ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | 18 ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ, ಅಡುಗೆ ಸಿಬ್ಬಂದಿ ಅಮಾನತು

ಹಾಸ್ಟೆಲ್‌ನಲ್ಲಿ ದೋಸೆ ತಿಂದು 18 ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ | ‘ಪ್ರಜಾವಾಣಿ’ ವರದಿ ಉಲ್ಲೇಖ; ಅಡುಗೆ ಸಿಬ್ಬಂದಿ ಅಮಾನತು
Published 10 ಆಗಸ್ಟ್ 2024, 15:19 IST
Last Updated 10 ಆಗಸ್ಟ್ 2024, 15:19 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ವೇಮಗಲ್‌ ಹೋಬಳಿಯ ಅಮ್ಮನಲ್ಲೂರು ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ದೋಸೆ ತಿಂದು 18 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಸಿಬ್ಬಂದಿ ನರಸಿಂಹಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್‌ ಕುಮಾರ್‌ ಶನಿವಾರ ಈ ಕ್ರಮ ವಹಿಸಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಆಗಸ್ಟ್‌ 10ರಂದು ಪ್ರಕಟವಾಗಿದ್ದ ‘ದೋಸೆ ತಿಂದು 18 ಮಕ್ಕಳು ಅಸ್ವಸ್ಥ’ ವರದಿಯನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ನರಸಿಂಹಪ್ಪ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದ್ದು, ಇಲಾಖಾ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಘಟನೆ ಕುರಿತು ಆಯುಕ್ತರಿಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್‌ ಪತ್ರ ಬರೆದಿದ್ದರು.

‘ಹಾಸ್ಟೆಲ್‌ನ ವಾರ್ಡನ್‌ ಗುರುಶಾಂತಪ್ಪ ರಜೆ ಮೇಲೆ ತೆರಳಿದ್ದಾರೆ. ಅಡುಗೆ ಸಿಬ್ಬಂದಿ ನರಸಿಂಹಪ್ಪ ಅವರೇ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವುದು ಕಂಡುಬಂದಿದೆ. ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಿಲ್ಲ. ವಿದ್ಯಾರ್ಥಿಗಳನ್ನು ನಿಂದಿಸುವುದು, ಹೊಡೆಯುವುದು ಕಂಡು ಬಂದಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ಶುಕ್ರವಾರ ಬೆಳಿಗ್ಗೆ ದೋಸೆ ಚಟ್ನಿ ತಿಂದ ಐವರು ವಾಂತಿ ಮಾಡಿಕೊಂಡಿದ್ದರು. ಇನ್ನು ಕೆಲವರು ಹೊಟ್ಟೆ ನೋವಿನಿಂದ ಬಳಲಿದ್ದರು. ವಾಂತಿ ಮಾಡಿಕೊಂಡ ಐವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಹಾಗೂ ಉಳಿದ 13 ಮಂದಿಯನ್ನು ಅಮ್ಮನಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಎರಡು ದಿನಗಳ ಹಿಂದಿನ ಅನ್ನವನ್ನು ದೋಸೆ ಹಿಟ್ಟಿಗೆ ಬೆರೆಸಿದ್ದರು ಎಂದು ಮಕ್ಕಳು ದೂರಿದ್ದರು.

ಚಿಂತಾಮಣಿಯ ಆಸ್ಪತ್ರೆಯಲ್ಲಿ ಮಕ್ಕಳಿಗೆ ಶನಿವಾರವೂ ಚಿಕಿತ್ಸೆ ನೀಡಿದ್ದು, ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಅಲ್ಲಿಗೆ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದರು. ಸಂಜೆ ವೇಳೆ ಮಕ್ಕಳು ಚೇತರಿಸಿಕೊಂಡು ಮನೆಗೆ ತೆರಳಿದರು.

ಶಾಸಕರು ಹಾಸ್ಟೆಲ್‌ಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ, ವರ್ಗಾವಣೆ ಮಾಡಲು ಸೂಚಿಸಿದರು.

ಸಹಾಯಕ ನಿರ್ದೇಶಕರಿಗೆ ನೋಟಿಸ್‌

ಸಮಾಜ ಕಲ್ಯಾಣ ಇಲಾಖೆ ಕೋಲಾರ ತಾಲ್ಲೂಕಿನ ಸಹಾಯಕ ನಿರ್ದೇಶಕ ಡಿ.ಚನ್ನಬಸಪ್ಪ ಅವರಿಗೆ ನೋಟಿಸ್‌ ನೀಡಲಾಗಿದೆ. ಕರ್ತವ್ಯ ಲೋಪವೆಸಗಿದ್ದು, ತಮ್ಮ ಮೇಲೆ ಏಕೆ ಶಿಸ್ತು ಕ್ರಮ ವಹಿಸಬಾರದೆಂದು 15 ದಿನಗಳೊಳಗೆ ಸಮಜಾಯಿಷಿ ನೀಡುವಂತೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಈ ಸಂಬಂಧವೂ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿದ್ದಾರೆ.

‘ಹಾಸ್ಟೆಲ್‌ನ ವಾರ್ಡನ್‌ ರಜೆ ಇದ್ದಾಗ ಮತ್ತೊಬ್ಬ ವಾರ್ಡನ್‌ಗೆ ಪ್ರಭಾರದಲ್ಲಿ ನಿಯೋಜಿಸಬೇಕಿತ್ತು. ಅದನ್ನು ಬಿಟ್ಟು ಅಡುಗೆ ಸಿಬ್ಬಂದಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ, ಹಾಸ್ಟೆಲ್‌ಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಗಮನ ಹರಿಸಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT