳಿಯುತ್ತೇನೆ’ ಎಂದು ಗೋವಿಂದ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಾಹುಲ್‌ ಜೊತೆ ಮತ್ತೊಮ್ಮೆ ಚರ್ಚಿಸುತ್ತೇನೆ’
ಬೆಂಗಳೂರು
: ‘ರಾಹುಲ್ ಗಾಂಧಿಗೆ ನಮ್ಮ ಪಕ್ಷದವರೇ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸಿದ್ದಾರೆ’ ಎಂದು ಕೋಲಾರ ಜಿಲ್ಲೆಯ ಕೆಲವು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸಕ್ಕೆ ಶನಿವಾರ ಬಂದ ನಾಯಕರಿಗೆ ಸಿದ್ದರಾಮಯ್ಯ, ‘ರಾಹುಲ್‌ ಗಾಂಧಿಯ ಸಲಹೆಯಂತೆ ಕೋಲಾರದ ಅಖಾಡದಿಂದ ಹಿಂದೆಸರಿಯಲು ನಿರ್ಧರಿಸಿದ್ದೇನೆ’ ಎಂದರು. ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಸ್ತುವಾರಿ ಉಪಾಧ್ಯಕ್ಷರಾದ ಎಂ.ಆರ್‌. ಸೀತಾರಾಮ್‌, ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹ್ಮದ್‌, ಅನಿಲ್‌ ಕುಮಾರ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

‘‌ಖುದ್ದು ರಾಹುಲ್ ಗಾಂಧಿ ಅವರೇ ಕೋಲಾರ ಕ್ಷೇತ್ರ ಸುರಕ್ಷಿತವಲ್ಲ ಎಂದಿದ್ದಾರೆ. ಹೈಕಮಾಂಡ್ ನಾಯಕರ ಮಾತಿಗೆ ಒಪ್ಪಿಕೊಂಡು ಬಂದಿದ್ದೇನೆ. ಆದರೆ, ಕೋಲಾರ ಕ್ಷೇತ್ರದ ಬಗ್ಗೆ ನನಗೆ ತುಂಬಾ ವಿಶ್ವಾಸ ಇದೆ. ಯಾವ ಆಧಾರದಲ್ಲಿ ಕ್ಷೇತ್ರ ಸುರಕ್ಷಿತವಲ್ಲ ಎಂದು ರಾಹುಲ್ ಅವರಿಗೆ ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ. ರಾಹುಲ್ ಗಾಂಧಿ ಜೊತೆ ಮತ್ತೊಮ್ಮೆ ಚರ್ಚಿಸುತ್ತೇನೆ’ ಎಂದು ತಮ್ಮ ಆಪ್ತರಿಗೆ ಸಿದ್ದರಾಮಯ್ಯ ಹೇಳಿದ್ದಾರೆ.

**

ಕೋಲಾರದ ಸ್ಪರ್ಧೆ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ. ಅವರ ತೀರ್ಮಾನದ ಪ್ರಕಾರ ಮುನ್ನಡೆಯುತ್ತೇನೆ.
–ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು