ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ: ಟಿಕೆಟ್‌ ಕೇಳಲು ಎಲ್ಲರಿಗೂ ಹಕ್ಕಿದೆ– ಎಸ್‌.ಮುನಿಸ್ವಾಮಿ

ಕೋಲಾರ ಕ್ಷೇತ್ರ: ಯಾರಿಗೆ ಟಿಕೆಟ್‌ ಸಿಕ್ಕರೂ ಒಗ್ಗಟ್ಟಿನ ಹೋರಾಟ–ಸಂಸದ
Published 4 ಫೆಬ್ರುವರಿ 2024, 15:38 IST
Last Updated 4 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಕ್ಷೇತ್ರದ ಟಿಕೆಟ್‌ ಯಾರಿಗೆ ಕೊಡಬೇಕೆಂಬ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ. ಅದಕ್ಕೆ ನಾನು ಬದ್ಧ. ನಮ್ಮಲ್ಲಿ ಲಾಬಿ ಮಾಡುವ ಸಂಸ್ಕೃತಿ ಇಲ್ಲ. ಯಾರು ಕೆಲಸ ಮಾಡಿರುತ್ತಾರೋ ಅವರಿಗೆ ಪಕ್ಷ ಟಿಕೆಟ್‌ ಕೊಡುತ್ತಾರೆ. ಎಲ್ಲಾ ಕ್ಷೇತ್ರಗಳ ಮಾಹಿತಿ ಹೈಕಮಾಂಡ್‌ ಬಳಿ ಇದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಭಾನುವಾರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷದಲ್ಲಿ ಕೆಲವರು ಟಿಕೆಟ್‌ ವಿಚಾರವಾಗಿ ಮಾತನಾಡಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ. ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್‌ ಕೇಳುವ ಹಕ್ಕು ಇರುತ್ತದೆ. ನಮಗೆ ಟಿಕೆಟ್‌ ಸಿಕ್ಕರೆ ಜೆಡಿಎಸ್‌ನವರು ಬಿಜೆಪಿ ಪರ ಕೆಲಸ ಮಾಡಬೇಕು. ಜೆಡಿಎಸ್‌ಗೆ ಟಿಕೆಟ್‌ ಸಿಕ್ಕರೆ ಬಿಜೆಪಿ ಅವರ ಪರ ಕೆಲಸ ಮಾಡಬೇಕು’ ಎಂದರು.

ಕೋಲಾರ ಸೇರಿದಂತೆ ರಾಜ್ಯಕ್ಕೆ ಬಜೆಟ್‌ನಲ್ಲಿ ಪ್ರಮುಖ ಯೋಜನೆ ಲಭಿಸಿಲ್ಲ ಎಂಬ ಕಾಂಗ್ರೆಸ್‌ ಟೀಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ತಮ್ಮ ಮನೆಗೆ ಎತ್ತಿಕೊಂಡು ಹೋಗುವ ಯಾವುದೇ ಯೋಜನೆಯನ್ನು ನಾವು ಕೊಟ್ಟಿಲ್ಲ. ಬದಲಾಗಿ ಜನಸಾಮಾನ್ಯರಿಗೆ ಏನು ಸಿಗಬೇಕೋ ಅದು ಬಜೆಟ್‌ನಲ್ಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದುಕೊಳ್ಳಲು ಕಾಂಗ್ರೆಸ್‌ಗೆ ಮತ ನೀಡದಿದ್ದರೆ ಗ್ಯಾರೆಂಟಿ ನಿಲ್ಲಿಸುವುದಾಗಿ ಆ ಪಕ್ಷದ ಶಾಸಕರೇ ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿಗಳು ನಿಲ್ಲುವುದು ಖಚಿತ. ಈಗಲೂ ಬಹಳ ಮಂದಿಗೆ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ’ ಎಂದು ದೂರಿದರು.

ಪ್ರತ್ಯೇಕ ದೇಶ ಕುರಿತು ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗೆ, ‘ದೇಶದ ಅಖಂಡತೆ, ಐಕ್ಯತೆ ಎತ್ತಿ ಹಿಡಿಯುವುದಾಗಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುತ್ತೇವೆ. ಆದರೆ, ಕಾಂಗ್ರೆಸ್‌ನವರದ್ದು ಒಡೆದು ಆಳುವ ನೀತಿ. ನೆಹರೂ, ಇಂದಿರಾ ಗಾಂಧಿ ಕಾಲದಿಂದಲೂ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಜೊತೆ ಹೊಂದಾಣಿಕೆ ಮಾಡಿಕೊಂಡೇ ಬಂದಿದ್ದಾರೆ. ಹೀಗಾಗಿ, ದಕ್ಷಿಣ ಭಾರತ, ಉತ್ತರ ಭಾರತ ವಿಭ್ಭಾಗ ಮಾಡಬೇಕೆಂದು ಈಗ ಸುರೇಶ್‌ ಮಾತನಾಡುತ್ತಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದರು.

‘ಫೆ.7ರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ನಾವೂ 303 ಸಂಸದರಿದ್ದೇವೆ, ಪ್ರತಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT