ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಬಿಪಿಎಲ್‌ ಕಾರ್ಡ್‌: ತಿಂಗಳ ಗಡುವು

ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್‌ ಪ್ರಕರಣಕ್ಕೆ ಸಿದ್ಧತೆ
Last Updated 12 ಜೂನ್ 2020, 16:21 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಬಿಪಿಎಲ್‌ ಪಡಿತರ ಚೀಟಿ ಹಿಂದಿರುಗಿಸದಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಕೆಲ ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಅಧಿಕಾರಿಗಳು, ನೌಕರರು ಮತ್ತು ಅವರ ಅವಲಂಬಿತರು ಬಿಪಿಎಲ್‌ ಪಡಿತರ ಚೀಟಿಯ ಫಲಾನುಭವಿಗಳಾಗಿ ನಿಯಮಬಾಹಿರವಾಗಿ ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಇವರಿಗೆ ಕಾನೂನು ಕ್ರಮದ ಬಿಸಿ ಮುಟ್ಟಿಸಲು ಸರ್ಕಾರ ನಿರ್ಧರಿಸಿದೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿವೆ. ಆದರೆ, ಆರ್ಥಿಕವಾಗಿ ಸದೃಢರಾಗಿರುವ ಸಾಕಷ್ಟು ಸರ್ಕಾರಿ ನೌಕರರು ಕದ್ದುಮುಚ್ಚಿ ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದಾರೆ. ಕೆಲ ಸರ್ಕಾರಿ ನೌಕರರು ಕುಟುಂಬ ಸದಸ್ಯರ ಹೆಸರಿನಲ್ಲಿ ಬೇನಾಮಿಯಾಗಿ ಬಿಪಿಎಲ್‌ ಕಾರ್ಡ್‌ ಮಾಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪಡಿತರ ದುರ್ಬಳಕೆ ತಡೆಗಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯು ಆದೇಶ ಹೊರಡಿಸಿ ಬಿಪಿಎಲ್ ಪಡಿತರ ಚೀಟಿ ಹಿಂದಿರುಗಿಸುವಂತೆ ಸೂಚಿಸಿತ್ತು. ಅಲ್ಲದೇ, ರಾಜ್ಯದಲ್ಲಿ ಸುಮಾರು 40 ಸಾವಿರ ಪಡಿತರ ಚೀಟಿ ರದ್ದುಪಡಿಸಿತ್ತು.

ಆ ನಂತರವೂ ಕೆಲ ಸರ್ಕಾರಿ ನೌಕರರು ಪಡಿತರ ಚೀಟಿ ಹಿಂದಿರುಗಿಸದೆ ನಿಯಮಬಾಹಿರವಾಗಿ ಪಡಿತರ ಪಡೆಯುತ್ತಿರುವ ಬಗ್ಗೆ ಇಲಾಖೆಗೆ ದೂರು ಬಂದಿವೆ. ಸರ್ಕಾರಿ ನೌಕರರು ಸರ್ಕಾರದ ವೇತನ ಮತ್ತು ಭತ್ಯೆ ಪಡೆಯುವುದರಿಂದ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ. ಈ ಕಾರಣಕ್ಕೆ ಬಿಪಿಎಲ್ ಪಡಿತರ ಚೀಟಿ ಹಿಂದಿರುಗಿಸಲು ಸರ್ಕಾರಿ ನೌಕರರಿಗೆ ಇಲಾಖೆಯು ಇದೀಗ ಒಂದು ತಿಂಗಳ ಗಡುವು ನೀಡಿದೆ.

ನಷ್ಟ ವಸೂಲಿ: ಸರ್ಕಾರಿ ನೌಕರರು ಸ್ವಇಚ್ಛೆಯಿಂದ ಜುಲೈ ಒಳಗೆ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಿ ರದ್ದು ಮಾಡಿಸಬಹುದು. ನಿಗದಿತ ಗಡುವಿನೊಳಗೆ ಪಡಿತರ ಚೀಟಿ ಹಿಂದಿರುಗಿಸದ ಬಗ್ಗೆ ದೂರು ಬಂದರೆ ಅಂತಹ ಸರ್ಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸುತ್ತೇವೆ. ಪಡಿತರ ರೂಪದಲ್ಲಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡುತ್ತೇವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT