ಶನಿವಾರ, ಜುಲೈ 24, 2021
27 °C
ಬಾಲ್ಯಾವಸ್ಥೆ ಪ್ರಮುಖ ಘಟ್ಟ: ಜಿಲ್ಲಾಧಿಕಾರಿ ಸತ್ಯಭಾಮ ಅಭಿಪ್ರಾಯ

ಕೋಲಾರ: ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಲು ಬಡತನವೇ ಮೂಲ ಕಾರಣ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿ, ‘ಮನುಷ್ಯನ ಜೀವನದಲ್ಲಿ ಬಾಲ್ಯಾವಸ್ಥೆ, ಯೌವ್ವನ, ವೃದ್ಧಾಪ್ಯ ಮತ್ತು ವಾನಪ್ರಸ್ಥ ಎಂಬ 4 ಘಟ್ಟಗಳಿವೆ. ಇದರಲ್ಲಿ ಬಾಲ್ಯಾವಸ್ಥೆಯು ಪ್ರಮುಖ ಘಟ್ಟ’ ಎಂದರು.

‘ಇದರಿಂದ ಮಗು ತನ್ನ ಬಾಲ್ಯಾವಸ್ಥೆ ಕಳೆದುಕೊಳ್ಳುತ್ತದೆ. ಅನಕ್ಷರಸ್ಥ ಮತ್ತು ಬಡ ಕುಟುಂಬಗಳಲ್ಲಿ ಬಾಲಕಾರ್ಮಿಕ ಪದ್ಥತಿ ಹೆಚ್ಚಾಗಿ ಕಾಣಬಹುದು. ಬಾಲಕಾರ್ಮಿಕ ಪದ್ಧತಿ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜೂನ್ 12ರಂದು ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಲಾಗುತ್ತದೆ’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರವು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ 2016ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿತು. ಇದರ ಪ್ರಕಾರ 1 ವರ್ಷದಿಂದ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡರೆ ಅವರಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಬಡ ಪೋಷಕರು ಆರ್ಥಿಕ ಸಂಕಷ್ಟದ ಕಾರಣಕ್ಕೆ ಮಕ್ಕಳನ್ನು ಶಾಲೆ ಬಿಡಿಸಿ ದುಡಿಮೆಗೆ ಕಳುಹಿಸುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಬದುಕು ಹಾಳಾಗುತ್ತಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕು. ಸಮಾಜದಲ್ಲಿ ಎಲ್ಲಾದರೂ ಬಾಲ ಕಾರ್ಮಿಕರನ್ನು ಕಂಡರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಮೂಲ ಗ್ರಂಥ: ‘ಸಂವಿಧಾನವು ಭಾರತಕ್ಕೆ ಮೂಲ ಗ್ರಂಥ. ಸಂವಿಧಾನವು ಬಾಲ ಕಾರ್ಮಿಕ ಪದ್ಥತಿ ತಡೆಗೆ ಅನೇಕ ಕಾನೂನು ನೀಡಿದೆ. 1986ರಲ್ಲಿ ಬಾಲ ಕಾರ್ಮಿಕ ಪದ್ಥತಿ ವಿರುದ್ಧ ಕಾನೂನು ಜಾರಿಯಾಯಿತು. ಈ ಕಾಯ್ದೆಯ 21ಎ ವಿಧಿ ಪ್ರಕಾರ 6 ವರ್ಷದಿಂದ 14 ವರ್ಷದೊಳಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಇದು ಸರ್ಕಾರದ ಜವಾಬ್ದಾರಿ’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್‌ ತಿಳಿಸಿದರು.

‘ಬಾಲ್ಯ ಜೀವನವು ಅಮೂಲ್ಯವಾದದ್ದು. ಅದು ಮುಗ್ಧತೆ ಮತ್ತು ಸರಳತೆಯ ಪ್ರತೀಕವಾಗಿದೆ. ಅಂತಹ ಮುಗ್ಧತೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿ ಮಗುವು ಶಿಕ್ಷಣ ಪಡೆದರೆ ದೇಶವು ಅಭಿವೃದ್ಧಿ ರಾಷ್ಟ್ರವಾಗಿ, ವಿಶ್ವಕ್ಕೆ ಮಾದರಿಯಾಗುತ್ತದೆ. ಪ್ರತಿ ನಾಗರೀಕರು ಬಾಲ ಕಾರ್ಮಿಕ ಪದ್ಧತಿ ತೊಡೆದು ಹಾಕಲು ಸರ್ಕಾರದೊಂದಿಗೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್‌.ಗಂಗಾಧರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಡಿಡಿಪಿಐ ಕೆ.ರತ್ನಯ್ಯ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು