ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಲೋಕಸಭೆ ಕ್ಷೇತ್ರ: ಗೊಂದಲದಲ್ಲಿ ಕಾಂಗ್ರೆಸ್‌; ಚಟುವಟಿಕೆಗಳು ಬಹುತೇಕ ಸ್ತಬ್ಧ

Published 19 ಮಾರ್ಚ್ 2024, 6:02 IST
Last Updated 19 ಮಾರ್ಚ್ 2024, 6:02 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಗಳಲ್ಲಿ ಕೋಲಾರ ಕ್ಷೇತ್ರವನ್ನು 2019ರವರೆಗೆ ಭದ್ರಕೋಟೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಈಗ ಗೊಂದಲದಲ್ಲಿ ಮುಳುಗಿದೆ. ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿದ್ದು ಅವರು ಆ ಕಡೆ, ಇವರು ಕಡೆ ಎಂಬಂಥ ಪರಿಸ್ಥಿತಿ ನೆಲೆಸಿದೆ.

1952ರಿಂದ ಬಹುತೇಕ ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವುದು ಸಹಜವಾಗಿಯೇ ಅಚ್ಚರಿ ಮೂಡಿಸಿದೆ. ಅಭ್ಯರ್ಥಿ ವಿಚಾರದಲ್ಲಿ ಸತತ ಎಂಟು ಚುನಾವಣೆಗಳಲ್ಲಿ ಕೆ.ಎಚ್‌.ಮುನಿಯಪ್ಪ ಅವರಿಗೆ ಸಡ್ಡು ಹೊಡೆಯುವವರೇ ಇರಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿನ ಒಳ ಏಟಿನಿಂದ ಸೋಲು, ನಂತರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಉದ್ಭವಿಸಿದ ಬಣಗಳ ಕಿತ್ತಾಟ, ಎಡ–ಬಲ ಸಮುದಾಯದ ಗೊಂದಲ, ಮುಖಂಡರ ನಡುವಿನ ಅಸಹನೆ, ವೈಮನಸ್ಯ ಪಕ್ಷದ ವಿಶ್ವಾಸವನ್ನೇ ಕಿತ್ತುಕೊಂಡಿರುವಂತಿದೆ. ಈ ಬಾರಿ ಅಭ್ಯರ್ಥಿ ಆಯ್ಕೆ ವಿಚಾರವೂ ಕಗ್ಗಂಟಾಗಿದೆ. 

ನಾಮಪತ್ರ ಸಲ್ಲಿಕೆ ಕೊನೆಗೊಳ್ಳಲು ಕೇವಲ 17 ದಿನ ಬಾಕಿ ಇದ್ದು, ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಈ ಪಕ್ಷದಲ್ಲಿ ಆರಂಭವಾದಂತೆ ಕಾಣುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಪದಾಧಿಕಾರಿಗಳು, ಪರಾಜಿತ ಶಾಸಕರು, ಮುಖಂಡರು ಒಟ್ಟುಗೂಡಿ ಸಭೆ ನಡೆಸಿದ್ದು ಇಲ್ಲವೇ ಇಲ್ಲ. ರಾಜ್ಯಮಟ್ಟದ ಮುಖಂಡರ ಸಮ್ಮುಖದಲ್ಲಿ ತಿಂಗಳ ಹಿಂದೆ ನಡೆದ ಸಭೆಯೂ ಹೊಡೆದಾಟದಲ್ಲಿ ಅಂತ್ಯಗೊಂಡಿತ್ತು.

ಹಾಗೇ ನೋಡಿದರೆ ಕ್ಷೇತ್ರದಲ್ಲಿ 2019ರಲ್ಲಿ ಮೊದಲ ಬಾರಿ ಗೆದ್ದಿರುವ ಬಿಜೆಪಿಯಲ್ಲಿ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡರೂ, ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಸಂಘಟನೆ ಆಗದಿದ್ದರೂ, ಒಳಜಗಳ ಇದ್ದರೂ, ಟಿಕೆಟ್‌ಗೆ ಲಾಭಿ ನಡೆಯುತ್ತಿದ್ದರೂ ಬಹಿರಂಗವಾಗಲು ಬಿಡುತ್ತಿಲ್ಲ. ಪ್ರತಿಭಟನೆ ಆಗಲಿ, ಹಿಂದೂವಾದದ ಸಮರ್ಥನೆ ವಿಚಾರವಾಗಲಿ ಬಂದಾಗ ಎಲ್ಲರೂ ಒಟ್ಟುಗೂಡುವುದು, ಸಭೆ‌ಗಳಲ್ಲಿ ಒಗ್ಗಟ್ಟು ಪ್ರದರ್ಶಿಸುವುದು ಕಂಡುಬರುತ್ತಿದೆ.

ಇನ್ನು ಜೆಡಿಎಸ್‌ 1984ರ ನಂತರ ಈ ಲೋಕಸಭಾ ಕ್ಷೇತ್ರದಲ್ಲೇ ಗೆದ್ದೇ ಇಲ್ಲ. ಆದರೂ ಈ ಪಕ್ಷದ ಸ್ಥಳೀಯ ಮುಖಂಡರು ಆಗಾಗ್ಗೆ ಸಭೆ ನಡೆಸುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿ ತಾವೇನೂ ಹಿಂದೆ ಬಿದ್ದಿಲ್ಲ ಎಂಬುದನ್ನು ತೋರಿಸಿಕೊಳ್ಳುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಗೆದ್ದಿರುವುದು ಸಹಜವಾಗಿಯೇ ಈ ಪಕ್ಷದಲ್ಲಿ ಬಲತುಂಬಿದೆ. ಹೀಗಾಗಿಯೇ, ಈ ಬಾರಿ ಕ್ಷೇತ್ರದ ಟಿಕೆಟ್‌ ಕೇಳಿದ್ದಾರೆ. ಅಲ್ಲದೇ, ಜೆಡಿಎಸ್‌ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂದು ಕ್ಷೇತ್ರದ ಮುಖಂಡರೆಲ್ಲರೂ ಒಗ್ಗಟ್ಟಾಗಿ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದಾರೆ.  

ಆದರೆ, ಕಾಂಗ್ರೆಸ್‌ನಲ್ಲಿ ಮಾತ್ರ ಮನೆಯೊಂದು ಮೂರು ಬಾಗಿಲು ಎಂಬಂಥ ಪರಿಸ್ಥಿತಿ ಇದೆ. ಬಣಗಳ ಮುಖಂಡರಲ್ಲಿ ಮಾತ್ರವಲ್ಲ; ಕಾರ್ಯಕರ್ತರ ನಡುವೆಯೂ ಗೋಡೆ ಸೃಷ್ಟಿಯಾದಂತಿದೆ. ಕಾಂಗ್ರೆಸ್‌ ಭವನದಲ್ಲಿ ಸಭೆ ನಡೆದರೆ ಜಗಳವಿಲ್ಲದೆ ಹೊರಬರುವುದು ವಿರಳವಾಗಿದೆ.

ಅದರಲ್ಲೂ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಸಚಿವ ಕೆ.ಎಚ್‌.ಮುನಿಯಪ್ಪ ಬೆಂಬಲಿಗರ ಮೇಲೆ ಬಹಿರಂಗವಾಗಿ ಮುಗಿಬಿದ್ದಿದ್ದಾರೆ. ‘ಇಷ್ಟು ದಿನ ಸುಮ್ಮನಿದ್ದೆ, ಇನ್ನು ಸುಮ್ಮನಿರಲ್ಲ’ ಎಂದು ಕೊತ್ತೂರು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಡೂಪ್ಲಿಕೇಟ್‌ ಕಾಂಗ್ರೆಸ್ಸಿಗರು ಎಂದು ವಾಗ್ದಾಳಿ ನಡೆಸಿದ್ದಾರೆ. ಇತ್ತ ಮುನಿಯಪ್ಪ ಬೆಂಬಲಿಗರು, ‘ಕೆಲವರಿಗೆ ಕಾಂಗ್ರೆಸ್‌ ಸಿದ್ಧಾಂತವೇ ಗೊತ್ತಿಲ್ಲ. ನಾವೆಲ್ಲಾ ಪಕ್ಷ ಕಟ್ಟಿದವರು, ನಿಷ್ಠಾವಂತ ಕಾರ್ಯಕರ್ತರು’ ಎನ್ನುತ್ತಾ ತಿರುಗೇಟು ನೀಡುತ್ತಿದ್ದಾರೆ. ಇನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಅಸಹಾಯಕರಾಗಿದ್ದಾರೆ. 

ಈ ಎಲ್ಲಾ ವಿಚಾರ ಗಮನಿಸುತ್ತಿರುವ ಆಹಾರ ಸಚಿವ ಮುನಿಯಪ್ಪ ಕ್ಷೇತ್ರದ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ಅಪರೂಪಕ್ಕೊಮ್ಮೆ ಕೋಲಾರಕ್ಕೆ ಬಂದು ದೇಗುಲಗಳಿಗೆ ಭೇಟಿ ನೀಡಿ ತಮ್ಮ ಬೆಂಬಲಿಗರನ್ನು ಮಾತನಾಡಿ ಹೋಗುತ್ತಿದ್ದಾರೆ. ಸತತ ಏಳು ಲೋಕಸಭೆ ಚುನಾವಣೆಗಳಲ್ಲಿ ಗೆದ್ದಿರುವ ಹಾಗೂ ಬರೋಬ್ಬರಿ 30 ವರ್ಷ ಕಾಲ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದ ಅವರು, ಈ ಬಾರಿ ಟಿಕೆಟ್‌ ವಿಚಾರದಲ್ಲಿ ಹೈಕಮಾಂಡ್‌ ನಿಲುವಿಗೆ ಬದ್ಧ ಎನ್ನುತ್ತಿದ್ದಾರೆ. ಸಚಿವರಾಗಿರುವ ಕಾರಣ ಟಿಕೆಟ್‌ ವಿಚಾರದಲ್ಲಿ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಬದಲಾಗಿ ಅಳಿಯ, ಪುತ್ರ ಅಥವಾ ಪುತ್ರಿಗೆ ಟಿಕೆಟ್‌ ಕೊಡುವಂತೆ ಕೇಳಿರುವುದು ಗೊತ್ತಾಗಿದೆ. 

ಇನ್ನು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರಿಗೆ ಆರಂಭಿಕ ಚುನಾವಣೆಯಿಂದ ಈ ವರೆಗೆ ಕೋಲಾರ ಕ್ಷೇತ್ರದಲ್ಲಿ ಟಿಕೆಟ್‌ ನೀಡಿಲ್ಲವೆಂದು ಕೂಗು ಎದ್ದಿದೆ. ಕೊತ್ತೂರು ಮಂಜುನಾಥ್‌ ಕೂಡ ಇದಕ್ಕೆ ಧ್ವನಿಗೂಡಿಸುತ್ತಿದ್ದಾರೆ. ಇದು ಎಡಗೈ ಸಮುದಾಯದ ಮುನಿಯಪ್ಪ ಬೆಂಬಲಿಗರಲ್ಲಿ ಸಹಜವಾಗಿಯೇ ಅಸಮಾಧಾನ ಮೂಡಿಸಿದೆ. ಹೀಗಾಗಿ, ಈ ಬಾರಿ ಚುನಾವಣೆಯಲ್ಲಿ ಮತ್ತೆ ಬಣಗಳ ಭಿನ್ನಮತ ಸ್ಫೋಟವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಿದ್ದೂ, ಪಕ್ಷದ ಹೈಕಮಾಂಡ್‌ ಯಾವುದೇ ಕ್ರಮ ವಹಿಸಿದೆ ಮೌನವಾಗಿದೆ ಎಂಬುದು ಪಕ್ಷದ ಕಾರ್ಯಕರ್ತರ ದೂರು.

ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌

ಚುನಾವಣೆ ಹಾಗೂ ಟಿಕೆಟ್‌ ವಿಚಾರದಲ್ಲಿ ಎಲ್ಲಾ ಪಕ್ಷದಲ್ಲಿ ಗೊಂದಲ ಸಹಜ. ಸದ್ಯದಲ್ಲಿ ಎಲ್ಲವೂ ಸರಿ ಹೋಗಲಿದೆ ಮತದಾರರು ನಮ್ಮ ಪರ ಇದ್ದಾರೆ

- ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೋಲಾರ

ಸ್ಥಳೀಯವಾಗಿ ಅಭ್ಯರ್ಥಿಗಳಿಗೂ ಬರ!

ಕೆ.ಎಚ್‌.ಮುನಿಯಪ್ಪ ಹೊರತುಪಡಿಸಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದಾದ ಸಮರ್ಥ ಹಾಗೂ ಸ್ಥಳೀಯ ಅಭ್ಯರ್ಥಿಯೇ ಇಲ್ಲದಂಥ ಪರಿಸ್ಥಿತಿಯನ್ನು ಕಾಂಗ್ರೆಸ್‌ ತಂದಿಟ್ಟುಕೊಂಡಿದೆ. ಮುನಿಯಪ್ಪ ಹೊರತುಪಡಿಸಿ ಈಗ ಟಿಕೆಟ್‌ಗೆ ಮುಂಚೂಣಿಯಲ್ಲಿರುವ ಹಲವಾರು ಹೆಸರು ಹೊರಗಿನವರದ್ದು. ಅದು ಎಲ್‌.ಹನುಮಂತಯ್ಯ ಇರಬಹುದು ಡಾ.ಮುದ್ದು ಗಂಗಾಧರ್‌ ಆಗಿರಬಹುದು. ಸ್ಥಳೀಯವಾಗಿ ನಾಯಕರನ್ನು ಬೆಳೆಸುವಲ್ಲಿ ಪಕ್ಷ ವಿಫಲವಾಗಿದೆಯೇ ಎಂಬು ಪ್ರಶ್ನೆಯೂ ಉದ್ಭವಿಸುತ್ತಿದೆ. ಇದು ಕಾರ್ಯಕರ್ತರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT