ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಪತ್ತೆ ಹಚ್ಚಿದ ಶ್ವಾನ

ಒಂದೂವರೆ ಕಿ.ಮೀ ಕ್ರಮಿಸಿ ಗಿಡಗಳ ಮಧ್ಯೆ ಅಡಗಿದ್ದ ವ್ಯಕ್ತಿಯ ಪತ್ತೆ
Published 12 ಆಗಸ್ಟ್ 2023, 13:21 IST
Last Updated 12 ಆಗಸ್ಟ್ 2023, 13:21 IST
ಅಕ್ಷರ ಗಾತ್ರ

ಕೋಲಾರ: ಕೊಲೆ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪೊಲೀಸ್ ಶ್ವಾನವು ಆರೋಪಿಯನ್ನು ಪತ್ತೆ ಹಚ್ಚಿದ್ದು, ಪೊಲೀಸರ ಹಾಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕೋಲಾರ ಜಿಲ್ಲಾ ಅಪರಾಧ ವಿಭಾಗದ ‘ರಕ್ಷಾ’ ಹೆಸರಿನ ಶ್ವಾನವೇ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ನೆರವಾಗಿದೆ. ಮುಳಬಾಗಿಲು ತಾಲ್ಲೂಕು ಬೇವಹಳ್ಳಿ ಬಳಿ ಸುರೇಶ್ ಎಂಬುವರ ಕೊಲೆ ನಡೆದಿತ್ತು. ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಪತ್ತೆಗಾಗಿ ಜಿಲ್ಲಾ ಶ್ವಾನದಳದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ಬೆರಳು ಮುದ್ರೆ ತಜ್ಞರು, ಎಫ್‌ಎಸ್‌ಎಲ್‌ ತಜ್ಞರನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ನಂಗಲಿ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಪ್ರದೀಪ್‌ ಸಿಂಗ್‌ ಮತ್ತು ತಂಡದವರು ತನಿಖೆಯ ನೇತೃತ್ವ ವಹಿಸಿದ್ದರು.

ಶ್ವಾನವು ಕೊಲೆ ನಡೆದ ಬೇವಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು 1.5 ಕಿ.ಮೀ ದೂರದಲ್ಲಿ ಮರ ಗಿಡಗಳ ಮಧ್ಯೆ ಅವಿತು ಕುಳಿತ್ತಿದ್ದ ಆರೋಪಿಯ ಮುಂದೆ ಹೋಗಿ ನಿಂತುಕೊಂಡಿದೆ.

ತನಿಖಾ ತಂಡವು ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಕೊಲೆ ಕೃತ್ಯ ಎಸಗಿರುವುದು ಬಯಲಾಗಿದೆ. ಆರೋಪಿಯನ್ನು ಗುರುತು ಹಿಡಿಯುವಲ್ಲಿ ಯಶಸ್ವಿಯಾಗಿರುವ ಶ್ವಾನ ‘ರಕ್ಷಾ’ ಕಾರ್ಯ ವೈಖರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಶ್ಲಾಘಿಸಿದ್ದಾರೆ.

ಈ ಶ್ವಾನವು ಹಲವಾರು ವರ್ಷಗಳಿಂದ ಪೊಲೀಸ್‌ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಅಪರಾಧ ಪ್ರಕರಣ ಪತ್ತೆ ಹಚ್ಚಲು ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT