ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರಮ್ಮ ಕೆರೆ: ಕಳೆ ಗಿಡ ತೆರವಿಗೆ ಮನವಿ

ಕೆರೆಯ ಮೂಲ ಸ್ವರೂಪ ಬದಲು: ರೈತ ಸಂಘ ಸದಸ್ಯರ ಅಸಮಾಧಾನ
Last Updated 15 ನವೆಂಬರ್ 2021, 17:01 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕೇಂದ್ರದ ಕೋಲಾರಮ್ಮ ಕೆರೆಯಲ್ಲಿನ ಕಳೆ ಗಿಡಗಳನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಇಲ್ಲಿ ಸೋಮವಾರ ತಹಶೀಲ್ದಾರ್‌ ವಿಲಿಯಂ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಕೋಲಾರಮ್ಮ ಕೆರೆಯು ಕೋಲಾರ ನಗರದ ನೀರಿನ ಮೂಲವಾಗಿದೆ. ಈ ಕೆರೆಯು ಸುಮಾರು 699 ಎಕರೆ ವಿಸ್ತಾರವಾಗಿದ್ದು, ಕಳೆ ಗಿಡಗಳಿಂದ ಕೆರೆಯ ಮೂಲ ಸ್ವರೂಪ ಬದಲಾಗಿದೆ. ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ತುಂಬಾ ವರ್ಷಗಳ ನಂತರ ಉತ್ತಮ ಮಳೆಯಾಗಿ ಈ ಕೆರೆ ಭರ್ತಿಯಾಗಿದೆ. ಆದರೆ, ಕಳೆ ಗಿಡಗಳಿಂದ ಕೆರೆ ನೀರು ಕಲುಷಿತವಾಗುತ್ತಿದೆ’ ಎಂದು ಸಂಘದ ಸದಸ್ಯರು ಬೇಸರ ವ್ಯಕ್ತಪಡಿಸಿದರು.

‘ಕೋಲಾರಮ್ಮ ಕೆರೆಯು 2003ರಲ್ಲಿ ತುಂಬಿ ಕೋಡಿ ಹರಿದಿತ್ತು. ನಂತರ 18 ವರ್ಷಗಳಿಂದ ಕೆರೆ ತುಂಬಿರಲಿಲ್ಲ. ಹೀಗಾಗಿ ಕೆರೆಯ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಸಮಸ್ಯೆಯಾಗಿತ್ತು. ಇದೀಗ ಮಳೆ ನೀರಿನ ಜತೆಗೆ ಕೆ.ಸಿ ವ್ಯಾಲಿ ನೀರು ಹರಿದು ಬಂದಿರುವುದರಿಂದ ಕೆರೆ ಭರ್ತಿಯಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಸಣ್ಣ ನೀರಾವರಿ ಇಲಾಖೆ ಮಾಹಿತಿ ಪ್ರಕಾರ ಕೋಲಾರಮ್ಮ ಕೆರೆಯ ಅಚ್ಚುಕಟ್ಟು ಪ್ರದೇಶ 789 ಎಕರೆ ಮತ್ತು ನೀರು ಮುಳುಗಡೆ ಪ್ರದೇಶ 699 ಎಕರೆ ಇದೆ. ಕಳೆ ಗಿಡಗಳು ಹಾಗೂ ಹೂಳಿನಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಕಳೆ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಹೀರಿಕೊಳ್ಳುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ’ ಎಂದು ತಿಳಿಸಿದರು.

ಜಿಲ್ಲಾಡಳಿತ ವಿಫಲ: ‘ಕೆರೆ ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಜನಪ್ರತಿನಿಧಿಗಳಿಗೂ ಈ ಬಗ್ಗೆ ಕಾಳಜಿಯಿಲ್ಲ. ಅನಾವೃಷ್ಟಿ ಸಂದರ್ಭದಲ್ಲಿ ಮೋಡ ಬಿತ್ತನೆಗೆ ನೂರಾರು ಕೋಟಿ ಖರ್ಚು ಮಾಡುವ ಜಿಲ್ಲಾಡಳಿತವು ಯಾವುದೇ ಖರ್ಚು ವೆಚ್ಚವಿಲ್ಲದೆ ಭರ್ತಿಯಾಗಿರುವ ಕೆರೆಯ ನೀರನ್ನು ಸಂರಕ್ಷಣೆ ಮಾಡಲು ನಿರ್ಲಕ್ಷ್ಯ ತೋರಿದೆ. ಶಿಥಿಲಗೊಂಡಿರುವ ಕೆರೆಯ ಕಟ್ಟೆ ದುರಸ್ತಿ ಮಾಡಲು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ’ ಎಂದು ಸಂಘಟನೆ ಸದಸ್ಯರು ದೂರಿದರು.

‘ಕಳೆ ಗಿಡಗಳಿಂದ ಪ್ರತಿನಿತ್ಯ ನೀರು ವ್ಯರ್ಥವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆರೆಯಲ್ಲಿನ ನೀರು ಸಂಪೂರ್ಣ ಖಾಲಿಯಾಗುವ ಆತಂಕವಿದೆ. ಆದ ಕಾರಣ ಕಳೆ ಗಿಡಗಳನ್ನು ತೆರವುಗೊಳಿಸಬೇಕು. ನೀರು ವ್ಯರ್ಥವಾಗದಂತೆ ಸಂರಕ್ಷಣೆ ಮಾಡಬೇಕು. ಶಿಥಿಲಗೊಂಡಿರುವ ಕೆರೆಯ ಕಟ್ಟೆಯನ್ನು ದುರಸ್ತಿ ಮಾಡಿಸಬೇಕು’ ಎಂದು ಕೋರಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಇ.ಮಂಜುನಾಥ್‌, ಯಲ್ಲಣ್ಣ, ಆಂಜಿನಪ್ಪ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT