ಮಂಗಳವಾರ, ಏಪ್ರಿಲ್ 20, 2021
27 °C
ಅಜಾತ ಶತ್ರುವಿನ ಮಾತಿನ ಮೋಡಿಗೆ ಜಿಲ್ಲೆಯ ಜನ ಮಂತ್ರಮುಗ್ಧ

‘ಚಿನ್ನದೂರಿನ’ ಜತೆ ‘ಅಟಲ್‌’ ನಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ದೇಶ ರಾಜಕಾರಣದ ಅಜಾತ ಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರಿಗೂ ಜಿಲ್ಲೆಗೂ ಎಲ್ಲಿಲ್ಲದ ನಂಟು. ಅವರು ‘ಚಿನ್ನದೂರಿಗೆ’ ಭೇಟಿ ನೀಡಿ ಮಾಡಿದ ಮಾತಿನ ಮೋಡಿಯ ನೆನಪು ಜಿಲ್ಲೆಯ ಜನಮಾನಸದಲ್ಲಿ ಇನ್ನೂ ಹಸಿರಾಗಿದೆ.

ಜನಾನುರಾಗಿ ವಾಜಪೇಯಿ ಅವರು ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಜನ ಇಂದಿಗೂ ಸ್ಮರಿಸುತ್ತಾರೆ. ಪಕ್ಷ ಸಂಘಟನೆಗಾಗಿ 1980ರಲ್ಲಿ ಜಿಲ್ಲೆಗೆ ಬಂದಿದ್ದ ವಾಜಪೇಯಿ ‘ಚಿನ್ನದೂರು’ ಕೆಜಿಎಫ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾಡಿದ್ದ ಭಾಷಣವು ಸಭಿಕರನ್ನು ಮಂತ್ರಮುಗ್ಧವಾಗಿಸಿತ್ತು. ಜಿಲ್ಲಾ ಕೇಂದ್ರದ ನಗರಸಭೆ (ಹಿಂದಿನ ಪುರಸಭೆ) ಆವರಣದ ರೋಟರಿ ಭವನದ ವೇದಿಕೆಯಲ್ಲಿ ಜನಸಂಘದ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದರು.

1983ರಲ್ಲಿ ಮತ್ತೊಮ್ಮೆ ಜಿಲ್ಲೆಗೆ ಬಂದಿದ್ದ ವಾಜಪೇಯಿ ಪಕ್ಷ ಸಂಘಟನೆ ಸಭೆಯಲ್ಲಿ ಗಂಟೆಗಟ್ಟಲೇ ನಿರರ್ಗಳವಾಗಿ ಮಾತನಾಡಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದರು ಎಂದು ಬಿಜೆಪಿ ಮುಖಂಡರು ನೆನೆಯುತ್ತಾರೆ.

ವಾಜಪೇಯಿ 1991ರಲ್ಲಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಪ್ಪ ಪರ ಜಿಲ್ಲೆಯ ವಿವಿಧೆಡೆ ಪ್ರಚಾರ ನಡೆಸಿದ್ದರು. ‘ಪಕ್ಷದಿಂದ ಕಣಕ್ಕಿಳಿದಿರುವ ಹನುಮಪ್ಪ ಒಳ್ಳೆಯ ಮೇಷ್ಟ್ರು. ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ’ ಎಂದು ಮತ ಯಾಚಿಸಿದ್ದರು. ರಾಜಕೀಯ ಭಾಷಣಕ್ಕಷ್ಟೇ ಸೀಮಿತವಾಗದೆ ಜಿಲ್ಲೆಯ ಆಗುಹೋಗುಗಳನ್ನು ಪ್ರಸ್ತಾಪಿಸಿದ್ದ ಅವರ ವಾಕ್ಚಾತುರ್ಯವನ್ನು ಸ್ಥಳೀಯರು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ.

‘ಪಕ್ಷದ ಹಿರಿಯ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ, ರಾಮಚಂದ್ರಗೌಡ ಅವರು ವಾಜಪೇಯಿ ಅವರೊಂದಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ವಾಜಪೇಯಿ ಭಾಷಣವು ಸಭಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತ್ತು’ ಎಂದು ಹನುಮಪ್ಪ ಚುನಾವಣಾ ಪ್ರಚಾರ ಸಭೆಯ ನೆನಪು ಮೆಲುಕು ಹಾಕಿದರು.

ಪವರ್‌ ಗ್ರಿಡ್‌ ಕೊಡುಗೆ: ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಪವರ್‌ ಗ್ರಿಡ್‌ ಮಂಜೂರಾಗಿತ್ತು. ಗುಜರಾತ್‌ನಿಂದ 2,500 ಮೆಗಾ ವಾಟ್‌ ವಿದ್ಯುತ್‌ ಅನ್ನು ಕೋಲಾರದ ಪವರ್‌ ಗ್ರಿಡ್‌ಗೆ ಸರಬರಾಜು ಮಾಡಿ ದಕ್ಷಿಣ ಭಾರತದ ರಾಜ್ಯಗಳಿಗೆ ಹಂಚಿಕೆ ಮಾಡಲು ಈ ಯೋಜನೆ ಆರಂಭಿಸಲಾಯಿತು.

ಕೋಲಾರ ತಾಲ್ಲೂಕಿನ ಅರಹಳ್ಳಿ ಬಳಿ ನಿರ್ಮಾಣವಾದ ಪವರ್ ಗ್ರಿಡ್ ಉದ್ಘಾಟನೆಗಾಗಿ ವಾಜಪೇಯಿ 2003ರ ಫೆ.14ರಂದು ಜಿಲ್ಲೆಗೆ ಬಂದಿದ್ದರು. ಪವರ್‌ ಗ್ರಿಡ್‌ ಸ್ಥಾಪನೆಗಾಗಿ 250 ಎಕರೆ ಕೃಷಿ ಭೂಮಿ ಬಿಟ್ಟು ಕೊಟ್ಟ ರೈತರಿಗೆ ವಾಜಪೇಯಿ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್ಚಿನ ಭೂಪರಿಹಾರ ಘೋಷಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

‘ವಾಜಪೇಯಿ ಅವರು ಪವರ್‌ ಗ್ರಿಡ್‌ ಉದ್ಘಾಟನೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಇಳಿಸುವ ಉದ್ದೇಶಕ್ಕೆ ಪವರ್‌ ಗ್ರಿಡ್‌ ಪಕ್ಕದ ಜಮೀನಿನಲ್ಲಿ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ಆ ಕ್ಷಣ ಇನ್ನೂ ನೆನಪಿದೆ’ ಎಂದು ಪವರ್‌ ಗ್ರಿಡ್‌ ಭದ್ರತಾಧಿಕಾರಿ ವೆಂಕಟೇಶ್‌ ಸ್ಮರಿಸುತ್ತಾರೆ.

ನಾಮಫಲಕ ತೆರವು: ಪವರ್‌ ಗ್ರಿಡ್‌ನ ನಾಮಫಲಕದಲ್ಲಿ ತಮ್ಮ ಹೆಸರು ಹಾಕದ ಸಂಗತಿಯನ್ನು ಸಂಸದ ಕೆ.ಎಚ್‌.ಮುನಿಯಪ್ಪ ಕಾರ್ಯಕ್ರಮಕ್ಕೂ ಮುನ್ನ ದೆಹಲಿಯಲ್ಲಿ ವಾಜಪೇಯಿ ಅವರ ಗಮನಕ್ಕೆ ತಂದಿದ್ದರು. ನಂತರ ವಾಜಪೇಯಿ ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ, ನಾಮಫಲಕದಲ್ಲಿ ಕ್ಷೇತ್ರದ ಸಂಸದರ ಹೆಸರಿಲ್ಲದೆ ಪವರ್‌ ಗ್ರಿಡ್‌ ಉದ್ಘಾಟಿಸಬಾರದೆಂದು ಖಡಕ್‌ ಸೂಚನೆ ನೀಡಿದ್ದರು. ಇದರಿಂದ ಗಲಿಬಿಲಿಯಾದ ಅಧಿಕಾರಿಗಳು ಉದ್ಘಾಟನೆಗೆ ಸಿದ್ಧವಾಗಿದ್ದ ನಾಮಫಲಕ ತೆರವುಗೊಳಿಸಿ, ಮುನಿಯಪ್ಪರ ಹೆಸರಿರುವ ಹೊಸ ನಾಮಫಲಕ ಅಳವಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.